ಚಂಡೀಗಢ: ಪವರ್‌ಪ್ಲೇನಲ್ಲಿ ದಾಖಲೆಯ ಮೊತ್ತವನ್ನು ಕಲೆ ಹಾಕಿದರೂ ಸನ್‌ರೈಸರ್ಸ್ ಹೈದರಾಬಾದ್ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಎರಡನೇ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಶ್ರೇಯಸ್ ಅಯ್ಯರ್ (Shreyas Iyer) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಪಂಜಾಬ್ ಕಿಂಗ್ಸ್ (PBKS) ತಂಡ, ಎಸ್‌ಆರ್‌ಎಚ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ 7 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಮೂರನೇ ಸೋಲು ಅನುಭವಿಸಿದ ಇಶಾನ್ ಕಿಶನ್ ನಾಯಕತ್ವದ ಹೈದರಾಬಾದ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿಯೇ ಉಳಿಯಿತು.
ಶನಿವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 19ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಆರಂಭದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಏಕೆಂದರೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟ್ ಮಾಡಿ ತಂಡಕ್ಕೆ 105 ರನ್‌ಗಳನ್ನು ತಂದುಕೊಟ್ಟಿದ್ದರು. ಈ ವೇಳೆ ಎಸ್‌ಆರ್‌ಎಚ್ ತಂಡ 250ಕ್ಕೂ ಅಧಿಕ ರನ್ ಗಳಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಶಶಾಂಕ್ ಸಿಂಗ್ ಪರಿಣಾಮಕಾರಿ ಬೌಲಿಂಗ್ ಮೂಲಕ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿ ಪಂಜಾಬ್ ಕಿಂಗ್ಸ್ ಕಮ್‌ಬ್ಯಾಕ್‌ಗೆ ನೆರವು ನೀಡಿದರು.
ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕ
ಟ್ರಾವಿಸ್ ಹೆಡ್ 23 ಎಸೆತಗಳಲ್ಲಿ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಒಂದು ತುದಿಯಲ್ಲಿ ಅಬ್ಬರಿಸುತ್ತಿದ್ದ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 78 ರನ್ ಚಚ್ಚಿದರು. ಆ ಮೂಲಕ ಎಸ್‌ಆರ್‌ಎಚ್‌ಗೆ ಭರ್ಜರಿ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ ವಿಕೆಟ್ ಉರುಳಿದ ಬಳಿಕ ಎಸ್‌ಆರ್‌ಎಚ್ ತಂಡದ ರನ್ ರೇಟ್ ತುಂಬಾ ಕಡಿಮೆಯಾಯಿತು. ಅಂತಿಮವಾಗಿ ಎಸ್‌ಆರ್‌ಎಚ್ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕ 219 ರನ್‌ಗಳನ್ನು ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ 39 ರನ್ ಹಾಗೂ ನಾಯಕ ಇಶಾನ್ ಕಿಶನ್ 27 ರನ್‌ಗಳನ್ನು ಗಳಿಸಿದರು.
ಪ್ರಿಯಾಂಶ್-ಪ್ರಭ್‌ಸಿಮ್ರನ್ ಅಬ್ಬರ
ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ ಹಾಗೂ ಫ್ರಬ್‌ಸಿಮ್ರನ್ ಸಿಂಗ್ ಸ್ಪೋಟಕ ಬ್ಯಾಟ್ ಮಾಡಿ ಮೊದಲನೇ ವಿಕೆಟ್‌ಗೆ 38 ಎಸೆತಗಳಲ್ಲಿ 99 ರನ್‌ಗಳನ್ನು ಕಲೆ ಹಾಕಿದ್ದರು. ಅದರಲ್ಲಿಯೂ ವಿಶೇಷವಾಗಿ ಪವರ್‌ಪ್ಲೇನಲ್ಲಿ ಈ ಜೋಡಿ 93 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಪಂಜಾಬ್ ಕಿಂಗ್ಸ್‌ಗೆ ಭದ್ರ ಅಡಿಪಾಯವನ್ನು ಹಾಕಿದ್ದರು. ಸ್ಪೋಟಕ ಬ್ಯಾಟ್ ಮಾಡಿದ ಪ್ರಿಯಾಂಶ್, ಕೇವಲ 20 ಎಸೆತಗಳಲ್ಲಿ 285ರ ಸ್ಟ್ರೈಕ್ ರೇಟ್‌ನಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 57 ರನ್ ಸಿಡಿಸಿದ್ದರೆ, ಮತ್ತೊಬ್ಬ ಆರಂಭಿಕ ಪ್ರಭ್‌ಸಿಮ್ರನ್, ಕೇವಲ 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 51 ರನ್ ಗಳಿಸಿದ್ದರು.
ಪಂಜಾಬ್ ಕಿಂಗ್ಸ್‌ಗೆ ಗೆಲುವು ತಂದಿತ್ತ ಶ್ರೇಯಸ್ ಅಯ್ಯರ್
ಆರಂಭಿಕ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ತಂಡದ ಜವಾಬ್ದಾರಿಯನ್ನು ತೆಗೆದುಕೊಂಡರು. ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಕೊನೆಯವರೆಗೂ ಬ್ಯಾಟ್ ಮಾಡಿ 33 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 69 ರನ್‌ಗಳನ್ನು ಬಾರಿಸಿದರು. ಆ ಮೂಲಕ 18.5 ಓವರ್‌ಗಳಿಗೆ ಪಂಜಾಬ್ ತಂಡವನ್ನು ಗೆಲ್ಲಿಸಿದರು. ಪಂಜಾಬ್ 4 ವಿಕೆಟ್ ನಷ್ಟಕ್ಕೆ 223 ರನ್‌ಗಳನ್ನು ಗಳಿಸಿತು.
RCB vs MI: ಫಿಲ್ ಸಾಲ್ಟ್ ಔಟ್? ಮುಂಬೈ ಇಂಡಿಯನ್ಸ್ ಕದನಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI
ಸನ್‌ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಶಿವಾಂಗ್ ಕುಮಾರ್ 33 ರನ್ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದರೂ ಇನ್ನುಳಿದ ಬೌಲರ್‌ಗಳ ಬೆಂಬಲದ ಕೊರತೆಯಿಂದ ಎಸ್‌ಆರ್‌ಎಚ್ ಪಂಜಾಬ್ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.