ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ಶ್ರೇಯಸ್‌ ಅಯ್ಯರ್‌ ಅಬ್ಬರದ ಶತಕದಿಂದ ವೆಸ್ಟ್‌ ಇಂಡೀಸ್‌ಗೆ ಶಾಕ್‌ ನೀಡಿದ ಭಾರತ!

IND vs WI 1st T20I Highlights: ಶ್ರೇಯಸ್‌ ಅಯ್ಯರ್‌ ಅಬ್ಬರದ ಶತಕದ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಜಯದ ಮೂಲಕ ಟೀಮ್‌ ಇಂಡಿಯಾ 5 ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಶತಕ ಬಾರಿಸಿದ ಶ್ರೇಯಸ್‌ ಅಯ್ಯರ್‌.

ಲಖನೌ: ಶ್ರೇಯಸ್‌ ಅಯ್ಯರ್‌ (Shreyas Iyer) ಸ್ಪೋಟಕ ಶತಕದ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ (IND vs WI) ವೆಸ್ಟ್‌ ಇಂಡೀಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಆತಿಥೇಯ ಟೀಮ್‌ ಇಂಡಿಯಾ 1-0 ಮುನ್ನಡೆಯೊಂದಿಗೆ ಶುಭಾರಂಭ ಪಡೆದಿದೆ. ಚೇಸಿಂಗ್‌ ವೇಳೆ ಭರ್ಜರಿಯಾಗಿ ಬ್ಯಾಟ್‌ ಬೀಸಿ ಶತಕದೊಂದಿಗೆ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಸ್‌ ಅಯ್ಯರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ವಿಂಡೀಸ್‌ ನೀಡಿದ್ದ 172 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿ ಅಭಿಷೇಕ್‌ ಶರ್ಮಾ (21 ರನ್‌) ಹಾಗೂ ಸಂಜು ಸ್ಯಾಮ್ಸನ್‌ (11 ರನ್‌) ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌, 67 ಎಸೆತಗಳಲ್ಲಿ 137 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ, 14.4 ಓವರ್‌ಗಳಿಗೆ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಇಶಾನ್‌ ಕಿಶನ್‌ 27 ಎಸೆತಗಳಲ್ಲಿ ಅಜೇಯ 37 ರನ್‌ ಸಿಡಿಸಿದರು.

Breaking News: 4 ವರ್ಷಗಳ ಬಳಿಕ ಭಾರತ ತಂಡಕ್ಕೆ ಭುವನೇಶ್ವರ್‌ ಕುಮಾರ್‌, ನ್ಯೂಜಿಲೆಂಡ್‌ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ!

ಶ್ರೇಯಸ್‌ ಅಯ್ಯರ್‌ ಅಬ್ಬರದ ಶತಕ

ಶ್ರೇಯಸ್‌ ಅಯ್ಯರ್‌ ಕ್ರೀಸ್‌ಗೆ ಬಂದ ತಕ್ಷಣ ತಮ್ಮ ತಮ್ಮ ಪ್ರಭಾವವನ್ನು ಬೀರಿದರು. ಸ್ಪೋಟಕ ಬ್ಯಾಟ್‌ ಮಾಡಿದ ಶ್ರೇಯಸ್‌, ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಮೂಲಕ ವಿಂಡೀಸ್‌ ಬೌಲರ್‌ಗಳ ವಿಶ್ವಾಸವನ್ನು ಮುಗ್ಗಿಸಿದರು. ಅವರು ಆಡಿದ 43 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 102 ರನ್‌ ಚಚ್ಚಿದರು. ಅವರು 237.21ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ವಿಶೇಷ. ಈ ಇನಿಂಗ್ಸ್‌ನಿಂದಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



171 ರನ್‌ಗೆ ವಿಂಡೀಸ್‌ ಆಲ್‌ಔಟ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ವೆಸ್ಟ್‌ ಇಂಡೀಸ್‌ ತಂಡ, ಶೇಯ್‌ ಹೋಪ್‌ ಹಾಗೂ ಶೆರ್ಫೆನ್‌ ಋದರ್‌ಫೋರ್ಡ್‌ ಅವರ ಅರ್ಧಶತಕಗಳ ಬಲದಿಂದ 19.1 ಓವರ್‌ಗಳಿಗೆ 171 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದರಾಳಿ ಭಾರತ ತಂಡಕ್ಕೆ 172 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.

ವೆಸ್ಟ್‌ ಇಂಡೀಸ್‌ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ನಾಯಕ ಶೇಯ್‌ ಹೋಪ್‌ ಹಾಗೂ ಶೆರ್ಫೆನ್‌ ಋದರ್‌ಫೋರ್ಡ್‌ ಮಾತ್ರ. ಕಮಿಲ್‌ ಪೂರನ್‌ 12 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ಶಿಮ್ರಾನ್‌ ಹೆಟ್ಮಾಯೆರ್‌ ಅಚ್ಚರಿ ರೀತಿಯಲ್ಲಿ ರನ್‌ಔಟ್‌ ಆದರು. ಆದರೆ, ರೊವ್ಮನ್‌ ಪೊವೆಲ್‌ ಅವರು ಅಕ್ಷರ್‌ ಪಟೇಲ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆದರೆ, ನಾಲ್ಕನೇ ವಿಕೆಟ್‌ಗೆ ಹೋಪ್‌ ಹಾಗೂ ಋದರ್‌ಫೋರ್ಡ್‌ 35 ಎಸೆತಗಳಲ್ಲಿ 63 ರನ್‌ಗಳ ಜೊತೆಯಾಟವನ್ನು ಆಡಿ 44 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ ತಂಡದ ಮೊತ್ತವನ್ನು 100ರ ಗಡಿ ಟಾಟಿಸಿದರು.‌



ಶೇಯ್‌ ಹೋಪ್, ಋದರ್‌ಫೋರ್ಡ್‌ ಅರ್ಧಶತಕ

ಇನಿಂಗ್ಸ್‌ ಆರಂಭಿಸಿ ಒಂದು ತುದಿಯಲ್ಲಿ ಕೆಲಕಾಲ ಭಯಮುಕ್ತವಾಗಿ ಬ್ಯಾಟ್‌ ಮಾಡಿದ್ದ ಶೇಯ್‌ ಹೋಪ್‌, ಭಾರತೀಯ ಬೌಲರ್‌ಗಳನ್ನು ದಂಡಿಸಿದರು. ಅವರು ಆಡಿದ 37 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 52 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ಮತ್ತೊಂದು ತುದಿಯಲ್ಲಿ 19ನೇ ಓವರ್‌ವರೆಗೂ ಬ್ಯಾಟ್‌ ಮಾಡಿದ ಶೆರ್ಫೆನ್‌ ಋದರ್‌ಫೋರ್ಡ್‌ 34 ಎಸೆತಗಳಲ್ಲಿ 56 ರನ್‌ ಸಿಡಿಸಿದರು. ಇವರ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ಆಡು ಬೌಂಡರಿಗಳಿವೆ. 16 ರನ್‌ ಗಳಿಸಿದ್ದ ಅಕೀಲ್‌ ಹೊಸೇನ್‌ ಅವರ ಜೊತೆಗೆ ಋದರ್‌ಫೋರ್ಡ್‌ 36 ರನ್‌ಗಳ ಜೊತೆಯಾಟವನ್ನು ಆಡಿದ್ದರು.

IND vs WI: ಮೊದಲನೇ ಟಿ20ಐ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಏಕೆ ಆಡುತ್ತಿಲ್ಲ? ಕಾರಣ ಇಲ್ಲಿದೆ!

ಪದಾರ್ಪಣೆ ಪಂದ್ಯದಲ್ಲಿಯೇ ನಮನ್‌ ಧೀರ್‌ಗೆ 3 ವಿಕೆಟ್‌

ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ನಮನ್‌ ಧೀರ್‌ ಬೌಲಿಂಗ್‌ ಮೂಲಕ ಎಲ್ಲರ ಗಮನ ಸೆಳೆದರು. ಅವರು ಬೌಲ್‌ ಮಾಡಿದ 4 ಓವರ್‌ಗಳ ಸ್ಪೆಲ್‌ನಲ್ಲಿ 31 ರನ್‌ ನೀಡಿದರೂ 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಅಕ್ಷರ್‌ ಪಟೇಲ್‌ ಮತ್ತು ಕುಲ್ದೀಪ್‌ ಯಾದವ್‌ ತಲಾ ಎರಡೆರಡು ವಿಕೆಟ್‌ ಕಿತ್ತರು.



ಸ್ಕೋರ್‌ ವಿವರ

ವೆಸ್ಟ್‌ ಇಂಡೀಸ್‌: 19.1 ಓವರ್‌ಗಳಿಗೆ 171-10 (ಶೆರ್ಫೆನ್‌ ಋದರ್‌ಫೋರ್ಡ್‌ 56 ರನ್‌, ಶೇಯ್‌ ಹೋಪ್‌ 52 ರನ್‌; ನಮನ್‌ ಧೀರ್‌ 31 ಕ್ಕೆ 3, ಅಕ್ಷರ್‌ ಪಟೇಲ್‌ 26 ಕ್ಕೆ 2, ಕುಲ್ದೀಪ್‌ ಯಾದವ್‌ 33 ಕ್ಕೆ 2)

ಭಾರತ: 14.4 ಓವರ್‌ಗಳಿಗೆ 172-2 (ಶ್ರೇಯಸ್‌ ಅಯ್ಯರ್‌ 102 * ರನ್‌, ಇಶಾನ್‌ ಕಿಶನ್‌ 37* ರನ್‌; ಅಕೀಲ್‌ ಹೊಸೇನ್‌ 37 ಕ್ಕೆ 1, ರಾಸ್ಟನ್‌ ಚೇಸ್‌ 37 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶ್ರೇಯಸ್‌ ಅಯ್ಯರ್‌