ರಾಯ್ಪುರ: ಇಲ್ಲಿನ ಶಾಹೀದ್ ವೀರ್ ನಾರಾಯಣ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ (RCB vs KKR) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆರಿಸಿಕೊಂಡಿದ್ದಾರೆ. ಹಾಗಾಗಿ ಎದುರಾಳಿ ಕೆಕೆಆರ್‌ಗೆ ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಆ ಮೂಲಕ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಬೆಂಗಳೂರು ತಂಡ ಯೋಜನೆಯನ್ನು ಹಾಕಿಕೊಂಡಿದೆ.
ಈ ಪಂದ್ಯದ ಟಾಸ್ 07:00ಕ್ಕೆ ಆರಂಭವಾಗಬೇಕಿತ್ತು, ಆದರೆ ಮಳೆಯ ಕಾರಣ ಈ ಪಂದ್ಯದ ಟಾಸ್ ಒಂದೂವರೆ ಗಂಟೆ ತಡವಾಗಿ ನಡೆಸಲಾಗಿದೆ. ಅಂದರೆ 8:30ಕ್ಕೆ ಪಂದ್ಯದ ಟಾಸ್ ನಡೆದಿದ್ದು, ಮೊದಲನೇ ಓವರ್ 8:45ಕ್ಕೆ ಆರಂಭವಾಯಿತು. ಒಂದೂವರೆ ಗಂಟೆ ತಡವಾದರೂ ಓವರ್‌ಗಳನ್ನು ಕಡಿಮೆ ಮಾಡಲಾಗಿಲ್ಲ. 20 ಓವರ್‌ಗಳನ್ನು ಆಡಿಸಲಾಗುತ್ತದೆ.
ಆರ್‌ಸಿಬಿ ಪ್ಲೇಯಿಂಗ್ Xiನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ರೊಮ್ಯಾರಿಯೊ ಶೆಫರ್ಡ್ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಅವರನ್ನು ತರಲಾಗಿದೆ ಹಾಗೂ ವಿದೇಶಿ ಆಟಗಾರನ ಸ್ಥಾನಕ್ಕೆ ಜೇಕಬ್ ಡಫಿ ಅವರನ್ನು ಕರೆ ತಂದಿದ್ದು, ಸುಯಾಶ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಕೆಕೆಆರ್ ಪ್ಲೇಯಿಂಗ್ Xiನಲ್ಲಿ ಒಂದು ಬದಲಾವಣೆ ತರಲಾಗಿದ್ದು, ವರುಣ್ ಚಕ್ರವರ್ತಿ ಸ್ಥಾನಕ್ಕೆ ಸೌರಭ್ ದುಬೇಗೆ ಅವಕಾಶ ನೀಡಲಾಗಿದೆ.
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಪಡೆದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳ ಮೂಲಕ ಎರಡನೇ ಸ್ಥಾನದಲ್ಲಿದೆ ಹಾಗೂ ಪ್ಲೇಆಫ್ಸ್‌ಗೆ ಸನಿಹವಾಗಿದೆ. ಅಂದ ಹಾಗೆ ಕಳೆದ ಪಂದ್ಯವನ್ನು ಕೂಡ ಇದೇ ಅಂಗಣದಲ್ಲಿ ಆರ್‌ಸಿಬಿ ಆಡಿತ್ತು. ಆದರೆ, ಮುಂಬೈ ಇಂಡಿಯನ್ಸ್ ಎದುರು ಕಠಿಣ ಹೋರಾಟ ನಡೆಸಿ ಕೊನೆಯ ಎಸೆತದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸಿತ್ತು.
ಆದರೆ, ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡ, ಈ ಟೂರ್ನಿಯ ಮೊದಲ ಅವಧಿಯಲ್ಲಿ ಸಾಲು-ಸಾಲು ಸೋಲುಗಳನ್ನು ಅನುಭವಿಸಿತ್ತಾದರೂ ಎರಡನೇ ಅವಧಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಕೋಲ್ಕತಾ ತಂಡ 9 ಅಂಕಗಳ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎಂಟನೇ ಸ್ಥಾನದಲ್ಲಿದೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಕೆಕೆಆರ್ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಉಭಯ ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳುರು: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ರಸಿಖ್ ಸಲಾಮ್ ದಾರ್, ಜೇಕಬ್ ಡಫಿ
ಕೋಲ್ಕತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ಫಿನ್ ಆಲೆನ್, ಆಂಗ್‌ಕೃಷ್ ರಘುವಂಶಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ರಿಂಕು ಸಿಂಗ್, ಸುನೀಲ್ ನರೇನ್, ಅನುಕುಲ್ ರಾಯ್, ಕಾರ್ತಿಕ್ ತ್ಯಾಗಿ, ವೈಭವ್ ಅರೋರಾ