ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs PBKS: ಪಂಜಾಬ್‌ ಕಿಂಗ್ಸ್‌ಗೆ ಮೊದಲನೇ ಸೋಲಿನ ರುಚಿ ತೋರಿಸಿದ ರಾಜಸ್ಥಾನ್‌ ರಾಯಲ್ಸ್!‌

RR vs PBKS Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಜಸ್ಥಾನ್‌ ರಾಯಲ್ಸ್‌, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 18ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆರ್‌ಆರ್‌ ಪರ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದ ಜೋಫ್ರಾ ಆರ್ಚರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಪಂಜಾಬ್‌ ಕಿಂಗ್ಸ್‌ ವಿರುದ್ಧ ಮೂರು ವಿಕೆಟ್‌ ಕಿತ್ತು ಮಿಂಚಿದ ಜೋಫ್ರಾ ಆರ್ಚರ್‌.

ಚಂಡೀಗಢ: ಯಶಸ್ವಿ ಜೈಸ್ವಾಲ್‌ (67) ಅರ್ಧಶತಕ ಹಾಗೂ ಜೋಫ್ರಾ ಆರ್ಚರ್‌ (25 ಕ್ಕೆ 3) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 18ನೇ ಪಂದ್ಯದಲ್ಲಿ (RR vs PBKS) ಪಂಜಾಬ್‌ ಕಿಂಗ್ಸ್‌ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಈ ಪಂದ್ಯದ ಗೆಲುವಿನ ಮೂಲಕ ಆರ್‌ಆರ್‌ (Rajasthan Royals) ಪಾಯಿಂಟ್ಸ್‌ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ಈ ಆವೃತ್ತಿಯಲ್ಲಿ ಮೊದಲ ಸೋಲು ಅನುಭವಿಸಿದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ (Punjab Kings) ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಶನಿವಾರ ಇಲ್ಲಿನ ಮುಲ್ಲಾನ್‌ಪುರದ ಯದವೀಂದ್ರ ಸಿಂಗ್‌ ಇಂಟರ್‌ನ್ಯಾನಷಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿದ್ದ 206 ರನ್‌ಗಳ ಕಠಿಣ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌, ನೆಹಾಲ್‌ ವಧೇರಾ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಠಿಣ ಹೋರಾಟದ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸೋಲು ಒಪ್ಪಿಕೊಂಡಿತು. ತನ್ನ ಪಾಲಿನ 20 ಓವರ್‌ಗಳನ್ನು ಮುಗಿಸಿದರೂ ಪಂಜಾಬ್‌ ಕಿಂಗ್ಸ್‌ 9 ವಿಕೆಟ್‌ಗಳನ್ನು ಕಳೆದುಕೊಂಡು 155 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಪರ ಮೊದಲನೇ ಸೋಲು ಅನುಭವಿಸಿತು.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ನ ಹ್ಯಾಟ್ರಿಕ್‌ ಸೋಲಿಗೆ ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಪಂಜಾಬ್‌ಗೆ ಆರಂಭಿಕ ಶಾಕ್‌ ನೀಡಿದ್ದ ಆರ್ಚರ್‌

ಕಠಿಣ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ಗೆ ಮಾರಕ ವೇಗಿ ಜೋಫ್ರಾ ಆರ್ಚರ್‌ ಆರಂಭಿಕ ಆಘಾತ ನೀಡಿದರು. ಆರಂಭಿಕ ಪ್ರಿಯಾಂಶ್‌ ಆರ್ಯ ಅವರನ್ನು ಮೊಟ್ಟ ಮೊದಲ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಮಾಡಿದ್ದ ಆರ್ಚರ್‌, ನಂತರ ಆರನೇ ಎಸೆತದಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಕೂಡ ಬೌಲ್ಡ್‌ ಮಾಡಿದ್ದರು. ಆ ಮೂಲಕ 11 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌, ನಂತರ ಪ್ರಭ್‌ಸಿಮ್ರಾನ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಅವರನ್ನು ಕೂಡ ಕಳೆದುಕೊಂಡಿತ್ತು. ಇದರೊಂದಿಗೆ ಪಂಜಾಬ್‌ ಕೇವಲ 43 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.



ನೆಹಾಲ್‌ ವಧೇರಾ-ಮ್ಯಾಕ್ಸ್‌ವೆಲ್‌ ಕಠಿಣ ಹೋರಾಟ

ಅಗ್ರ ನಾಲ್ಕು ಕ್ರಮಾಂಕಗಳ ಬ್ಯಾಟ್ಸ್‌ಮನ್‌ಗಳು ಬೇಗ ವಿಕೆಟ್‌ ಒಪ್ಪಿಸಿದ ಬಳಿಕ ಜೊತೆಯಾದ ನೆಹಾಲ್‌ ವಧೇರಾ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೆಲ ಕಾಲ ಸ್ಪೋಟಕ ಬ್ಯಾಟಿಂಗ್‌ ನಡೆಸಿ 88 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಪಂಜಾಬ್‌ಗೆ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ಈ ಹಾದಿಯಲ್ಲಿ ವಧೇರಾ ಕೇವಲ 41 ಎಸೆತಗಳಲ್ಲಿ 62 ರನ್‌ಗಳನ್ನು ಸಿಡಿಸಿದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ 30 ರನ್‌ ಸಿಡಿಸಿದ್ದರು. ಆದರೆ, ಶ್ರೀಲಂಕಾ ಸ್ಪಿನ್ನರ್‌ಗಳಾದ ಮಹೇಶ್‌ ತೀಕ್ಷಣ ಮತ್ತು ವಾನಿಂದು ಹಸರಂಗ ಈ ಇಬ್ಬರನ್ನು ಕ್ರಮವಾಗಿ 15 ಮತ್ತು 16ನೇ ಓವರ್‌ಗಳಲ್ಲಿ ಔಟ್‌ ಮಾಡಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅಂತಿಮವಾಗಿ ಪಂಜಾಬ್‌ ಸೋಲು ಅನುಭವಿಸಿತು.

ತವರಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಹ್ಯಾಟ್ರಿಕ್‌ ಸೋಲಿನ ಮುಖಭಂಗ, ಡೆಲ್ಲಿಗೆ ಸತತ ಮೂರನೇ ಜಯ!

205 ರನ್‌ ಸಿಡಿಸಿದ್ದ ರಾಜಸ್ಥಾನ್‌ ರಾಯಲ್ಸ್

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ಯಶಸ್ವಿ ಜೈಸ್ವಾಲ್‌ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ‌206 ರನ್‌ಗಳ ಗುರಿಯನ್ನು ನೀಡಿತ್ತು. ಯಶಸ್ವಿ ಜೈಸ್ವಾಲ್‌ 67 ರನ್‌ ಸಿಡಿಸಿದ್ದರೆ, ಸಂಜು ಸ್ಯಾಮ್ಸನ್‌ 38 ರನ್‌ ಹಾಗೂ ರಿಯಾನ್‌ ಪರಾಗ್‌ 43 ರನ್‌ಗಳನ್ನು ಸಿಡಿಸಿದ್ದರು.



ಯಶಸ್ವಿ ಜೈಸ್ವಾಲ್‌ ಅರ್ಧಶತಕ

ಕಳೆದ ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಯಶಸ್ವಿ ಜೈಸ್ವಾಲ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ ತಮ್ಮ ಹಳೆಯ ಆಟವನ್ನು ಹೊರ ತಂದರು. ನಾಯಕ ಸಂಜು ಸ್ಯಾಮ್ಸನ್‌ ಜೊತೆ 89 ರನ್‌ಗಳ ಜೊತೆಯಾಟವನ್ನು ಆಡಿದ್ದ ಯಶಸ್ವಿ ಜೈಸ್ವಾಲ್‌ 45 ಎಸೆತಗಳಲ್ಲಿ 67 ರನ್‌ಗಳನ್ನು ಸಿಡಿಸಿ ರಾಜಸ್ಥಾನ್‌ ರಾಯಲ್ಸ್‌ಗೆ ಭರ್ಜರಿ ಆರಂಭವನ್ನು ನೀಡಿ ವಿಕೆಟ್‌ ಒಪ್ಪಿಸಿದ್ದರು. ಇದಕ್ಕೂ ಮುನ್ನ ಸಂಜು 38 ರನ್‌ಗಳಿಸಿ ಔಟ್‌ ಆಗಿದ್ದರು. ಇವರಿಬ್ಬರೂ ಔಟ್‌ ಆದ ಬಳಿಕ ರಿಯಾನ್‌ ಪರಾಗ್‌ ಕೇವಲ 25 ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸಿ ಆರ್‌ಆರ್‌ 200ರ ಗಡಿ ದಾಟಿಸಲು ನೆರವು ನೀಡಿದ್ದರು.

ಸ್ಕೋರ್‌ ವಿವರ

ರಾಜಸ್ಥಾನ್‌ ರಾಯಲ್ಸ್:‌ 20 ಓವರ್‌ಗಳಿಗೆ 2025-4 (ಯಶಸ್ವಿ ಜೈಸ್ವಾಲ್‌ 67, ರಿಯಾನ್‌ ಪರಾಗ್‌ 43, ಸಂಜು ಸ್ಯಾಮ್ಸನ್‌ 38; ಲಾಕಿ ಫರ್ಗ್ಯೂಸನ್‌ 37ಕ್ಕೆ 2)

ಪಂಜಾಬ್‌ ಕಿಂಗ್ಸ್‌: 20 ಓವರ್‌ಗಳಿಗೆ 155-9 (ನೆಹಾಲ್‌ ವಧೇರಾ 62, ಗ್ಲೆನ್‌ ಮ್ಯಾಕ್ಸ್‌ವೆಲ್‌ 30; ಜೋಫ್ರಾ ಆರ್ಚರ್‌ 25ಕ್ಕೆ 3, ಸಂದೀಪ್‌ ಶರ್ಮಾ 21ಕ್ಕೆ 2, ಮಹೇಶ ತೀಕ್ಷಣ 26 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜೋಫ್ರಾ ಆರ್ಚರ್‌