ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಡೆಲ್ಲಿ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದಾರೆ.
ಆರ್‌ಸಿಬಿ ಹಾಗೂ ಡಿಸಿ ತಂಡಗಳು ಈ ಹಿಂದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಬಾರಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡ, ಆರ್‌ಸಿಬಿಯನ್ನು ಮಣಿಸಿತ್ತು. ಇದೀಗ ಬೆಂಗಳೂರು ತಂಡ, ಡೆಲ್ಲಿಯಲ್ಲಿ ಅಕ್ಷರ್ ಪಟೇಲ್ ಪಡೆಯನ್ನು ಮಣಿಸಿ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.
DC vs RCB: ಇಂದಿನ ಡೆಲ್ಲಿ vs ಆರ್‌ಸಿಬಿ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
ಅಂದ ಹಾಗೆ ಈ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಪಂದ್ಯವನ್ನು ಆಡಿದ್ದ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಲಾಗಿದೆ. ಫಿಲ್ ಸಾಲ್ಟ್ ಅವರ ಬದಲು ಜಾಕೋಬ್ ಬೆಥೆಲ್ ಮುಂದುವರಿದಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದ ರಸಿಖ್ ದಾರ್ ಸಲಾಮ್ ಇದೀಗ ಫಿಟ್ ಆಗಿದ್ದು, ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಈ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋತಿದೆ. ಆ ಮೂಲಕ 10 ಅಂಕಗಳ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 7ರಲ್ಲಿ 4 ಪಂದ್ಯಗಳಲ್ಲಿ ಸೋತಿದ್ದು, ಇನ್ನುಳಿದ ಮೂರರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಮ್ ದಾರ್
ಡೆಲ್ಲಿ ಕ್ಯಾಪಿಟಲ್ಸ್ : ಸಾಹಿಲ್ ಪರಾಖ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಷರ್ ಪಟೇಲ್ (ನಾಯಕ), ದುಷ್ಮಂತ ಚಮೀರಾ, ಕೈಲ್ ಜೇಮಿಸನ್, ಕುಲ್‌ದೀಪ್ ಯಾದವ್, ಟಿ ನಟರಾಜನ್