ನವದೆಹಲಿ: ಕಳೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ (KKR) ವೈಫಲ್ಯ ಅನುಭವಿಸಲು 2024ರ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ರಿಲೀಸ್ ಮಾಡಿದ್ದೇ ಕಾರಣ ಎಂದು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (Anil Kumble) ಅಭಿಪ್ರಾಯಪಟ್ಟಿದ್ದಾರೆ. ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಕೆಕೆಆರ್ ವಿಫಲವಾಗಿತ್ತು. ಇದು ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. 2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್, ಮೂರನೇ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಕೋಲ್ಕತಾ ಫ್ರಾಂಚೈಸಿ ಮನಸು ಮಾಡಲಿಲ್ಲ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಅನಿಲ್ ಕುಂಬ್ಳೆ, ಪ್ರಶಸ್ತಿ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಎರಡು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದ ಫ್ರಾಂಚೈಸಿಯ ನಿರ್ಧಾರವನ್ನು ಟೀಕಿಸಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಹುದ್ದೆಯನ್ನು ತೊರೆದ ಕೆವಿನ್ ಪೀಟರ್ಸನ್!
“ಎರಡು ವರ್ಷಗಳ ಹಿಂದೆ ಕೆಕೆಆರ್ ಐಪಿಎಲ್ ಗೆದ್ದು ತಮ್ಮ ಮೂರನೇ ಕಿರೀಟವನ್ನು ಎತ್ತಿಕೊಂಡಿತ್ತು. ಆ ಜಯದಲ್ಲಿ ಎರಡು ಪ್ರಮುಖ ಆಟಗಾರರು ಶ್ರೇಯಸ್ ಅಯ್ಯರ್ ಹಾಗೂ ಫಿಲ್ ಸಾಲ್ಟ್. ಇಬ್ಬರೂ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಆದರೆ ಕೆಕೆಆರ್ ಇಬ್ಬರನ್ನೂ ಬಿಡುವ ನಿರ್ಧಾರ ತೆಗೆದುಕೊಂಡಿತು. ಆಟಗಾರರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಅವರ ಬಳಿ ಯಾವುದೇ ಸ್ಥಿರತೆ ಕಾಣಿಸುತ್ತಿಲ್ಲ. ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಅವರನ್ನು ಬಿಡುವ ಮೂಲಕ ಕೆಕೆಆರ್ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಅದರ ಪರಿಣಾಮವಾಗಿ ತಂಡ ಈಗ ಐಪಿಎಲ್ ಗೆದ್ದ ನಾಯಕನಿಲ್ಲದ ಪರಿಸ್ಥಿತಿಗೆ ತಲುಪಿದೆ,” ಎಂದು ಕುಂಬ್ಳೆ ಹೇಳಿದ್ದಾರೆ.
ಅಜಿಂಕ್ಯ ರಹಾನೆ ಬಗ್ಗೆ ಕಂಬ್ಳೆ ಪ್ರತಿಕ್ರಿಯೆ
ಅಜಿಂಕ್ಯ ರಹಾನೆ ಅವರು ಎಲ್ಲಾ ಹಂತದಲ್ಲಿಯೂ ಅನುಭವಿ ಆಟಗಾರ. ಆದರೆ, ಅವರು ಐಪಿಎಲ್ ಗೆದ್ದಿಲ್ಲ ಹಾಗೂ ಐಪಿಎಲ್ ಗೆದ್ದ ನಾಯಕನ ಮೌಲ್ಯವನ್ನು ಅವರು ತಂದುಕೊಡಲು ಸಾಧ್ಯವಿಲ್ಲ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
“ಹೌದು, ಅಜಿಂಕ್ಯ ರಹಾನೆ ಅನುಭವಿ ಆಟಗಾರ. ಅವರು ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಹಾಗೂ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಅವರು ನಾಯಕನಾಗಿ ಇನ್ನೂ ಐಪಿಎಲ್ ಕಿರೀಟವನ್ನು ಗೆದ್ದಿಲ್ಲ. ಈಗಾಗಲೇ ಟ್ರೋಫಿ ಗೆದ್ದಿರುವ ನಾಯಕನಿದ್ದರೆ ಅದು ತಂಡಕ್ಕೆ ಹೆಚ್ಚುವರಿ ಲಾಭ ನೀಡುತ್ತದೆ,” ಎಂದು ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2026: ಆರ್‌ಸಿಬಿ ತಂಡದ ಅಧಿಕೃತ ಜೆರ್ಸಿ ಖರೀದಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ..
ಅನಿಲ್ ಕುಂಬ್ಳೆ ಅವರ ಅಭಿಪ್ರಾಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಶಸ್ತಿಗಾಗಿ ಬಲಿಷ್ಠವಾಗಿ ಪೈಪೋಟಿ ನೀಡಬೇಕೆಂದರೆ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವುದನ್ನು ಕಲಿಯಬೇಕು ಎಂದಿದ್ದಾರೆ.
“ಕೆಕೆಆರ್ ಆ ಲಾಭವನ್ನು ಕಳೆದುಕೊಂಡಿದೆ. ಪ್ರಮುಖ ಆಟಗಾರರನ್ನು ಹೇಗೆ ತಂಡದಲ್ಲೇ ಉಳಿಸಿಕೊಳ್ಳಬೇಕು ಎಂಬುದನ್ನು ಅವರು ಕಲಿಯಬೇಕು. ಇಲ್ಲವಾದರೆ ಅವರು ಸದಾ ಹೋರಾಟದಲ್ಲೇ ಇರುತ್ತಾರೆ ಮತ್ತು ಟ್ರೋಫಿ ಗೆಲ್ಲುವ ಪ್ರಮುಖ ಫೇವರಿಟ್ ತಂಡವೆಂದು ಪರಿಗಣಿಸಲಾಗುವುದಿಲ್ಲ,” ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.