ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್!

ದೆಹಲಿ ವಿರುದ್ಧದ ಹಿರಿಯ ಮಹಿಳೆಯರ ಟಿ20 ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಶ್ರೇಯಾಂಕ ಪಾಟೀಲ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. 29 ಎಸೆತಗಳಲ್ಲಿ 71 ರನ್ ಗಳಿಸಿದ ಅವರು ಭಾರತ ತಂಡಕ್ಕೆ ಮರಳುವ ತಮ್ಮ ಹಂಬಲವನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಆಯ್ಕೆಗಾರರಿಗೆ ಮತ್ತೊಮ್ಮೆ ತೋರಿಸಿದ್ದಾರೆ.

20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶ್ರೇಯಾಂಕ ಪಾಟೀಲ್‌.

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವ ಕರ್ನಾಟಕದ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ (Shreyank Patil) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ದೆಹಲಿ ವಿರುದ್ಧ ನಡೆದ ಹಿರಿಯ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯ ( Women's T20 Trophy Super League) ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನವೆಂಬರ್ 18ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಬಿ ಗ್ರೌಂಡ್ ಮೈದಾನದಲ್ಲಿ ನಡೆದಿದ್ದ ಸೂಪರ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಪರ ಆಡಿದ ಶ್ರೇಯಾಂಕ ಪಾಟೀಲ್ ಸಿಕ್ಸರ್ ಸಿಡಿಸುವ ಮೂಲಕ ಕೇವಲ 20 ಎಸೆತಗಳಲ್ಲಿ ತಮ್ಮ ಚೊಚ್ಚಲ ಟಿ20 ಅರ್ಧಶತಕ ಪೂರೈಸಿದರು. ಈ ಪಂದ್ಯದಲ್ಲಿ ಅವರು ಒಟ್ಟು 29 ಎಸೆತಗಳನ್ನು ಎದುರಿಸಿ 71 ರನ್ ಸಿಡಿಸಿದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳು ಸೇರಿವೆ.

ಕರ್ನಾಟಕ ತಂಡ 12.1 ಓವರ್‌ಗಳಲ್ಲಿ 84 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಶ್ರೇಯಾಂಕ, ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಅವರ ನೆರವಿನಿಂದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

IPL 2027: ಮಿನಿ ಹರಾಜಿಗೆ ಬಿಡುಗಡೆಯಾದ ಟಾಪ್‌ 10 ಸ್ಟಾರ್‌ ಆಟಗಾರರ ವಿವರ!

ಆದರೆ ಶ್ರೇಯಾಂಕ ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ದೆಹಲಿ ತಂಡ 17 ಓವರ್‌ಗಳಲ್ಲೇ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಐದು ವಿಕೆಟ್‌ಗಳ ಗೆಲುವು ದಾಖಲಿಸಿತು.

ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್‌ನಲ್ಲೂ ಶ್ರೇಯಾಂಕ ಮಿಂಚು

ಈ ಟೂರ್ನಿಯಲ್ಲಿ ಶ್ರೇಯಾಂಕ ಪಾಟೀಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದು, ಎರಡು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್‌ನಲ್ಲೂ 143 ರನ್ ಗಳಿಸಿರುವ ಅವರು 71.50ರ ಸರಾಸರಿ ಹಾಗೂ 204.28ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ದೆಹಲಿ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿದ್ದರೂ 4 ಓವರ್‌ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮುನ್ನ ವಿದರ್ಭ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅಜೇಯ 33 ರನ್ ಸಿಡಿಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

IND vs NZ: ಜಸ್‌ಪ್ರೀತ್‌ ಬುಮ್ರಾಗೆ ಸೂಕ್ತ ಯೋಜನೆ ರೂಪಿಸಿದ್ದೇವೆಂದ ಟಾಮ್‌ ಲೇಥಮ್‌!

ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿ ಶ್ರೇಯಾಂಕ

ಶ್ರೇಯಾಂಕಾ ಪಾಟೀಲ್ ಇತ್ತೀಚೆಗೆ ಭಾರತ ತಂಡದ ಆಯ್ಕೆ ವಿಚಾರದಲ್ಲಿ ನಿರಾಸೆ ಅನುಭವಿಸಿದ್ದರು. ಜಿಂಬಾಬ್ವೆ ವಿರುದ್ಧದ ಸರಣಿಗೆ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟಿಸಲಾದ ಭಾರತ ತಂಡದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದ ಅಭಿಯಾನದ ವೇಳೆ ಕೊನೆಯ ಬಾರಿಗೆ ಅವರು ಭಾರತ ಪರ ಆಡಿದ್ದರು.



ಆದರೆ ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶ್ರೇಯಾಂಕಾ ಅವರಿಗೆ ಮತ್ತೆ ಭಾರತ ತಂಡದ ಬಾಗಿಲು ತೆರೆಯುವ ಸಾಧ್ಯತೆಯಿದೆ. ಮುಂಬರುವ ಇಂಗ್ಲೆಂಡ್ ಎ ವಿರುದ್ಧದ ಸರಣಿಗೆ ಪ್ರಕಟಿಸಿರುವ ಭಾರತ ಎ ತಂಡದ ಮೂರೂ ಮಾದರಿಗಳ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ.

ನವೆಂಬರ್ 30ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಟಿ20, ಏಕದಿನ ಹಾಗೂ ಬಹುದಿನಗಳ ಪಂದ್ಯಗಳಲ್ಲಿ ಆಡುವ ಅವಕಾಶ ಶ್ರೇಯಾಂಕಾಗೆ ಸಿಗಲಿದೆ. ಆ ಮೂಲಕ ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಅವರಿಗೆ ಉತ್ತಮ ವೇದಿಕೆ ದೊರೆತಿದೆ.