ನವದೆಹಲಿ: ಭಾರತ ತಂಡದ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ ಜಿತೇಶ್ ಶರ್ಮಾ (Jitesh Sharma) ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL Playing) ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ಆದರೆ, ಆರ್‌ಸಿಬಿಯ ಸಹ ಆಟಗಾರ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಏಕೆಂದರೆ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಂದ ಹಾಗೆ ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗುವಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಜಿತೇಶ್ ಶರ್ಮಾ ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಟೂರ್ನಿಯಲ್ಲಿ ಆರ್‌ಸಿಬಿ ಪರ ಜಿತೇಶ್ ಶರ್ಮಾ ತಂಡವನ್ನು ಒಮ್ಮೆ ಮುನ್ನಡೆಸಿದ್ದರು ಹಾಗೂ ಮ್ಯಾಚ್ ಫಿನಿಷರ್ ಆಗಿ ಕಾರ್ಯನಿರ್ವಹಿಸಿದ್ದರು. ಇವರು ಆಡಿದ್ದ 11 ಇನಿಂಗ್ಸ್‌ಗಳಿಂದ 176.35ರ ಸ್ಟ್ರೈಕ್ ರೇಟ್‌ನಲ್ಲಿ 261 ರನ್‌ಗಳನ್ನು ಕಲೆ ಹಾಕಿದ್ದರು. ಈ ಟೂರ್ನಿಯಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು. ಅವರು 657 ರನ್‌ಗಳನ್ನು ಸಿಡಿಸಿದ್ದರು.
ರೋಹಿತ್ ಶರ್ಮಾರನ್ನು ನಾಯಕತ್ವದಿಂದ ತೆಗೆದಿದ್ದು ಯಾರೆಂದು ತಿಳಿಸಿದ ಮನೋಜ್ ತಿವಾರಿ!
ತಮ್ಮ ನೆಚ್ಚಿನ ಐಪಿಎಲ್ ಸಾರ್ವಕಾಲಿಕ ಪ್ಲೇಯಿಂಗ್ XIನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್ ಶರ್ಮಾ ಹಾಗೂ ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿರುವ ರೋಹಿತ್ ಶರ್ಮಾ, ತಮ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ಗೆ ಐದು ಬಾರಿ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. ಇನು ಡೆಕನ್ ಚಾರ್ಜರ್ಸ್ ತಂಡ, ಐಪಿಎಲ್ ಗೆಲ್ಲುವಲ್ಲಿ ಆಡಂ ಗಿಲ್‌ಕ್ರಿಸ್ಟ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆರಿಸಿದ್ದಾರೆ.
ನಂತರ ನಾಲ್ಕು ಹಾಗೂ ಐದನೇ ಕ್ರಮಾಂಕಗಳಲ್ಲಿ ದಕ್ಷಿಣ ಆಫ್ರಿಕಾ ದಿಗ್ಗಜರಾದ ಜಾಕ್ ಕಾಲಿಸ್ ಹಾಗೂ ಆಡಮ್ ಗಿಲ್‌ಕಿಸ್ಟ್ ಅವರನ್ನು ಜಿತೇಶ್ ಶರ್ಮಾ ಆರಿಸಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಎಂಎಸ್ ಧೋನಿಯನ್ನು ನಾಯಕನ್ನಾಗಿ ಆರಿಸಲಾಗಿದೆ. ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಹಾಗೂ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಅವರನ್ನು ಆರಿಸಲಾಗಿದೆ.
IND vs NZ: ಅರ್ಷದೀಪ್ ಸಿಂಗ್‌ಗೆ ಸ್ಥಾನ ನೀಡದ ಗೌತಮ್ ಗಂಭೀರ್ ವಿರುದ್ಧ ಆರ್ ಅಶ್ವಿನ್ ಕಿಡಿ
ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. 2020 ರಿಂದ ವರುಣ್ ಚಕ್ರವರ್ತಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಬೆಳೆದಿದ್ದಾರೆ. ಜಾಶ್ ಹೇಝಲ್‌ವುಡ್ ಹಾಗೂ ಜಸ್‌ಪ್ರೀತ್ ಬುಮ್ರಾ ಅವರನ್ನು ಪೂರ್ಣ ಪ್ರಮಾಣದ ವೇಗದ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಜಿತೇಶ್ ಶರ್ಮಾ ಆಯ್ಕೆ ಮಾಡಿದ ಸಾರ್ವಕಾಲಕ ಶ್ರೇಷ್ಠ ಐಪಿಎಲ್ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಆಡಂ ಗಿಲ್‌ಕ್ರಿಸ್ಟ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಜಾಕ್ ಕಾಲಿಸ್, ಎಬಿ ಡಿ ವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ), ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಜಾಶ್ ಹೇಝಲ್‌ವುಡ್