ನವಿ ಮುಂಬೈ: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ 2026ರ ಮಹಿಳಾ ಪ್ರೀಮಿಯರ್ ಲೀಗ್‌ನ 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಯುಪಿ ವಾರಿಯರ್ಸ್ ವಿರುದ್ಧ ಐತಿಹಾಸಿಕ ಮತ್ತು ಅದ್ಭುತ ಜಯ ಸಾಧಿಸಿತು. ಗ್ರೇಸ್ ಹ್ಯಾರಿಸ್ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಶಿಸ್ತುಬದ್ದ ದಾಳಿಯ ನೆರವಿನಿಂದ ಆರ್‌ಸಿಬಿ, ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಇದು ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿಗೆ ಸತತ ಎರಡನೇ ಜಯವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಯುಪಿ ವಾರಿಯರ್ಸ್ ಕಳಪೆ ಆರಂಭವನ್ನು ಕಂಡಿತು. ತಂಡವು ಕೇವಲ 50 ರನ್‌ಗಳಿಗೆ ಐದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಮೆಗ್ ಲ್ಯಾನಿಂಗ್ (14), ಹರ್ಲೀನ್ ಡಿಯೋಲ್ (11), ಮತ್ತು ಕಿರಣ್ ನವ್‌ಗಿರೆ (5) ಅಗ್ಗವಾಗಿ ನಿರ್ಗಮಿಸಿದರು. ದೀಪ್ತಿ ಶರ್ಮಾ ಮತ್ತು ಡಿಯಾಂಡ್ರಾ ಡಾಟಿನ್ ಕಷ್ಟದ ಸಮಯದಲ್ಲಿ ಜವಾಬ್ದಾರಿ ವಹಿಸಿಕೊಂಡರು. ಅವರು ಆರನೇ ವಿಕೆಟ್‌ಗೆ ಅಜೇಯ 93 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ದೀಪ್ತಿ ಶರ್ಮಾ 35 ಎಸೆತಗಳಲ್ಲಿ ಅಜೇಯ 45* ರನ್ ಮತ್ತು ಡಾಟಿಂಗ್ 37 ಎಸೆತಗಳಲ್ಲಿ 40* ರನ್ ಗಳಿಸಿ ತಂಡವನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು.
IND vs NZ: ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಆಡುವುದು ನ್ಯಾಯವೇ? ಇರ್ಫಾನ್ ಪಠಾಣ್ ಹೇಳಿದ್ದಿದು!
ಆರ್‌ಸಿಬಿ ಬೌಲರ್‌ಗಳು ಆರಂಭದಿಂದಲೇ ಯುಪಿ ಬ್ಯಾಟ್ಸ್‌ವುಮನ್‌ಗಳನ್ನು ಒತ್ತಡದಲ್ಲಿರಿಸಿಕೊಂಡರು. ಶ್ರೇಯಾಂಕ ಪಾಟೀಲ್ ಮತ್ತು ನದಿನ್ ಡಿ ಕ್ಲರ್ಕ್ ತಲಾ ಎರಡು ವಿಕೆಟ್‌ಗಳನ್ನು ಪಡೆದು ಅತ್ಯಂತ ಯಶಸ್ವಿ ಬೌಲರ್‌ಗಳಾಗಿದ್ದರು. ಲಾರೆನ್ ಬೆಲ್ ಕೂಡ ಮಿತವಾಗಿ ಬೌಲ್ ಮಾಡಿದರು, ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್‌ಗಳಿಗೆ ಒಂದು ವಿಕೆಟ್ ಪಡೆದರು.
ಒಂದೇ ಓವರ್‌ನಲ್ಲಿ 32 ರನ್ ಬಾರಿಸಿದ ಹ್ಯಾರಿಸ್
ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಯ ಆರಂಭಿಕ ಜೋಡಿ, ನಾಯಕಿ ಸ್ಮೃತಿ ಮಂಧಾನ ಮತ್ತು ಗ್ರೇಸ್ ಹ್ಯಾರಿಸ್ ಆರಂಭದಿಂದಲೇ ಆಕ್ರಮಣಕಾರಿ ಧೋರಣೆ ಅನುಸರಿಸಿದರು. ಆರನೇ ಓವರ್‌ನಲ್ಲಿ ಗ್ರೇಸ್ ಹ್ಯಾರಿಸ್, ಡಿಯಾಂಡ್ರಾ ಡಾಟಿಂಗ್ ಅವರ ಒಂದೇ ಓವರ್‌ನಲ್ಲಿ 32 ರನ್ ಗಳಿಸಿದಾಗ ಪಂದ್ಯದ ಅತ್ಯಂತ ರೋಮಾಂಚಕಾರಿ ಕ್ಷಣ ಬಂದಿತು. ಹ್ಯಾರಿಸ್ ಆ ಓವರ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿ, ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್‌ನ ದಾಖಲೆಯನ್ನು ಸರಿಗಟ್ಟಿದರು.
ಆರ್‌ಸಿಬಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 144 ರನ್‌ಗಳ ಗುರಿಯನ್ನು ತಲುಪಿತು. ಗ್ರೇಸ್ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು ಮತ್ತು 40 ಎಸೆತಗಳಲ್ಲಿ 85 ರನ್ ಗಳಿಸಿದರು. ಮತ್ತೊಂದೆಡೆ, ನಾಯಕಿ ಸ್ಮೃತಿ ಮಂಧಾನ ಅತ್ಯುತ್ತಮ ಬೆಂಬಲ ನೀಡಿದರು ಮತ್ತು ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದರು. ಆರ್‌ಸಿಬಿ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು.