ನವದೆಹಲಿ: ಮುಂದಿನ 2027ರ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಯಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಭಾರತ ತಂಡಕ್ಕೆ ಪ್ರಮುಖ ಆಸ್ತಿಯಾಗಲಿದ್ದಾರೆ ಎಂದು ಭಾರತೀಯ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಯಲ್ಲಿ ಇಬ್ಬರ ಪ್ರಸ್ತುತ ಫಾರ್ಮ್, ಫಿಟ್‌ನೆಸ್ ಮತ್ತು ಅನುಭವ ತಂಡಕ್ಕೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ರೋಹಿತ್ ಮತ್ತು ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್ ತಮ್ಮ ಕೊನೆಯ ಐದು ಇನಿಂಗ್ಸ್‌ಗಳಲ್ಲಿ ಎರಡು ಶತಕಗಳ ಜೊತೆಗೆ 92 ರನ್‌ಗಳ ಇನಿಂಗ್ಸ್ ಆಡಿದ್ದಾರೆ. ಮತ್ತೊಂದೆಡೆ, ಕೊಹ್ಲಿ ಒಂದು ಶತಕ ಹಾಗೂ 74 ಮತ್ತು 65 ರನ್‌ಗಳ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ವಿಶ್ವಕಪ್ ಟೂರ್ನಿಗೆ ಇನ್ನು ಒಂದು ವರ್ಷ ಸಮಯ ಉಳಿದಿರುವ ಹಿನ್ನೆಲೆಯಲ್ಲಿ ಇಬ್ಬರೂ ಟೂರ್ನಿಯಲ್ಲಿ ಆಡುವ ಸ್ಪರ್ಧೆಯಲ್ಲಿದ್ದಾರೆ.
ಐಎಎನ್‌ಎಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಭಾರತದ ಮಾಜಿ ಆಲ್‌ರೌಂಡರ್ ರಾಬಿನ್ ಸಿಂಗ್, ಈ ಇಬ್ಬರು ಮಾಜಿ ನಾಯಕರ ಅನುಭವಕ್ಕಿಂತಲೂ ಅವರ ಪ್ರಸ್ತುತ ಫಾರ್ಮ್ ಹೆಚ್ಚು ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ʻನಮ್ಮ ತಂಡದಲ್ಲಿ ಗುಣಮಟ್ಟದ ಬೌಲಿಂಗ್ ಇಲ್ಲʼ: ಭಾರತ ತಂಡದ ಬೌಲಿಂಗ್ ಅನ್ನು ಟೀಕಿಸಿದ ಆರ್ ಅಶ್ವಿನ್!
“ಅನುಭವ ಒಂದು ಪ್ರಮುಖ ಅಂಶ. ಆದರೆ ಅದಕ್ಕಿಂತ ಮುಖ್ಯವಾಗಿ ಅವರ ಫಾರ್ಮ್ ಮಹತ್ವದ್ದಾಗಿದೆ. ವಯಸ್ಸಿನೊಂದಿಗೆ ಅವರಿಗೆ ಸಾಕಷ್ಟು ಅನುಭವ ಬಂದಿದೆ. ಹಾಗಾಗಿ ಅದು ಸಮಸ್ಯೆಯಲ್ಲ. ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ,” ಎಂದು ರಾಬಿನ್ ಸಿಂಗ್ ಹೇಳಿದ್ದಾರೆ.
ಇಬ್ಬರೂ ಆಟಗಾರರು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳುವಲ್ಲಿ ಮತ್ತು ಉತ್ತಮ ಪ್ರದರ್ಶನ ಮುಂದುವರಿಸುವಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
“ಪ್ರಸ್ತುತ ಕ್ಷಣದ ಮೇಲೆ ಗಮನ ಕೇಂದ್ರೀಕರಿಸುವುದು, ಫಿಟ್‌ನೆಸ್ ಕಾಪಾಡಿಕೊಳ್ಳುವುದು ಮತ್ತು ಉತ್ತಮವಾಗಿ ಆಡುತ್ತಲೇ ಇರುವುದು ಮುಖ್ಯ. ಅವರು ಈ ವಿಷಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಯಾವುದೇ ದೂರುಗಳಿಲ್ಲ. ಅವರು ಖಂಡಿತವಾಗಿಯೂ ಭಾರತ ತಂಡಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ,” ಎಂದು ಅವರು ಹೇಳಿದರು.
IND vs WI 3rd T20I: ಶಿವಂ ದುಬೇ ಔಟ್? ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ವಿಶ್ವಕಪ್ ತಂತ್ರಕ್ಕೆ ಅನುಗುಣವಾಗಿ ಆಟಗಾರರ ಆಯ್ಕೆ
2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸುವ ಉದ್ದೇಶದಿಂದ ಭಾರತ ಇತ್ತೀಚಿನ ಪಂದ್ಯಗಳಲ್ಲಿ ಹಲವು ಆಟಗಾರರಿಗೆ ಅವಕಾಶ ನೀಡುತ್ತಿದೆ. ಈ ಕುರಿತು ಮಾತನಾಡಿದ ರಾಬಿನ್ ಸಿಂಗ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅವರ ತಂಡವು ವಿಶ್ವಕಪ್‌ನ ಯೋಜನೆಗೆ ಅನುಗುಣವಾಗಿ ಮುಂಬರುವ ಏಕದಿನ ಸರಣಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದರು.
“ಅವರು ಸಾಧ್ಯವಾದಷ್ಟು ಹೆಚ್ಚು ಆಟಗಾರರನ್ನು ಪರೀಕ್ಷಿಸುತ್ತಿದ್ದಾರೆ. ಅವರ ಬಳಿ ಈಗಾಗಲೇ ಒಂದು ಯೋಜನೆ ಇದೆ ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್‌ನಲ್ಲಿ ಯಾವ ರೀತಿಯ ಆಟಗಾರರು ಬೇಕು ಮತ್ತು ತಂಡವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ಗೌತಮ್ ಹಾಗೂ ಅವರ ತಂಡಕ್ಕೆ ಸ್ಪಷ್ಟತೆ ಇರಬಹುದು,” ಎಂದು ಅವರು ಹೇಳಿದರು.
“ಆ ತಂತ್ರಕ್ಕೆ ಅನುಗುಣವಾಗಿ ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಪ್ರದರ್ಶನ ನೀಡಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಿದ್ದಾರೆ. ವಿಶ್ವಕಪ್‌ಗೆ ಮುನ್ನ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲು ಇದು ಸಹಕಾರಿಯಾಗಲಿದೆ,” ಎಂದರು.
ಭಾರತದ ಪರ 136 ಏಕದಿನ ಪಂದ್ಯಗಳು ಮತ್ತು ಒಂದು ಟೆಸ್ಟ್ ಪಂದ್ಯವನ್ನಾಡಿರುವ ರಾಬಿನ್ ಸಿಂಗ್, ತಂಡದ ಆಯ್ಕೆಯಲ್ಲಿ ದೀರ್ಘಕಾಲೀನ ಯೋಜನೆಗೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
AUS vs SA: ಬರೋಬ್ಬರಿ 9 ವರ್ಷಗಳ ಬಳಿಕ ಮೊದಲ ಟೆಸ್ಟ್ ಶತಕ ಬಾರಿಸಿದ ಮ್ಯಾಟ್ ರೆನ್‌ಶಾ!
ಭುವನೇಶ್ವರ್, ಶಮಿ ಆಯ್ಕೆಗೂ ಬೆಂಬಲ
ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಟಿ20 ತಂಡಕ್ಕೆ ಭುವನೇಶ್ವರ್ ಕುಮಾರ್ ಅವರನ್ನು ಮರಳಿ ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ, 2027ರ ವಿಶ್ವಕಪ್‌ನಲ್ಲಿ ಭುವನೇಶ್ವರ್ ಮತ್ತು ಮೊಹಮ್ಮದ್ ಶಮಿ ಅವರಿಗೂ ಅವಕಾಶ ಸಿಗಬಹುದೇ ಎಂಬ ಪ್ರಶ್ನೆ ಮೂಡಿದೆ. ಟೂರ್ನಿ ನಡೆಯಲಿರುವ ದಕ್ಷಿಣ ಆಫ್ರಿಕಾ ಸೇರಿದಂತೆ ಆತಿಥೇಯ ಪ್ರದೇಶಗಳ ಪರಿಸ್ಥಿತಿಗಳು ವೇಗದ ಬೌಲರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ.
“ಇದು ತಂಡದ ನಿರ್ವಹಣೆ ಏನು ಬಯಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅವರು ತಂಡದ ಯೋಜನೆಯ ಭಾಗವಾಗಿದ್ದರೆ ಆಡಿಸಬೇಕು. ಅವರು ಯೋಜನೆಯಲ್ಲಿಲ್ಲದಿದ್ದರೆ ಅವಕಾಶ ಪಡೆಯುವುದು ಕಷ್ಟವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.
“ವಯಸ್ಸು ಏನೇ ಇರಲಿ, ಈ ಇಬ್ಬರೂ ಅತ್ಯುತ್ತಮ ಬೌಲರ್‌ಗಳು. ಕಳೆದ ವರ್ಷ ಭುವನೇಶ್ವರ್ ಟಿ20 ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿದ್ದನ್ನು ನಾನು ನೋಡಿದ್ದೇನೆ. ಇಬ್ಬರೂ ದೇಶಿ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಭಾರತ ತಂಡಕ್ಕೆ ಮರಳುವ ಅವಕಾಶ ಪಡೆಯಲು ಬೇಕಾದಷ್ಟು ಪ್ರದರ್ಶನ ನೀಡಿದ್ದಾರೆ. ಅವರಿಬ್ಬರೂ ನಿಜಕ್ಕೂ ಉತ್ತಮ ಬೌಲರ್‌ಗಳು,” ಎಂದು ಅವರು ಹೇಳಿದರು.