ಲಖನೌ: ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಲಖನೌ ಸೂಪರ್ ಜಯಂಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ (LSG vs KKR) ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 38ನೇ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ನಿಗದಿತ 20 ಓವರ್‌ಗಳ ಅಂತ್ಯಕ್ಕೆ ಪಂದ್ಯ (155 ರನ್) ಟೈ ಆಗಿತ್ತು. ಆದರೆ, ಸೂಪರ್ ಓವರ್‌ನಲ್ಲಿ ಮೊದಲ ಬ್ಯಾಟ್ ಮಾಡಿದ್ದ ಲಖನೌ ತಂಡದ ಎರಡು ವಿಕೆಟ್‌ಗಳನ್ನು ಸುನೀಲ್ ನರೇನ್ (Sunil Narine) ತಮ್ಮ ಸ್ಪಿನ್ ಮೋಡಿಯಿಂದ ಕಿತ್ತರು. ಕೇವಲ ಮೂರು ಎಸೆತಗಳಲ್ಲಿ ನರೇನ್ ಕೇವಲ ಒಂದು ರನ್ ಕೊಟ್ಟರು. ಮೊದಲನೇ ಎಸೆತದಲ್ಲಿ ನಿಕೋಲಸ್ ಪೂರನ್ ಕ್ಲೀನ್ ಬೌಲ್ಡ್ ಆದರು. ನಂತರ ಎರಡನೇ ಎಸೆತದಲ್ಲಿ ರಿಷಭ್ ಪಂತ್ ಸಿಂಗಲ್ ಆಡಿದರು.ನಂತರ ಮೂರನೇ ಎಸೆತದಲ್ಲಿ ಏಡೆನ್ ಮಾರ್ಕ್ರಮ್ ಅವರು ಬಲವಾದ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟರು. ಈ ಕ್ಯಾಚ್ ಅನ್ನು ರೊಮ್ಯಾರಿಯೊ ಶೆಫರ್ಡ್ ಹಾಗೂ ರಿಂಕು ಸಿಂಗ್ ಸಂಯೋಜನೆಯಲ್ಲಿ ಯಶಸ್ವಿಯಾಯಿತು. ಬಳಿಕ ಎರಡು ರನ್ ಗುರಿಯನ್ನು ಹಿಂಬಾಲಿಸಿದ ಕೆಕೆಆರ್ ಪರ ರಿಂಕು ಸಿಂಗ್ (Rinku Singh) ಮೊದಲನೇ ಎಸೆತದಲ್ಲಿ ಬೌಂಡರಿ ಗಳಿಸಿ ತಮ್ಮ ತಂಡಕ್ಕೆ ಗೆಲುವು ಖಚಿತಪಡಿಸಿದರು.
ಅಂದಹಾಗೆ ನಿಗದಿತ 20 ಓವರ್‌ಗಳಿಗೆ ಕೆಕೆಆರ್ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ ಮಿಚೆಲ್ ಮಾರ್ಷ್ ಅವರನ್ನು ಬಹುಬೇಗ ಕಳೆದುಕೊಂಡರೂ ನಂತರ ಜೊತೆಯಾದ ಏಡೆನ್ ಮಾರ್ಕ್ರಮ್ ಹಾಗೂ ರಿಷಭ್ ಪಂತ್ 57 ರನ್‌ಗಳ ಜೊತೆಯಾಟವನ್ನು ಆಡಿದರು. ಪಂತ್ 38 ಎಸೆತಗಳಲ್ಲಿ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಮಾರ್ಕ್ರಮ್ 31 ರನ್ ಗಳಿಸಿ ಔಟ್ ಆದರು. ನಿಕೋಲಸ್ ಪೂರನ್ ಮತ್ತೊಮ್ಮೆ ವಿಫಲರಾದರು. ಮುಕುಲ್ ಚೌಧರಿ ಕೂಡ ನಿರ್ಣಾಯಕ ಸಮಯದಲ್ಲಿ ಔಟ್ ಆದರು. ಆದರೆ, ಆಯುಷ್ ಬದೋನಿ 24 ರನ್ ಗಳಿಸಿದರೂ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದ ಹಿಮಾಂತ್ ಸಿಂಗ್ 10 ಎಸೆತಗಳಲ್ಲಿ 19 ರನ್ ಹಾಗೂ ಮೊಹಮ್ಮದ್ ಶಮಿ (11* ರನ್) ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ತೆಗೆದುಕೊಂಡು ಹೋದರು.ಆ ಮೂಲಕ ಲಖನೌ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 155 ರನ್‌ಗಳನ್ನು ಗಳಿಸಿತು.
LSG vs KKR: ಫೀಲ್ಡಿಂಗ್‌ಗೆ ಅಡ್ಡಿಪಡಿಸಿ ವಿವಾದಾತ್ಮಕ ತೀರ್ಪಿಗೆ ಔಟಾದ ಅಂಗ್‌ಕ್ರಿಶ್ ರಘುವಂಶಿ!
ಕೆಕೆಆರ್ ಪರ ವೈಭವ್ ಅರೋರಾ ಹಾಗೂ ವರುಣ್ ಚಕ್ರವರ್ತಿ ತಲಾ ಎರಡೆರಡು ವಿಕೆಟ್ ಕಿತ್ತರೆ, ಸುನೀಲ್ ನರೇನ್, ಕ್ಯಾಮೆರಾನ್ ಗ್ರೀನ್ ಹಾಗೂ ಕಾರ್ತಿಕ್ ತ್ಯಾಗಿ ತಲಾ ಒಂದೊಂದು ವಿಕೆಟ್ ಪಡೆದರು. ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 83 ರನ್ ಸಿಡಿಸಿದ್ದ ಹಾಗೂ ಐದು ಪಂದ್ಯಗಳಲ್ಲಿ ಪಡೆದಿದ್ದ ರಿಂಕು ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
155 ರನ್ ಕಲೆ ಹಾಕಿದ ಕೆಕೆಆರ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ರಿಂಕು ಸಿಂಗ್ (83 ರನ್) ಅವರ ನಿರ್ಣಾಯಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಲಖನೌಗೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ನೀಡಿತು.
ಕೋಲ್ಕತಾಗೆ ಆಘಾತ ನೀಡಿದ ಮೊಹ್ಸಿನ್ ಖಾನ್
ಕೆಕೆಆರ್ ಪರ ಇನಿಂಗ್ಸ್ ಆರಂಭಿಸಿದ ಟಿಮ್ ಸೈಫರ್ಟ್ ಹಾಗೂ ಅಜಿಂಕ್ಯ ರಹಾನೆ ಅವರು ವಿಫಲರಾದರು. ಪವರ್‌ಪ್ಲೇನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹ್ಸಿನ್ ಖಾನ್ ಅವರು ಮೊದಲಿಗೆ ಟಿಮ್ ಸೈಫರ್ಟ್ ಹಾಗೂ ನಂತರ 10 ರನ್ ಗಳಿಸಿದ್ದ ರಹಾನೆ ಅವರನ್ನು ಔಟ್ ಮಾಡಿದರು. ಅಂಗ್‌ಕ್ರಿಶ್ ರಘುವಂಶಿ ಅವರು ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಪರಿಣಾಮ ಔಟ್ ಆದರು. ರೊವ್ಮನ್ ಪೊವೆಲ್ ಅವರನ್ನು ಕೂಡ ಮೊಹ್ಸಿನ್ ಔಟ್ ಮಾಡಿದರು. ಆದರೆ, ಒಂದು ತುದಿಯಲ್ಲಿ ನಿಂತು 21 ಎಸೆತಗಳನ್ನು 34 ರನ್ ಗಳಿಸಿ ಆಡುತ್ತಿದ್ದ ಕ್ಯಾಮೆರಾನ್ ಗ್ರೀನ್ ಅವರಿಗೂ ಮೊಹ್ಸಿನ್ ಪೆವಿಲಿಯನ್ ಹಾದಿ ತೋರಿಸಿದರು, ಇದರ ನಂತರ ಅನುಕುಲ್ ರಾಯ್ ಕೂಡ ಮೊಹ್ಸಿನ್‌ಗೆ ಶರಣಾದರು. ಆ ಮೂಲಕ ಮೊಹ್ಸಿನ್ ಖಾನ್ 5 ವಿಕೆಟ್ ಸಾಧನೆ ಮಾಡಿದರು. ಈ ವೇಳೆ ಕೆಕೆಆರ್ 73 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
83 ರನ್ ಸಿಡಿಸಿ ಕೆಕೆಆರ್‌ಗೆ ಆಸರೆಯಾದ ರಿಂಕು ಸಿಂಗ್
ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಿಂಕು ಸಿಂಗ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಆದರೆ, ಮತ್ತೊಂದು ತುದಿಯಲ್ಲಿ ಗ್ರೀನ್ ಹಾಗೂ ಸುನೀಲ್ ನರೇನ್ ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಹೊತ್ತು ಸಾಥ್ ನೀಡಲಿಲ್ಲ. ರಿಂಕು ಸಿಂಗ್ ಕೊನೆಯವರೆಗೂ ಬ್ಯಾಟ್ ಮಾಡಿ 51 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 83 ರನ್ ಸಿಡಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರು 20ನೇ ಓವರ್‌ನಲ್ಲಿ ದಿಗ್ವೇಶ್ ರಾಠಿಗೆ ನಾಲ್ಕು ಸತತ ಸಿಕ್ಸರ್ ಸೇರಿ 26 ರನ್‌ಗಳನ್ನು ಬಾರಿಸಿದ್ದರು. ಇವರ ಇನಿಂಗ್ಸ್ ನೆರವಿನಿಂದ ಕೆಕೆಆರ್ 150ರ ಗಡಿ ದಾಟಿತು ಇಲ್ಲವಾದಲ್ಲಿ 100 ರನ್ ಗಳಿಸುವುದೂ ಕಷ್ಟವಾಗುತ್ತಿತ್ತು.