ನವದೆಹಲಿ: ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯುವ 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2027) ಟೂರ್ನಿಯು ಸಮೀಪಿಸುತ್ತಿದೆ. ಪ್ರತಿಷ್ಠಿತ ಟೂರ್ನಿಗೆ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ವಿಶ್ವ ಕ್ರಿಕೆಟ್‌ನ ಪ್ರಮುಖ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗಾಗಿ ಸಜ್ಜಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತ ತಂಡದ ಮೇಲೂ ಎಲ್ಲರ ಗಮನ ನೆಟ್ಟಿದೆ.
ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಸ್ಥಾನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ, ಸೆಪ್ಟೆಂಬರ್ 3ರಂದು ಸಭೆ ನಡೆಸಲಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯವೂ ಸಭೆಯಲ್ಲಿ ಚರ್ಚಿಸಬಹುದಾದ ಪ್ರಮುಖ ವಿಷಯವಾಗಿದೆ.
ಪಿಟಿಐ ವರದಿ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರಿಗೆ ನಿವೃತ್ತಿಯಾಗುವಂತೆ ಆಯ್ಕೆದಾರರು ಸೂಚಿಸಿದ್ದರು ಎನ್ನಲಾಗಿದೆ. ಆದರೆ ಈ ಸೂಚನೆಗೆ ರೋಹಿತ್ ಉತ್ತಮ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದ್ದು, ಈ ನಿರ್ಧಾರದಿಂದ ಅನುಭವಿ ಬ್ಯಾಟರ್ ಅಸಮಾಧಾನಗೊಂಡಿದ್ದರು ಎಂತಲೂ ವರದಿ ತಿಳಿಸಿದೆ.
ಏಷ್ಯನ್ ಕ್ರೀಡಾಕೂಟ; ಟೀಮ್ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 138 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಈ ಪ್ರದರ್ಶನದಿಂದ ಅವರ ಭವಿಷ್ಯದ ನಿರ್ಧಾರವನ್ನು ಮುಂದೂಡಲಾಗಿತ್ತು ಎನ್ನಲಾಗಿದ್ದರೂ, 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಅವರ ಸ್ಥಾನ ಇನ್ನೂ ಖಚಿತವಾಗಿಲ್ಲ. ರೋಹಿತ್ ಶರ್ಮಾ ಶತಕ ಸಿಡಿಸುವುದಕ್ಕೂ ಮುನ್ನ ಅವರು ತಂಡದ ಯೋಜನೆಗಳಲ್ಲಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದರು. ಆದರೆ ಇತ್ತೀಚಿನ ವರದಿಗಳು ಇದಕ್ಕೆ ವಿರುದ್ಧವಾದ ಬೆಳವಣಿಗೆಯತ್ತ ಸುಳಿವು ನೀಡುತ್ತಿವೆ.
ಕೊಹ್ಲಿ-ಜಡೇಜಾ ಸ್ಥಾನಗಳು ಸುರಕ್ಷಿತ
ಇನ್ನು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಒತ್ತಡ ಹೆಚ್ಚಾಗಿರುವ ಸಾಧ್ಯತೆಯಿದ್ದರೂ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಸ್ಥಾನ ತುಸು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಮುಂಬರುವ ಬಿಸಿಸಿಐ ಸಭೆಯಲ್ಲಿ ಜಡೇಜಾ ಮತ್ತು ಕೊಹ್ಲಿ ಅವರ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಏಕದಿನ ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಜತೆ ಭಾರತ ಏಕದಿನ ಸರಣಿ ಸಾಧ್ಯತೆ
ಭಾರತ ತಂಡದ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಮುಖ ಆಟಗಾರರಲ್ಲಿ ಮೂವರಾದ ರೋಹಿತ್, ಕೊಹ್ಲಿ ಮತ್ತು ಜಡೇಜಾ ಅವರ ಮುಂದಿನ ಭವಿಷ್ಯದ ಬಗ್ಗೆ ಬಿಸಿಸಿಐ ಸಭೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. 2027ರ ಏಕದಿನ ವಿಶ್ವಕಪ್ ಟೂರ್ನಿಯು ಆಫ್ರಿಕಾದಲ್ಲಿ ನಡೆಯಲಿದ್ದು, ಮೂರನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿರುವ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನ ನೋವನ್ನು ಮರೆಸಿಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ. ಹಾಗಾಗಿ ಬಿಸಿಸಿಐ ಆಯ್ಕೆದಾರರು ಆಫ್ರಿಕಾ ಕಂಡೀಷನ್ಸ್‌ಗೆ ಹೊಂದಿಕೊಳ್ಳಬಹುದಾದ ಬಲಿಷ್ಠ ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಲು ತಯಾರಿ ನಡೆಸುತ್ತಿದ್ದಾರೆ.