ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶುಭಮನ್‌ ಗಿಲ್‌ ಹುಟ್ಟು ನಾಯಕರಲ್ಲ, ಕಲಿಯುವುದು ಸಾಕಷ್ಟಿದೆ: ಮನೋಜ್‌ ತಿವಾರಿ!

ಶುಭಮನ್‌ ಗಿಲ್‌ ತಮ್ಮ ನಾಯಕತ್ವದಲ್ಲಿ ಇದೇ ಮೊದಲ ಬಾರಿ ಭಾರತ ತಂಡಕ್ಕೆ ಏಕದಿನ ಸರಣಿಯನ್ನು ಗೆದ್ದುಕೊಟ್ಟಿದ್ದಾರೆ. ಇತ್ತೀಚೆಗೆ ಮುಗಿದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ, ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಇನ್ನಷ್ಟು ಕಲಿಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಶುಭಮನ್‌ ಗಿಲ್‌ ನಾಯಕತ್ವದ ಬಗ್ಗೆ ಮನೋಜ್‌ ತಿವಾರಿ ಹೇಳಿಕೆ.

ನವದೆಹಲಿ: ಶುಭಮನ್‌ ಗಿಲ್‌ (Shubman Gill) ನಾಯಕತ್ವದಲ್ಲಿ ಭಾರತ ತಂಡ ಇದೇ ಮೊದಲ ಬಾರಿ ಏಕದಿನ ಸರಣಿಯನ್ನು ಗೆದ್ದಿದೆ. ಅಫ್ಘಾನಿಸ್ತಾನ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯನ್ನು (IND vs AFG) ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ (Manoj Tiwary), ಗಿಲ್‌ ಹುಟ್ಟು ನಾಯಕರಲ್ಲ, ಆದರರ ಅವರು ತಮ್ಮ ನಾಯಕತ್ವದಲ್ಲಿ ಇನ್ನಷ್ಟು ಹೆಚ್ಚಿನ ಸುಧಾರಣೆಯನ್ನು ಕಾಣಬೇಕೆಂದು ಸಲಹೆ ನೀಡಿದ್ದಾರೆ.

ಭಾರತ ಏಕದಿನ ತಂಡದ ನಾಯಕನಾಗಿ ರೋಹಿತ್‌ ಶರ್ಮಾ ಅವರ ಸ್ಥಾನವನ್ನು ತುಂಬಿದ ಬಳಿಕ ಶುಭಮನ್‌ ಗಿಲ್‌, 2025ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಅದೇ ವರ್ಷ ನ್ಯೂಜಿಲೆಂಡ್‌ ತಂಡ, ಭಾರತವನ್ನು ಇದೇ ಅಂತರದಲ್ಲಿ ಮಣಿಸಿತ್ತು. ಆದರೆ, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಗಿಲ್‌, ಯಶಸ್ಸಿನ ಪಯಣವನ್ನು ಆರಂಭಿಸಿದ್ದಾರೆ.

"ನಾಯಕನಾಗಿ ಈ ಸರಣಿ ಅವರಿಗೆ ಉತ್ತಮವಾಗಿ ಸಾಗಿತು. ಅವರು ಹೆಚ್ಚು ಹೆಚ್ಚು ಸರಣಿಗಳಲ್ಲಿ ನಾಯಕತ್ವ ವಹಿಸಿದಂತೆ ಇನ್ನಷ್ಟು ಉತ್ತಮ ನಾಯಕನಾಗುತ್ತಾರೆ. ಅವರು ಇನ್ನೂ 'ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುವ ನಾಯಕ' ಅಲ್ಲ, ಆದರೆ ಕಾಲಕ್ರಮೇಣ ಕಲಿಯುತ್ತಾರೆ. ಸಹಜವಾಗಿ ನಾಯಕನಿಗೆ ಎಲ್ಲವೂ ಸ್ವಾಭಾವಿಕವಾಗಿ ಬರುತ್ತದೆ. ಆದರೆ ಶುಭ್‌ಮನ್ ಗಿಲ್ ಅವರಂತಹವರು ಅನುಭವದ ಮೂಲಕ ಕಲಿಯುತ್ತಾರೆ. ಅದಕ್ಕಾಗಿಯೇ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ಕೆಎಲ್‌ ರಾಹುಲ್‌ ತಂಡದಲ್ಲೇ ಉಳಿದು ಅವರಿಗೆ ಸಲಹೆ ನೀಡುವುದು ಮುಖ್ಯ. ತಮ್ಮ ನಾಯಕತ್ವದ ಅವಧಿಯಲ್ಲಿ ತಾವು ಮಾಡಿದ ತಪ್ಪುಗಳನ್ನು ಗಿಲ್ ಪುನರಾವರ್ತಿಸದಂತೆ ಅವರು ನೋಡಿಕೊಳ್ಳುತ್ತಾರೆ," ಎಂದು ಮನೋಜ್‌ ತಿವಾರಿ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

"ಇದಲ್ಲದೆ, ತಂಡದಲ್ಲಿ ಇಷ್ಟು ಉತ್ತಮ ಆಟಗಾರರು ಇದ್ದಾಗ ನಾಯಕತ್ವದ ಒತ್ತಡವೂ ಸ್ವಲ್ಪ ಕಡಿಮೆಯಾಗುತ್ತದೆ. ನಿಮ್ಮ ಬಳಿ ವಿಶ್ವದ ನಂ.1 ವೇಗದ ಬೌಲರ್ ಮತ್ತು ಸ್ಪಿನ್ನರ್ ಇದ್ದರೆ, ಅವರನ್ನು ಸರಿಯಾದ ಸಮಯದಲ್ಲಿ ಬೌಲಿಂಗ್‌ಗೆ ಕರೆತಂದರೆ ಸಾಕು; ಅವರು ತಮ್ಮ ಕೆಲಸವನ್ನು ಮಾಡುತ್ತಾರೆ. ಇದು ಭಾರತ ತಂಡಕ್ಕೆ ಇರುವ ವಿಶೇಷ ಸೌಲಭ್ಯ. ಏಕೆಂದರೆ ನಮ್ಮ ಬಳಿ ಅತ್ಯುನ್ನತ ಮಟ್ಟದ ಆಟಗಾರರಿದ್ದಾರೆ. ಯಾವ ಸಮಯದಲ್ಲಾದರೂ ಯಾವುದೇ ಬೌಲರ್‌ಗೆ ಚೆಂಡು ನೀಡಿದರೂ, ಅವರು ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದ್ದಾರೆ," ಎಂದು ಅವರು ಸೇರಿಸಿದರು.

ಶುಭ್‌ಮನ್ ಗಿಲ್ ಕೇವಲ ನಾಯಕತ್ವದಲ್ಲಷ್ಟೇ ಅಲ್ಲ, ಬ್ಯಾಟಿಂಗ್‌ನಲ್ಲೂ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದರು. ಪಂಜಾಬ್‌ನ ಈ ಬ್ಯಾಟರ್ ಎರಡು ಇನಿಂಗ್ಸ್‌ಗಳಲ್ಲಿ 238ರ ಸರಾಸರಿ ಮತ್ತು 135.23ರ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 238 ರನ್ ಗಳಿಸಿದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

ಆದರೆ ಅವರ ಮುಂದಿನ ಸವಾಲು ಇನ್ನಷ್ಟು ಕಠಿಣವಾಗಿರಲಿದೆ. ಮುಂದಿನ ತಿಂಗಳು ಭಾರತ ತಂಡ, ಇಂಗ್ಲೆಂಡ್‌ನಲ್ಲಿ ಆಂಗ್ಲರ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದ್ದು, ಗಿಲ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಸಾಮರ್ಥ್ಯಕ್ಕೆ ಇದು ಮತ್ತೊಂದು ದೊಡ್ಡ ಪರೀಕ್ಷೆಯಾಗಲಿದೆ.