ವಡೋದರ: ಕೊನೆಯ ಓವರ್‌ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, 6 ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸ್ಮೃತಿ ಮಂಧಾನಾ (Smriti Mandhana) ನಾಯಕತ್ವದ ಆರ್‌ಸಿಬಿ ವನಿತೆಯರು ಎರಡನೇ ಬಾರಿ ಡಬ್ಲ್ಯುಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಸ್ಪೋಟಕ ಅರ್ಧಶತಕಗಳನ್ನು ಸಿಡಿಸಿದ ಮಂಧಾನಾ ಹಾಗೂ ಜಾರ್ಜಿಯಾ ವಾಲ್ 165 ರನ್‌ಗಳ ದಾಖಲೆಯ ಜೊತೆಯಾಟವಾಡಿ ಬೆಂಗಳೂರು ತಂಡದ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇನ್ನು ನಾಲ್ಕನೇ ಬಾರಿ ಫೈನಲ್‌ನಲ್ಲಿ ಪರಾಭವಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚೊಚ್ಚಲ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಯಿತು.
ಗುರುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 204 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ಸ್ಮೃತಿ ಮಂಧಾನಾ (89 ರನ್) ಹಾಗೂ ಜಾರ್ಜಿಯಾ ವಾಲ್ (79 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ, 19.4 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಗುರಿಯನ್ನು ತಲುಪಿತು. ಆ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್ (ಎರಡು ಬಾರಿ ಚಾಂಪಿಯನ್) ದಾಖಲೆಯನ್ನು ಸರಿಗಟ್ಟಿತು.
T20 World Cup 2026: ಭಾರತ ತಂಡ ಟಿ20 ವಿಶ್ವಕಪ್ ಗೆದ್ದರೆ ಡ್ಯಾನ್ಸ್ ಮಾಡುತ್ತೇನೆಂದ ಸುನೀಲ್ ಗವಾಸ್ಕರ್!
ಸ್ಮೃತಿ ಮಂಧಾನಾ-ಜಾರ್ಜಿಯಾ ವಾಲ್ ಜುಗಲ್‌ಬಂದಿ
ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಎರಡನೇ ಓವರ್‌ನಲ್ಲಿಯೇ ಚಿನೆಲ್ಲಿ ಹೆನ್ರಿ, ಗ್ರೇಸ್ ಹ್ಯಾರಿಸ್ ಅವರನ್ನು ಔಟ್ ಮಾಡಿ ಶಾಕ್ ನೀಡಿದ್ದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ಸ್ಮೃತಿ ಮಂಧಾನಾ ಹಾಗೂ ಜಾರ್ಜಿಯಾ ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ದೀರ್ಘಾವಧಿ ಬ್ಯಾಟ್ ಮಾಡಿ ಎರಡನೇ ವಿಕೆಟ್‌ಗೆ 92 ಎಸೆತಗಳಲ್ಲಿ 165 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆರಂಭಿಕ ಎಸೆತದಿಂದಲೂ ಸ್ಪೋಟಕ ಬ್ಯಾಟ್ ಮಾಡಿದ ಜಾರ್ಜಿಯಾ ವಾಲ್, 54 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 79 ರನ್ ಗಳಿಸಿ, ಆರ್‌ಸಿಬಿಯನ್ನು ಗೆಲುವಿನ ಸನಿಹ ತಂದು ಔಟ್ ಆದರು.
ಸ್ಮೃತಿ ಮಂಧಾನಾ ಭರ್ಜರಿ ಬ್ಯಾಟಿಂಗ್
ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಫೈನಲ್ ಪಂದ್ಯದ ಚೇಸಿಂಗ್‌ನಲ್ಲಿ ವಿಭಿನ್ನವಾಗಿ ಕಂಡರು. ಅವರು ಕೊನೆಯವರೆಗೂ ಬ್ಯಾಟ್ ಮಾಡಿ 41 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 87 ರನ್ ಸಿಡಿಸಿದರು. ಆ ಮೂಲಕ ಆರ್‌ಸಿಬಿಯನ್ನು ಗೆಲುವಿನ ಸನಿಹ ತಂದು ಆಡುತ್ತಿದ್ದರು, ಆದರೆ, ಚಿನೆಲ್ಲೆ ಹೆನ್ರಿ ಎಸೆತದಲ್ಲಿ ಬೌಲ್ಡ್ ಆದರು. ಕೊನೆಯಲ್ಲಿ ರಾಧಾ ಯಾದವ್ 5 ಎಸೆತಗಳಲ್ಲಿ ಎರಡು ಬೌಂಡರಿ ಸೇರಿ 12 ರನ್ ಗಳಿಸಿ ಆರ್‌ಸಿಬಿಯನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು.
203 ರನ್ ಕಲೆ ಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಜೆಮಿಮಾ ರೊಡ್ರಿಗಸ್ (57 ರನ್) ಹಾಗೂ ಲಾರಾ ವಾಲ್ವಾರ್ಡ್ (44 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 203 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 204 ರನ್‌ಗಳ ಗುರಿಯನ್ನು ನೀಡಿತ್ತು. ಡೆಲ್ಲಿ ಪರ ಲಿಜೆಲ್ಲಿ ಲೀ 37 ರನ್ ಹಾಗೂ ಚಿನೆಲ್ಲಿ 15 ಎಸೆತಗಳಲ್ಲಿ ಅಜೇಯ 35 ರನ್ ಸಿಡಿಸಿದ್ದರು.
ಜೆಮಿಮಾ ರೊಡ್ರಿಗಸ್ ಅರ್ಧಶತಕ
ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತವಾಗಿ ಬ್ಯಾಟ್ ಮಾಡಿದ ನಾಯಕಿ ಜೆಮಿಮಾ ರೊಡ್ರಿಗಸ್ ಅವರು, 37 ಎಸೆತಗಳಲ್ಲಿ 8 ಬೌಂಡರಿಗಳನ್ನು 57 ರನ್‌ಗಳನ್ನು ಬಾರಿಸಿದರು. ಅಲ್ಲದೆ 44 ರನ್ ಗಳಿಸಿದ ಲಾರಾ ವಾಲ್ವಾರ್ಡ್ ಅವರ ಜೊತೆಗೆ 76 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಇನ್ನು ಕೊನೆಯ ಹಂತದಲ್ಲಿ ಚಿನ್ನೆಲ್ಲಿ ಹೆನ್ರಿ ಅವರು ಕೊನೆಯಲ್ಲಿ ಕೇವಲ 15 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 35 ರನ್ ಸಿಡಿಸಿದ್ದರು. ಆ ಮೂಲಕ ಡೆಲ್ಲಿಯನ್ನು 200ರ ಗಡಿ ದಾಟಿಸಿದ್ದರು.
ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಿಗೆ 203-4 (ಜೆಮಿಮಾ ರೊಡ್ರಿಗಸ್ 57, ಲಾರಾ ವಾಲ್ವಾರ್ಡ್ 44, ಚಿನೆಲ್ಲಿ ಹೆನ್ರಿ 35*, ಲಿಝೆಲ್ಲಿ ಲೀ 37; ಅರುಂಧತಿ ರೆಡ್ಡಿ 40 ಕ್ಕೆ 1)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 19.4 ಓವರ್‌ಗಳಿಗೆ 204-4 (ಸ್ಮೃತಿ ಮಂಧಾನಾ 87, ಜಾರ್ಜಿಯಾ ವಾಲ್ 79 (ಚಿನೆಲ್ಲಿ ಹೆನ್ರಿ 34ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಸ್ಮೃತಿ ಮಂಧಾನಾ