ಬೆಂಗಳೂರು: ವಿಶ್ವಕಪ್ (Women's Blind T20 World Cup) ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ (Indian Women’s blind cricket team) ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಭಿನಂದಿಸಿದ್ದಾರೆ. ಭಾರತ ಅಂಧರ ಕ್ರಿಕೆಟ್ ತಂಡದಲ್ಲಿ ಆಡಿದ ಕರ್ನಾಟಕದ ಆಟಗಾರ್ತಿಯರಿಗ ತಲಾ ಹತ್ತು ಲಕ್ಷ ರು. ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗವನ್ನು ಸ್ವತಃ ಸಿಎಂ ಘೋಷಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಕ್ರಿಕೆಟ್ ತಂಡದ ಪ್ರತೀ ಆಟಗಾರರನ್ನು ವೈಯುಕ್ತಿಕವಾಗಿ ಅಭಿನಂಧಿಸಿದ ಅವರು, ಈ ಘೋಷಣೆಯನ್ನು ಮಾಡಿದರು. ಹಾಗೆಯೇ ಭಾರತ ತಂಡದ ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ತಂಡದ ಆಟಗಾರ್ತಿಯರಿಗೂ ತಲಾ 2 ಲಕ್ಷ ರು ನಗದು ಬಹುಮಾನವನ್ನು ಘೋಷಣೆ ಮಾಡಿದರು.
ತಂಡದಲ್ಲಿದ್ದ ಇತರೆ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ 2 ಲಕ್ಷ ರು ನಗದು ಬಹುಮಾನ ಸಿಗಲಿದೆ. ತಂಡದ ನಾಯಕಿ ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ಸಿಎಂ ಸಿದ್ದರಾಮಯ್ಯ ವಿಶೇಷವಾಗಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಉಪಸ್ಥಿತರಿದ್ದು, ಆಟಗಾರ್ತಿಯರಿಗೆ ಶುಭ ಹಾರೈಸಿದರು.
ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ಅಂಧರ ಮಹಿಳಾ ತಂಡ
ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ದೀಪಿಕಾ ನಾಯಕತ್ವದ ಭಾರತ ತಂಡ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ತನ್ನ ಆಯ್ಕೆಗೆ ತಕ್ಕ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಎದುರಾಳಿ ಭಾರತೀಯ ಬೌಲರ್‌ಗಳು ಎದುರಾಳಿ ನೇಪಾಳ ತಂಡವನ್ನು 5 ವಿಕೆಟ್‌ಗಳಿಗೆ 114 ರನ್‌ಗೆ ಕಟ್ಟಿ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಭಾರತ ಮಹಿಳಾ ತಂಡ 12 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 117 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಚೇಸಿಂಗ್ ವೇಳೆ ಭಾರತದ ಪರ ಪೂಲಾ ಸೊರೆನ್ ಅವರು 27 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 162.96ರ ಸ್ಟ್ರೈಕ್ ರೇಟ್‌ನಲ್ಲಿ 44 ರನ್ ಗಳಿಸಿದರು. ಅವರ ಅದ್ಭುತ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.