ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20ಐ ಪಂದ್ಯದಲ್ಲಿ (IND vs AFG) ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ (Shreyas Iyer), ಬೌಲಿಂಗ್ ಆಯ್ದುಕೊಂಡಿದ್ದಾರೆ. ಆ ಮೂಲಕ ಮೊದಲನೇ ಪಂದ್ಯದಂತೆ ಈ ಪಂದ್ಯದಲ್ಲಿಯೂ ಎದುರಾಳಿ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು ಹಾಗೂ ಚೇಸಿಂಗ್‌ಗೆ ನಿರ್ಧಾರವನ್ನು ತೆಗೆದುಕೊಂಡರು. ಈ ಪಂದ್ಯದಲ್ಲಿಯೂ ಟಾಸ್ ಗೆಲುವಿನ ಮೂಲಕ ನಾಯಕ ಶ್ರೇಯಸ್ ಅಯ್ಯರ್ ಅವರು ಟಿ20ಐ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ.
ಭಾರತ ಟಿ20 ತಂಡದ ನಾಯಕನಾಗಿ ಜವಾಬ್ದಾರಿಯನ್ನು ತಗೆದುಕೊಂಡ ಬಳಿಕ ಶ್ರೇಯಸ್ ಅಯ್ಯರ್ ಇಲ್ಲಿಯವರೆಗೂ 12 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ 12 ಪಂದ್ಯಗಳ ಪೈಕಿ ಅವರು ಬರೋಬ್ಬರಿ 11 ರಲ್ಲಿ ಟಾಸ್ ಗೆದ್ದಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ನಾಯಕನಾಗಿ ಆರಂಭಿಕ 12 ಪಂದ್ಯಗಳಲ್ಲಿ 11ರಲ್ಲಿ ಟಾಸ್ ಗೆದ್ದ ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನು ಶ್ರೇಯಸ್ ಅಯ್ಯರ್ ಬರೆದಿದ್ದಾರೆ. ಇದರೊಂದಿಗೆ ಅವರು ಕತಾರ್ ನಾಯಕ ಮಿರ್ಝಾ ಬೇಗ್ ಮತ್ತು ಫಿಲಿಫೈನ್ಸ್ ನಾಯಕ ಹೆನ್ರಿ ಟೇಲರ್ ಅವರ ದಾಖಲೆಗಳನ್ನು ಮುರಿದಿದ್ದಾರೆ.
IND vs AFG 2nd T20I: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ, ಅಫ್ಘಾನಿಸ್ತಾನ ಮೊದಲ ಬ್ಯಾಟಿಂಗ್!
ಮಿರ್ಝಾ ಬೇಗ್ ಮತ್ತು ಹೆನ್ರಿ ಟೇಲರ್ ತಮ್ಮ-ತಮ್ಮ ತಂಡಗಳ ನಾಯಕತ್ವವನ್ನು ವಹಿಸಿಕೊಂಡ ಆರಂಭಿಕ 12 ಪಂದ್ಯಗಳಲ್ಲಿ ತಲಾ 10 ರಲ್ಲಿ ಟಾಸ್‌ಗಳನ್ನು ಗೆದ್ದಿದ್ದರು. ಇದೀಗ ಶ್ರೇಯಸ್ ಅಯ್ಯರ್ 11 ಪಂದ್ಯಗಳಲ್ಲಿ ಟಾಸ್ ಗೆದ್ದು ಈ ಇಬ್ಬರೂ ನಾಯಕರ ದಾಖಲೆಗಳನ್ನು ಮುರಿದಿದ್ದಾರೆ ಹಾಗೂ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಐಸಿಸಿ ಪೂರ್ಣ ಸದಸ್ಯತ್ವ ತಂಡಗಳ ನಾಯಕರಾಗಿ ಇಯಾನ್ ಮಾರ್ಗನ್ ಮತ್ತು ಮಹ್ಮುದುಲ್ಲಾ ಅವರು 9 ಟಾಸ್‌ಗಳ ಗೆಲುವಿನ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ. ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ಲಿಟನ್ ದಾಸ್ ಹಾಗೂ ಶೇಯ್ ಹೋಪ್ ಅವರು ತಮ್ಮ ಆರಂಭಿಕ 12 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು ಕೇವಲ ಎರಡರಲ್ಲಿ ಮಾತ್ರ. ಆದರೆ, ಶ್ರೇಯಸ್ ಅಯ್ಯರ್ ಇವರನ್ನು ಹಿಂದಿಕ್ಕಿದ್ದಾರೆ. ನೂತನ ದಾಖಲೆಯನ್ನು ಟಿ20ಐ ಕ್ರಿಕೆಟ್ ನಾಯಕತ್ವದಲ್ಲಿ ಬರೆದಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ
ಇನ್ನು ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ವೇಳೆ ಅವರು ತಮ್ಮ ತಂಡದ ಪ್ಲೇಯಿಂಗ್ Xi ಬಗ್ಗೆ ಮಾಹಿತಿ ನೀಡಿದರು. ಭಾರತದ ಪ್ಲೇಯಿಂಗ್‌ನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ ಎಂದು ಹೇಳಿದ ಅವರು, ವರುಣ್ ಚಕ್ರವರ್ತಿ ಗಾಯಕ್ಕೆ ತುತ್ತಾದ ಕಾರಣ ಅವರು ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಹಾಗೂ ಇವರ ಸ್ಥಾನಕ್ಕೆ ಯುವ ಸ್ಪಿನ್ನರ್ ರವಿ ಬಿಷ್ಣೋಯ್‌ಗೆ ಸ್ಥಾನವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎರಡನೇ ಟಿ20ಐಗೆ ಉಭಯ ತಂಡಗಳ ಪ್ಲೇಯಿಂಗ್ XI
ಇತ್ತಂಡಗಳ ಪ್ಲೇಯಿಂಗ್ XI
ಭಾರತ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ಸಿದ್ದಿಕುಲ್ಲಾ ಅಟಲ್, ಗುಲ್ಬದಿನ್ ನೈಬ್, ದರ್ವಿಶ್ ರಸೂಲಿ, ಅಜ್ಮತ್‌ವುಲ್ಲಾ ಒಮರ್ಜೈ, ಮೊಹಮ್ಮದ್ ನಬಿ, ರಶೀದ್ ಖಾನ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ