ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿ ದ್ವಿಶತಕ ಬಾರಿಸಿದರೂ ಕಳವಳ ವ್ಯಕ್ತಪಡಿಸಿದ ಸಂಜಯ್‌ ಮಾಂಜ್ರೇಕರ್‌!

ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಸೂರ್ಯವಂಶಿ 53 ಎಸೆತಗಳಲ್ಲಿ 204 ರನ್ ಸಿಡಿಸಿದರು. ಅವರ ಅದ್ಭುತ ಆಟವನ್ನು ಮೆಚ್ಚಿದ ಸಂಜಯ್ ಮಾಂಜ್ರೇಕರ್, ಆಧುನಿಕ ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಪ್ರಾಬಲ್ಯ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸಮತೋಲನದ ಅಗತ್ಯವನ್ನು ಒತ್ತಿಹೇಳಿದ್ದಾರೆ.

ವೈಭವ್‌ ಸೂರ್ಯವಂಶಿ ದಾಖಲೆಯ ಇನಿಂಗ್ಸ್‌ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರತಿಕ್ರಿಯೆ.

ನವದೆಹಲಿ: ಯುಎಇ ವಿರುದ್ಧದ ಐತಿಹಾಸಿಕ ಇನಿಂಗ್ಸ್‌ಗಾಗಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಭಾರತದ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ (Sanjay manjrekar) ಶ್ಲಾಘಿಸಿದರು. ಇದೇ ವೇಳೆ, ಸೀಮಿತ ಓವರ್‌ಗಳ ಕ್ರಿಕೆಟ್ ಬ್ಯಾಟರ್‌ಗಳ ಪರವಾಗಿ ಎಷ್ಟು ಹೆಚ್ಚು ವಾಲಿದೆ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು. ದೋಹಾದಲ್ಲಿ ನಡೆದಿದ್ದ 'ಏಷ್ಯಾ ಕಪ್ ಮೆನ್ಸ್ ರೈಸಿಂಗ್ ಸ್ಟಾರ್ಸ್' ಟೂರ್ನಿಯಲ್ಲಿ ಮಂಗಳವಾರದಂದು ಯುಎಇ ವಿರುದ್ಧ ಭಾರತ 'ಎ' (India A) ತಂಡದ ಪರ ಆಡಿದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್‌ಗಳನ್ನು ಸಿಡಿಸಿದ್ದರು.

ಈ ಅದ್ಭುತ ಇನಿಂಗ್ಸ್‌ನಲ್ಲಿ ಅವರು 7 ಬೌಂಡರಿಗಳು ಮತ್ತು ದಾಖಲೆ ಮುರಿಯುವ 28 ಸಿಕ್ಸರ್‌ಗಳನ್ನು ಬಾರಿಸಿದ್ದರು. ಬುಧವಾರ ಮಾಂಜ್ರೇಕರ್ ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್‌' ಖಾತೆಯಲ್ಲಿ, "ವೈಭವ್‌ ಅವರರಲ್ಲಿ ಏನೋ ವಿಶೇಷವಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅವರು ಮಾಡಿದ್ದು, ಸೀಮಿತ ಓವರ್‌ಗಳ ಕ್ರಿಕೆಟ್ ಎಷ್ಟು ಅತಿಯಾದ (ಅಸಂಬದ್ಧ) ಮಟ್ಟವನ್ನು ತಲುಪಿದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ. ಅಭಿಮಾನಿಗಳು ಇದನ್ನೇ ನೋಡಲು ಬಯಸುತ್ತಾರೆ ಎಂದು ಭಾವಿಸುವುದು ತಪ್ಪು ಕಲ್ಪನೆ. ಈ ಆಟವು ಬ್ಯಾಟ್ ಮತ್ತು ಚೆಂಡು ಎರಡನ್ನೂ ಒಳಗೊಂಡಿರುತ್ತದೆ, ಕೇವಲ ಬ್ಯಾಟ್ ಒಂದನ್ನೇ ಅಲ್ಲ," ಎಂದು ಬರೆದುಕೊಂಡಿದ್ದಾರೆ.

52 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ವೈಭವ್‌ ಸೂರ್ಯವಂಶಿಗೆ ಯುವರಾಜ್‌ ಸಿಂಗ್‌ ವಿಶೇಷ ಸಂದೇಶ

ಏಕೈಕ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳು ಉಡೀಸ್‌

ತಮ್ಮ ಇನಿಂಗ್ಸ್‌ನಲ್ಲಿ 15 ವರ್ಷದ ವೈಭವ್ 'ಲಿಸ್ಟ್ ಎ' (List A) ಕ್ರಿಕೆಟ್‌ನ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವರು ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದರು - ಇದು 'ಲಿಸ್ಟ್ ಎ' ಕ್ರಿಕೆಟ್‌ನ ಈ ಸ್ವರೂಪದಲ್ಲಿ ಅತಿ ವೇಗದ ಶತಕವಾಗಿದೆ. ನಂತರ, ಅತಿ ವೇಗದ 150 ರನ್‌ಗಳ ತಮ್ಮದೇ ಆದ ದಾಖಲೆಯನ್ನು ಅವರು ಮುರಿದರು. ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ, ಅವರು 'ಲಿಸ್ಟ್ ಎ' ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.

ಈ ಇನಿಂಗ್ಸ್‌ನಲ್ಲಿ ಅವರು ಬಾರಿಸಿದ 28 ಸಿಕ್ಸರ್‌ಗಳು, 'ಲಿಸ್ಟ್ ಎ' ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ. ಇದಲ್ಲದೆ, ಅವರ 384.90 ಸ್ಟ್ರೈಕ್ ರೇಟ್, ಈ ಸ್ವರೂಪದಲ್ಲಿ ಶತಕ ಬಾರಿಸಿದ ಆಟಗಾರರ ಪೈಕಿ ದಾಖಲಾದ ಅತ್ಯಧಿಕ ಸ್ಟ್ರೈಕ್ ರೇಟ್ ಆಗಿದೆ.

IND A vs UAE A: 52 ಎಸೆತಗಳಲ್ಲಿ ಡಬಲ್‌ ಸೆಂಚುರಿ, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಮಾಂಜ್ರೇಕರ್ ಹೇಳಿಕೆಯಿಂದ ಚರ್ಚೆ ಆರಂಭ

ಮಾಂಜ್ರೇಕರ್ ಅವರ ಈ ಹೇಳಿಕೆಯು, ಸೀಮಿತ ಓವರ್‌ಗಳ ಕ್ರಿಕೆಟ್ ಬ್ಯಾಟರ್‌ಗಳ ಪರವಾಗಿ ಅತಿಯಾಗಿ ವಾಲಿದೆಯೇ ಮತ್ತು ಇದರಿಂದ ಬೌಲರ್‌ಗಳಿಗೆ ರನ್ ಹರಿವನ್ನು ತಡೆಯುವುದು ಹೆಚ್ಚು ಕಷ್ಟಕರವಾಗಿದೆಯೇ ಎಂಬ ವಿಶಾಲ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ಸ್ಫೋಟಕ ಇನಿಂಗ್ಸ್‌ಗೂ ಮೊದಲು, ದೋಹಾದಲ್ಲಿ ನಡೆದ ಪಂದ್ಯಗಳಲ್ಲಿ ಸೂರ್ಯವಂಶಿ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ; ಅವರು ನೇಪಾಳದ ವಿರುದ್ಧ 26 ರನ್ ಮತ್ತು ಪಾಕಿಸ್ತಾನ 'ಎ' ವಿರುದ್ಧ 11 ರನ್ ಗಳಿಸಿದ್ದರು. ಇದಲ್ಲದೆ, ಇಂದೋರ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ ಬಿಹಾರ ತಂಡಕ್ಕಾಗಿ ಆಡುವಾಗ, ಅವರು 18 ರನ್‌ಗಳಿಗೆ ಔಟಾಗಿದ್ದರು. ಈ ಪಂದ್ಯದಲ್ಲಿ ಅವರು ಮೊದಲ ಬಾರಿ ತಮ್ಮ ರಾಜ್ಯ ತಂಡದ ನಾಯಕತ್ವ ವಹಿಸಿದ್ದರು.