ನವದೆಹಲಿ: ನ್ಯೂಜಿಲೆಂಡ್ ದಿಗ್ಗಜ ಬ್ಯಾಟ್ಸ್‌ಮನ್ ರಾಸ್ ಟೇಲರ್ (Ross Taylor) ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯಿಂದ ಹೊರ ಬಂದಿದ್ದು, ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2025) ಸಮೋವಾ ತಂಡದ ಪರ ಆಡಲು ಎದುರು ನೋಡುತ್ತಿದ್ದಾರೆ. ಇವರು 2022ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು 18199 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಕಿವೀಸ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದೀಗ ಅವರು ಸಮೋವಾ ( Samoa) ತಂಡದ ಪರ ಏಷ್ಯಾ-ಈಸ್ಟ್ ಏಷ್ಯಾ ಪೆಸಿಫಿಕ್ ಪರ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದಾರೆ.
ರಾಸ್ ಟೇಲರ್ ಅವರು 2022ರಲ್ಲಿ ನೆದರ್ಲೆಂಡ್ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕ್ರಿಕೆಟ್‌ಗೆ ವಿದಾಯ ಹೇಳಿದ ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿದ್ದಾರೆ. ಒಮನ್‌ನಲ್ಲಿ ಸಮೋವಾ ಪರ ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯವನ್ನು ರಾಸ್ ಟೇಲರ್ ಆಡಲಿದ್ದಾರೆ. ಕಾಲೆಬ್ ಜಸ್ಮತ್ ನಾಯಕತ್ವದ 15 ಸದಸ್ಯರ ಸಮೋವಾ ತಂಡದಲ್ಲಿ ರಾಸ್ ಟೇಲರ್ ಸ್ಥಾನವನ್ನು ಪಡೆದಿದ್ದಾರೆ.
ರಾಸ್ ಟೇಲರ್ ಸಮೋವನ್ ಪಾಸ್‌ಪೋರ್ಟ್ ಅನ್ನು ಹೊಂದಿದ್ದು, ಅವರ ತಾಯಿ ಸಮೋವನ್ ಪರಂಪರೆಯನ್ನು ಹೊಂದಿದ್ದಾರೆ.
Asia Cup 2025: ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್ ಕ್ರಮಾಂಕ ಸೂಚಿಸಿದ ಮೊಹಮ್ಮದ್ ಕೈಫ್!
ಹಾಗಾಗಿ ಅವರು ಸಮೋವಾ ದೇಶದ ಪರ ಆಡಲು ಅರ್ಹತೆಯನ್ನು ಹೊಂದಿದ್ದಾರೆ. ಅವರು ಮೂರು ವರ್ಷಗಳ ಕೂಲಿಂಗ್ ಆಫ್ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇದರ ಫಲವಾಗಿ ಅವರು ಎರಡನೇ ದೇಶದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅರ್ಹತೆ ಪಡೆದಿದ್ದಾರೆ.
"ಇದು ಅಧಿಕೃತ- ನಾನು ಕ್ರಿಕೆಟ್‌ನಲ್ಲಿ ಸಮೋವಾ ತಂಡವನ್ನು ಪ್ರತಿನಿಧಿಸುತ್ತೇನೆ ಎಂದು ಘೋಷಿಸಲು ಹೆಮ್ಮೆಪಡುತ್ತೇನೆ. ಇದು ನಾನು ಪ್ರೀತಿಸುವ ಆಟಕ್ಕೆ ಮರಳುವುದಕ್ಕಿಂತ ಹೆಚ್ಚಿನದಾಗಿದೆ. ನನ್ನ ಪರಂಪರೆ, ಸಂಸ್ಕೃತಿ, ಹಳ್ಳಿಗಳು ಮತ್ತು ಕುಟುಂಬವನ್ನು ಪ್ರತಿನಿಧಿಸುವ ದೊಡ್ಡ ಗೌರವ ಇದು. ಆಟಕ್ಕೆ ಮರಳಲು, ತಂಡವನ್ನು ಸೇರಲು ಮತ್ತು ಮೈದಾನದಲ್ಲಿ ಮತ್ತು ಹೊರಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಅವಕಾಶಕ್ಕಾಗಿ ನಾನು ಉತ್ಸುಕನಾಗಿದ್ದೇನೆ," ಎಂದು ರಾಸ್ ಟೇಲರ್ ತಮ್ಮ ಇನ್‌ಸ್ಟಾಗ್ರಾಮ್ ಹೃತ್ಪೂರ್ವಕ ಪೋಸ್ಟ್‌ನಲ್ಲಿ ಬರೆದಿದ್ದಾರೆ.
2025ರ ಮಹಿಳಾ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಯಾಸ್ತಿಕಾ ಭಾಟಿಯಾ!
41ರ ವರ್ಷದ ಬ್ಯಾಟ್ಸ್‌ಮನ್ ತಮ್ಮ ತಾಯಿ ಹುಟ್ಟಿದ ದೇಶಕ್ಕಾಗಿ ಆಡಲು ಉತ್ಸುಕತೆಯನ್ನು ವ್ಯಕ್ತಪಡಿಸಿದರು. ಸಮೋವಾ ಪರ ಆಡುವ ಪ್ರಕ್ರಿಯೆಯು ಕೆಲವು ತಿಂಗಳುಗಳಿಂದ ನಡೆಯುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
"ನಾನು ಉತ್ಸುಕನಾಗಿದ್ದೇನೆ. ಕೆಲವು ತಿಂಗಳುಗಳ ಕಾಲ ಸಿದ್ಧತೆಗಳು ನಡೆದಿವೆ, ಆದರೆ ಸ್ಪಷ್ಟವಾಗಿ ಇಂದು ತಂಡವನ್ನು ಘೋಷಿಸಲಾಗಿದೆ, ಆದ್ದರಿಂದ ನನ್ನ ತಾಯಿಯ ಜನ್ಮಸ್ಥಳವಾದ ದೇಶವನ್ನು ಪ್ರತಿನಿಧಿಸಲು ನಾನು ಉತ್ಸುಕತೆಯನ್ನು ಹೊಂದಿದ್ದೇನೆ. ತರಬೇತಿ ಮತ್ತು ಇತರ ಕ್ಷೇತ್ರಗಳಲ್ಲಿ ಇದು ಹೆಚ್ಚು ಇರುತ್ತದೆ ಎಂದು ನಾನು ಯಾವಾಗಲೂ ಭಾವಿಸಿದ್ದೆ. ನಾನು ಎಂದಿಗೂ ಆಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ, ಆದರೆ ಅವಕಾಶ ಸಿಕ್ಕಂತೆ, ಹೌದು, ಅಲ್ಲಿಗೆ ಹೋಗಿ ಪ್ರತಿನಿಧಿಸಲು ಮತ್ತು ಸಮೋವಾ ಪರ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ," ಎಂದು ಕ್ರಿಕ್‌ಬಜ್‌ಗೆ ರಾಸ್ ಟೇಲರ್ ತಿಳಿಸಿದ್ದಾರೆ.