ಮ್ಯಾಂಚೆಸ್ಟರ್: ಭಾರತ ಟಿ20ಐ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ (Shreyas Iyer) ಅವರು ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಶನಿವಾರ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿಯೂ (IND vs ENG) ಭಾರತ ತಂಡ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಟೀಮ್ ಇಂಡಿಯಾ ಗೆಲುವು ಕಾಣದೆ ಸಾಗುತ್ತಿದೆ. ಇದರ ಪರಿಣಾಮ ಭಾರತ ತಂಡದ ನಾಯಕನಾಗಿ ಶ್ರೇಯಸ್ ಅನಗತ್ಯ ದಾಖಲೆಯನ್ನು ತಮ್ಮ ಹೆಗಲೇರಿಸಿಕೊಂಡಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಹೊರತಾಗಿಯೂ ಸತತ ಬ್ಯಾಟಿಂಗ್ ವೈಫಲ್ಯದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೇವಲ ನಾಯಕತ್ವದಿಂದ ಮಾತ್ರವಲ್ಲ, ತಂಡದ ಆಟಗಾರನ ಸ್ಥಾನವನ್ನು ಕೂಡ ಕಸಿದುಕೊಳ್ಳಲಾಯಿತು. ಐರ್ಲೆಂಡ್ ಸರಣಿಗೂ ಮುನ್ನ ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲಾಗಿತ್ತು. ಐರ್ಲೆಂಡ್‌ನಲ್ಲಿ ಸತತ ಎರಡು ಪಂದ್ಯಗಳ ಸೋಲಿನ ಬಳಿಕ ಶ್ರೇಯಸ್ ಅಯ್ಯರ್, ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿಯ ಎರಡನೇ ಪಂದ್ಯವನ್ನು ಸೋತಿರು. ಇದಕ್ಕೂ ಮುನ್ನ ಆರಂಭಿಕ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣದೆ ರದ್ದಾಗಿತ್ತು.
ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಶ್ರೇಯಸ್ ಅಯ್ಯರ್
ಆಡಿದ ಆರಂಭಿಕ ನಾಲ್ಕು ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ಭಾರತ ತಂಡದ ಮೊದಲ ನಾಯಕ ಎಂಬ ಅನಗತ್ಯ ದಾಖಲೆಯನ್ನು ಶ್ರೇಯಸ್ ಅಯ್ಯರ್ ಹೆಗಲೇರಿಸಿಕೊಂಡಿದ್ದಾರೆ. ಸೂಪರ್ ಓವರ್ ಹಾಗೂ ಬೌಲ್‌ಔಟ್ ಪಂದ್ಯಗಳನ್ನು ಹೊರತುಪಡಿಸಿದರೆ, ಭಾರತ ತಂಡದ ನಾಯಕನಾಗಿ ಮೊದಲ ಗೆಲುವು ದಾಖಲಿಸಲು ಅತಿ ಹೆಚ್ಚು ಸಮಯ ತೆಗೆದುಕೊಂಡ ದಾಖಲೆ ಈ ಹಿಂದೆ ಎಂಎಸ್ ಧೋನಿ ಹೆಸರಿನಲ್ಲಿತ್ತು. ಮಳೆಯಿಂದ ರದ್ದಾದ ಪಂದ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ, ನಾಯಕನಾಗಿ ಮೊದಲ ಗೆಲುವು ಸಾಧಿಸುವ ಮುನ್ನ ಸತತ ಸೋಲುಗಳನ್ನು ಅನುಭವಿಸಿದ ದಾಖಲೆಯು ರಿಷಭ್ ಪಂತ್ ಹೆಸರಿನಲ್ಲಿದೆ.
2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಸತತ ಎರಡು ಟಿ20ಐ ಪಂದ್ಯಗಳಲ್ಲಿ ಸೋತಿದ್ದ ಭಾರತ, ಅದೇ ವರ್ಷದ ಅಕ್ಟೋಬರ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲೂ ಸೋಲು ಅನುಭವಿಸಿತ್ತು. ಆ ಬಳಿಕ ಇದೇ ಮೊದಲ ಬಾರಿ ಭಾರತ ತಂಡ, ಟಿ20ಐ ಮಾದರಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ.
ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಕಳೆದ ಎರಡು ಟಿ20 ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿತ್ತು. ಸೂರ್ಯಕುಮಾರ್ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ, ಪಂಜಾಬ್ ಕಿಂಗ್ಸ್ (ಪಿಕೆಬಿಎಸ್) ನಾಯಕ ಶ್ರೇಯಸ್‌ಗೆ ಭಾರತ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಯಿತು. 2026ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಶ್ರೇಯಸ್ ಸ್ಥಾನ ಪಡೆದಿರಲಿಲ್ಲ. ಅಲ್ಲದೆ, ಮಾಜಿ ನಾಯಕ ಸೂರ್ಯಕುಮಾರ್ ನಿರ್ವಹಿಸುತ್ತಿದ್ದ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನವನ್ನೂ ಅವರು ವಹಿಸಿಕೊಂಡಿದ್ದಾರೆ.
IND vs ENG: ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಟೀಮ್ ಇಂಡಿಯಾ!
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಒಂದೇ ಒಂದು ದ್ವಿಪಕ್ಷೀಯ ಸರಣಿಯನ್ನೂ ಸೋತಿರಲಿಲ್ಲ. ಅಲ್ಲದೆ, ತಂಡ ಆಡಿದ ಎರಡೂ ಬಹುರಾಷ್ಟ್ರೀಯ ಟಿ20 ಟೂರ್ನಿಗಳಲ್ಲೂ ಪ್ರಶಸ್ತಿ ಗೆದ್ದಿತ್ತು. ಆದರೆ, ನಾಯಕನಾಗಿ ಶ್ರೇಯಸ್ ತಮ್ಮ ಮೊದಲ ಸರಣಿಯಲ್ಲೇ ಸೋಲು ಅನುಭವಿಸಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲೂ ಭಾರತ 1-0 ಹಿನ್ನಡೆಯಲ್ಲಿದ್ದು, ಇನ್ನೂ ಮೂರು ಪಂದ್ಯಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮತ್ತೊಂದು ಸರಣಿ ಸೋಲಿನ ಆತಂಕವನ್ನು ಎದುರಿಸುತ್ತಿದೆ.