ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs MI: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಮುಂಬೈಗೆ ಸೋಲುಣಿಸಿದ ಆರ್‌ಸಿಬಿ!

RCB vs MI Match Highlights: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 12 ರನ್‌ಗಳ ರೋಚಕ ಜಯ ಸಾಧಿಸಿದೆ. ಆ ಮೂಲಕ 10 ವರ್ಷಗಳ ಬಳಿಕ ವಾಂಖೆಡೆ ಮುಂಬೈ ಎದುರು ಆರ್‌ಸಿಬಿಗೆ ಮೊದಲ ಜಯ ಇದಾಗಿದೆ.

ಮುಂಬೈ ಇಂಡಿಯನ್ಸ್‌ ಎದುರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ 12 ರನ್‌ ಜಯ.

ಮುಂಬೈ: ಕೊನೆಯ ಓವರ್‌ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbain Indians) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ 12 ರನ್‌ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಬರೋಬ್ಬರಿ 10 ವರ್ಷಗಳ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಎದುರು ಆರ್‌ಸಿಬಿ ಮೊದಲ ಗೆಲುವು ದಾಖಲಿಸಿತು. ಇನ್ನು ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಐದು ಬಾರಿ ಚಾಂಪಿಯನ್ಸ್‌ ತವರು ಅಭಿಮಾನಿಗಳ ಎದುರು ಅಂತಿಮವಾಗಿ ಸೋಲು ಒಪ್ಪಿಕೊಂಡಿತು.

ಸೋಮವಾರ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 222 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್‌ಗೆ ಉತ್ತಮ ಆರಂಭ ತಂದುಕೊಡುವಲ್ಲಿ ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ರಿಯಾನ್‌ ರಿಕೆಲ್ಟನ್‌ ವಿಫಲರಾದರು. ಈ ಇಬ್ಬರೂ ತಲಾ 17 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ವಿಲ್‌ ಜ್ಯಾಕ್ಸ್‌ (22) ಹಾಗೂ ಸೂರ್ಯಕುಮಾರ್‌ ಯಾದವ್‌ (28) ಅವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆ ಮೂಲಕ ಮುಂಬೈ ಇಂಡಿಯನ್ಸ್‌ 12 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 99 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

MI vs RCB: 13000 ಟಿ20 ರನ್‌ ಪೂರ್ಣಗೊಳಿಸಿದ ವಿಶೇಷ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ತಿಲಕ್‌-ಹಾರ್ದಿಕ್‌ ಹೋರಾಟ ವ್ಯರ್ಥ

ಒಂದು ಹಂತದಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಮುಂಬೈ ಇಂಡಿಯನ್ಸ್‌ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮುಂಬೈ ಅಭಿಮಾನಿಗಳು ಕೂಡ ಸಪ್ಪೆ ಮುಖ ಮಾಡಿ ಗ್ಯಾಲರಿಯಲ್ಲಿ ಕುಳಿತಿದ್ದರು. ತಿಲಕ್‌ ವರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ಐದನೇ ವಿಕೆಟ್‌ಗೆ ಮ್ಯಾಜಿಕ್‌ ಮಾಡಿದರು. ಈ ಜೋಡಿ ಕೇವಲ 28 ಎಸೆತಗಳಲ್ಲಿ 88 ರನ್‌ಗಳನ್ನು ಸಿಡಿಸಿತು. ಆ ಮೂಲಕ ಮುಂಬೈ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿತ್ತು. ಈ ಹಾದಿಯಲ್ಲಿ ಅಬ್ಬರಿಸಿದ ತಿಲಕ್‌ ವರ್ಮಾ ಕೇವಲ 29 ಎಸೆತಗಳಲ್ಲಿ 56 ರನ್‌ ಸಿಡಿಸಿದ್ದರೆ, ಹಾರ್ದಿಕ್‌ ಪಾಂಡ್ಯ 280ರ ಸ್ಟ್ರೈಕ್‌ ರೇಟ್‌ನಲ್ಲಿ 15 ಎಸೆತಗಳಲ್ಲಿ45 ರನ್‌ ಸಿಡಿಸಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು.



ಆದರೆ, 18ನೇ ಓವರ್‌ನಲ್ಲಿ ತಮ್ಮ ಚಾಣಾಕ್ಷಣದಿಂದ ತಿಲಕ್‌ ವರ್ಮಾ ಅವರನ್ನು ಭುವನೇಶ್ವರ್‌ ಕುಮಾರ್‌ ಔಟ್‌ ಮಾಡಿದರು. 19ನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅವರನ್ನು ಜಾಶ್‌ ಹೇಝಲ್‌ವುಡ್‌ ಕಟ್ಟಿ ಹಾಕಿದರು. ಕೊನೆಯ ಓವರ್‌ನಲ್ಲಿ ನಮನ್‌ ಧೀರ್‌, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ದೀಪಕ್‌ ಚಹರ್‌ ಅವರನ್ನು ಕೃಣಾಲ್‌ ಪಾಂಡ್ಯ ಔಟ್‌ ಮಾಡಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 209 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಪರ ಕೃಣಾಲ್‌ 4 ವಿಕೆಟ್‌, ಜಾಶ್‌ ಹೇಝಲ್‌ವುಡ್‌ ಹಾಗೂ ಯಶ್‌ ದಯಾಳ್‌ ತಲಾ ಎರಡೆರಡು ವಿಕೆಟ್‌ ಪಡೆದರು.



221 ರನ್‌ಗಳನ್ನು ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ವಿರಾಟ್‌ ಕೊಹ್ಲಿ (67) ಹಾಗೂ ರಜತ್‌ ಪಾಟಿದಾರ್‌(64) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 222 ರನ್‌ಗಳ ಗುರಿಯನ್ನು ನೀಡಿತ್ತು.

ಕೊಹ್ಲಿ-ಪಡಿಕ್ಕಲ್‌ ಜುಗಲ್‌ಬಂದಿ

ವಿರಾಟ್‌ ಕೊಹ್ಲಿ ಜೊತೆ ಇನಿಂಗ್ಸ್‌ ಆರಂಭಿಸಲು ಬಂದಿದ್ದ ಫಿಲ್‌ ಸಾಲ್ಟ್‌, ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿಯೇ ಟ್ರೆಂಟ್‌ ಬೌಲ್ಟ್‌ಗೆ ಬೌಂಡರಿ ಬಾರಿಸಿದ್ದರು. ಆದರೆ, ಎರಡನೇ ಎಸೆತದಲ್ಲಿಯೇ ಕ್ಲೀನ್‌ ಬೌಲ್ಡ್‌ ಆಗಿ ನಿರಾಶೆ ಮೂಡಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌, ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 91 ರನ್‌ಗಳನ್ನು ಕಲೆ ಹಾಕಿ, ಆರ್‌ಸಿಬಿಗೆ ಭದ್ರ ಅಡಿಪಾಯವನ್ನು ಹಾಕಿತ್ತು. ಭರ್ಜರಿ ಬ್ಯಾಟ್‌ ಬೀಸಿದ್ದ ಕನ್ನಡಿಗ ಪಡಿಕ್ಕಲ್‌ 22 ಎಸೆತಗಳಲ್ಲಿ 37 ರನ್‌ಗಳನ್ನು ಸಿಡಿಸಿ ಆರ್‌ಸಿಬಿಗೆ ಸ್ಪೋಟಕ ಆರಂಭ ತಂದುಕೊಟ್ಟು ವಿಕೆಟ್‌ ಒಪ್ಪಿಸಿದ್ದರು.

ವಿರಾಟ್‌ ಕೊಹ್ಲಿ ಅರ್ಧಶತಕ

ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿದ ಬಳಿಕ ವಿರಾಟ್‌ ಕೊಹ್ಲಿ ತಂಡದ ಜವಾಬ್ದಾರಿಯನ್ನು ಹೊತ್ತರು ಹಾಗೂ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಮುಂಬೈ ಬೌಲರ್‌ಗಳಿಗೆ ಮುಲಾಜಿಲ್ಲದೆ ಬ್ಯಾಟ್‌ ಬೀಸಿದ ಕೊಹ್ಲಿ, 42 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 159ಕ್ಕೂ ಹೆಚ್ಚಿನ ಸ್ಟ್ರೈಕ್‌ ರೇಟ್‌ನಲ್ಲಿ 67 ರನ್‌ಗಳನ್ನು ಸಿಡಿಸಿದರು. ಈ ಇನಿಂಗ್ಸ್‌ನೊಂದಿಗೆ ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 13000 ರನ್‌ಗಳನ್ನು ಪೂರ್ಣಗೊಳಿಸಿದರು.



ಅಬ್ಬರಿಸಿದ ರಜತ್‌-ಜಿತೇಶ್‌

ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿದ ಬಳಿಕ ಲಿಯಾಮ್‌ ಲಿವಿಂಗ್‌ಸ್ಟೋನ್‌ ಶೂನ್ಯ ಸಂಪಾದನೆಯಲ್ಲಿ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ಜಿತೇಶ್‌ ಶರ್ಮಾ ಹಾಗೂ ನಾಯಕ ರಜತ್‌ ಪಾಟಿದಾರ್‌ ಅಬ್ಬರಿಸಿದರು ಹಾಗೂ 69 ‌ರನ್‌ಗಳ ಜೊತೆಯಾಟವನ್ನು ಆಡಿದರು. ಸ್ಪೋಟಕ ಬ್ಯಾಟ್‌ ಮಾಡಿದ ರಜತ್‌, ಕೇವಲ 42 ಎಸೆತಗಳಲ್ಲಿ 200ರ ಸ್ಟ್ರೈಕ್‌ ರೇಟ್‌ನಲ್ಲಿ 64 ರನ್‌ ಚಚ್ಚಿದರು. ಆ ಮೂಲಕ ಆರ್‌ಸಿಬಿಯ ಮೊತ್ತವನ್ನು 200ರ ಗಡಿ ದಾಟಿಸಿದರು. ಮತ್ತೊಂದು 210ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 19 ಎಸೆತಗಳಲ್ಲಿ ಅಜೇಯ 40 ರನ್‌ ಸಿಡಿಸಿದರು.



ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 221-5 ( ವಿರಾಟ್‌ ಕೊಹ್ಲಿ 67, ರಜತ್‌ ಪಾಟಿದಾರ್ 64‌, ಜಿತೇಶ್‌ ಶರ್ಮಾ 40*, ದೇವದತ್‌ ಪಡಿಕ್ಕಲ್‌ 37; ಹಾರ್ದಿಕ್‌ ಪಾಂಡ್ಯ 45 ಕ್ಕೆ 2, ಟ್ರೆಂಟ್‌ ಬೌಲ್ಟ್‌ 57ಕ್ಕೆ 2)

ಮುಂಬೈ ಇಂಡಿಯನ್ಸ್‌: ‌20 ಓವರ್‌ಗಳಿಗೆ 209-9 ( ತಿಲಕ್‌ ವರ್ಮಾ 56, ಹಾರ್ದಿಕ್‌ ಪಾಂಡ್ಯ 42,ಸೂರ್ಯಕುಮಾರ್‌ ಯಾದವ್‌ 28; ಕೃಣಾಲ್‌ ಪಾಂಡ್ಯ 45ಕ್ಕೆ 4, ಜಾಶ್‌ ಹೇಝಲ್‌ವುಡ್‌ 37ಕ್ಕೆ 2, ಯಶ್‌ ದಯಾಳ್‌ 46ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ರಜತ್‌ ಪಾಟಿದಾರ್