ರಾಯ್ಪುರ: ಮುಂಬೈ ಇಂಡಿಯನ್ಸ್ ಎದುರು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್‌ಗೆ (Bhuvneshwar Kumar) ಭಾರತ ಟಿ20 ತಂಡದಲ್ಲಿ ಪುನಃ ಸ್ಥಾನ ನೀಡಬೇಕೆಂದು ಸ್ಪಿನ್ ದಂತಕತೆ ರವಿಚಂದ್ರನ್ ಅಶ್ವಿನ್ (R Ashwin) ಆಗ್ರಹಿಸಿದ್ದಾರೆ. ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಭುವನೇಶ್ವರ್ ಕುಮಾರ್ ಅವರು ನಾಲ್ಕು ಓವರ್‌ಗಳಲ್ಲಿ 23 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ನಂತರ 167 ರನ್‌ಗಳ ಚೇಸಿಂಗ್‌ನಲ್ಲಿ ಕೊನೆಯ 3 ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿದ್ದರು. ನಂತರ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಟೂರ್ನಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಕಬಳಿಸಿರುವ ಭುವಿ ಸದ್ಯ ಪರ್ಪಲ್ ಕ್ಯಾಪ್ ಅನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ.
ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ನಿಯಂತ್ರಣ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಆರ್ ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಸೀಮ್ ಬೌಲರ್‌ಗಳಿಗೆ ನೆರವಾದ ಕಠಿಣ ಪಿಚ್‌ನಲ್ಲಿಯೂ ಭುವನೇಶ್ವರ್ ತೋರಿದ ಶಿಸ್ತುಬದ್ಧ ಬೌಲಿಂಗ್ ಅಶ್ವಿನ್ ಅವರನ್ನು ಆಕರ್ಷಿಸಿತು. ಇದೀಗ, ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಭಾರತ ತಂಡಕ್ಕೆ ಸೇರಿಸಬೇಕೆಂದು ಅಭಿಮಾನಿಗಳು ಆಗ್ರಹಿಸಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಈ ವರ್ಷ ಅವರ ಟೆಸ್ಟ್ ಶೈಲಿಯ ಬೌಲಿಂಗ್ ತಂಡಕ್ಕೆ ಮಹತ್ವದ ಯಶಸ್ಸು ತಂದುಕೊಟ್ಟಿದೆ ಎಂದು ಅವರು ಉಲ್ಲೇಖಿಸಿದರು.
RCB vs MI: ʻ4 ವಿಕೆಟ್ ಪಡೆದಿದ್ದು ವಿಶೇಷ ಎನ್ನಿಸಲಿಲ್ಲ, ಸಿಕ್ಸರ್ ಅನ್ನು ಆನಂದಿಸಿದ್ದೇನೆʼ-ಭುವನೇಶ್ವರ್ ಕುಮಾರ್
ಜಿಯೊ ಹಾಟ್‌ಸ್ಟಾರ್ ʻಮ್ಯಾಚ್ ಸೆಂಟರ್ ಲೈವ್ʼ ಜೊತೆ ಮಾತನಾಡಿದ ಆರ್ ಅಶ್ವಿನ್, "ಹ್ಯಾಷ್ ಟ್ಯಾಗ್ ʻಬ್ರಿಂಗ್ ಬ್ಯಾಕ್ ಭುವಿʼ, ಅವರನ್ನು ಮತ್ತೆ ಟಿ20 ಭಾರತ ತಂಡಕ್ಕೆ ಪರಿಗಣಿಸುವುದನ್ನು ನಾನು ಖಂಡಿತವಾಗಿ ನೋಡಲು ಇಷ್ಟಪಡುತ್ತೇನೆ. ಹೊಸ ಚೆಂಡಿನೊಂದಿಗೆ ಅದ್ಭುತವಾಗಿ ಬೌಲ್ ಮಾಡುತ್ತಾರೆ, ಡೆತ್ ಓವರ್‌ಗಳನ್ನು ಪರಿಣಾಮಕಾರಿಯಾಗಿ ಮುಗಿಸುವ ಸಾಮರ್ಥ್ಯವೂ ಅವರಿಗಿದೆ. ಒತ್ತಡದ ಕ್ಷಣದಲ್ಲಿ ಒಂದು ಸಿಕ್ಸರ್ ಅಗತ್ಯವಿದ್ದರೂ ಅದನ್ನೂ ಅವರು ಕಠಿಣ ಭಾಗದಲ್ಲೇ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಪಿಚ್‌ನಲ್ಲಿ ಸಹಾಯ ಇದೆ ಎಂಬುದನ್ನು ಅರಿತ ನಂತರ ಅವರು ತೋರಿದ ಬೌಲಿಂಗ್ ನಿಜವಾದ ಟೆಸ್ಟ್ ಪಂದ್ಯದ ಮಟ್ಟದ ಬೌಲಿಂಗ್ ಆಗಿತ್ತು. ಆರಂಭಿಕ ಬ್ಯಾಟರ್ ಆಗಿರುವ ನಿಮ್ಮನ್ನು ಅವರು ನಿರಂತರವಾಗಿ ಪರೀಕ್ಷಿಸುತ್ತಲೇ ಇರುತ್ತಾರೆ,” ಎಂದು ಹೇಳಿದ್ದಾರೆ.
ಇದೇ ವೇಳೆ ಭುವನೇಶ್ವರ್ ಕುಮಾರ್ ಅವರು ಕೊನೆಯದಾಗಿ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ ರಾಷ್ಟ್ರೀಯ ತಂಡದಿಂದ ಹೊರಗಿದ್ದರೂ, ಈ ಐಪಿಎಲ್ ಸೀಸನ್‌ನಲ್ಲಿ ಅವರು ತೋರಿದ ಸ್ಥಿರ ಪ್ರದರ್ಶನ ಮತ್ತೆ ಭಾರತ ತಂಡಕ್ಕೆ ಮರಳುವ ಸಾಧ್ಯತೆಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.
ʻಕೆಲವು ಗಾಯದ ಗುರುತುಗಳು ಹೋರಾಟಕ್ಕೆ ಯೋಗ್ಯ ಪುರಾವೆಯಾಗಿವೆʼ: ಕೃಣಾಲ್ ಪಾಂಡ್ಯ ಇನ್‌ಸ್ಟಾಗ್ರಾಮ್ ಸ್ಟೋರಿ!
ಮುಂಬೈ ಇಂಡಿಯನ್ಸ್‌ನಲ್ಲಿ ಪ್ರಯೋಗಕ್ಕೆ ಮುಂದಾದ ಸುನೀಲ್ ಗವಾಸ್ಕರ್
ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಅಧಿಕೃತವಾಗಿ ಪ್ಲೇಆಫ್ಸ್ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ದಿಗ್ಗಜ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ಯುವ ಆಟಗಾರರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಜೊತೆಗೆ, ಅವರ ಬೆಳವಣಿಗೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಪರಿಶೀಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
“ಟಿ20 ಕ್ರಿಕೆಟ್‌ನಲ್ಲಿ ಏರಿಳಿತಗಳು ಸಾಮಾನ್ಯ. ಸೀಸನ್ ಮುಗಿದ ನಂತರವೇ ಏನು ತಪ್ಪಾಯಿತು ಎಂಬುದನ್ನು ಸರಿಯಾಗಿ ವಿಶ್ಲೇಷಿಸಲು ಸೂಕ್ತ ಸಮಯ ಸಿಗುತ್ತದೆ. ಆದರೆ ಈ ಹಂತದಲ್ಲಿ ನನ್ನ ಅಭಿಪ್ರಾಯವೇನೆಂದರೆ, ಹಿರಿಯ ಆಟಗಾರರು ತಮ್ಮ ಶ್ರೇಷ್ಠ ಪ್ರಯತ್ನವನ್ನು ಈಗಾಗಲೇ ನೀಡಿದ್ದಾರೆ. ಆದ್ದರಿಂದ ಉಳಿದಿರುವ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವುದು ಸರಿಯಾದ ನಿರ್ಧಾರವಾಗಬಹುದು. ಇದರಿಂದ ಫ್ರಾಂಚೈಸಿಗೆ, ಈ ಯುವ ಆಟಗಾರರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವರ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕ ಪ್ರದರ್ಶನ ನೀಡಬಹುದೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ,” ಎಂದು ಗವಾಸ್ಕರ್ ಹೇಳಿದ್ದಾರೆ.