ಜೈಪುರ: ಶುಭಮನ್ ಗಿಲ್ (Shubman Gill) ಅಬ್ಬರದ ಬ್ಯಾಟಿಂಗ್ ಹಾಗೂ ರಶೀದ್ ಖಾನ್ (Rashid Khan) ಅವರ ಸ್ಪಿನ್ ಮೋಡಿಯ ಸಹಾಯದಿಂದ ಗುಜರಾತ್ ಟೈಟನ್ಸ್ ತಂಡ, ಸೇಡಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 77 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಏಳನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಯಶಸ್ವಿ ಜೈಸ್ವಾಲ್ ಸಾರಥ್ಯದ ಆರ್‌ಆರ್, ಐದನೇ ಸ್ಥಾನಕ್ಕೆ ಕುಸಿಯಿತು.
ಮೇ 9 ರಂದು ಇಲ್ಲಿನ ಸವಾಯಿ ಮಾನ್ಸಿನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 230 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡ, ರಶೀದ್ ಖಾನ್ ಸ್ಪಿನ್ ಮೋಡಿಗೆ ಮಕಾಡೆ ಮಲಗಿತು. ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (36 ರನ್, 16 ಎಸೆತಗಳಲ್ಲಿ), ಧ್ರುವ್ ಜುರೆಲ್ (24 ರನ್, 10 ಎಸೆತಗಳು) ಹಾಗೂ ರವೀಂದ್ರ ಜಡೇಜಾ (38 ರನ್, 25 ಎಸೆತಗಳು) ಅವರು ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಜಿಟಿ ಬೌಲರ್‌ಗಳಿಗೆ ಶರಣಾದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 16.3 ಓವರ್‌ಗಳಿಗೆ 152 ರನ್‌ಗಳಿಗೆ ಆಲ್‌ಔಟ್ ಆಯಿತು.
GT vs RR: ಐಪಿಎಲ್ ಇತಿಹಾಸದ ಅತ್ಯಂತ ದೀರ್ಘಾವಧಿ ಓವರ್ ಬೌಲ್ ಮಾಡಿದ ಜೋಫ್ರಾ ಆರ್ಚರ್!
ರಶೀದ್ ಖಾನ್ ಸ್ಪಿನ್ ಮೋಡಿ
ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದ ರಶೀದ್ ಖಾನ್, ಕ್ರೀಸ್‌ನಲ್ಲಿ ನೆಲೆ ಕಂಡುಕೊಂಡಿದ್ದ ಧ್ರುವ್ ಜುರೆಲ್, ರವೀಂದ್ರ ಜಡೇಜಾ ಅವರನ್ನು ನಿರ್ಣಾಯಕ ಸಮಯಲ್ಲಿ ಔಟ್ ಮಾಡಿದ್ದರು. ನಂತರ ಡನೊವಾನ್ ಫೆರೆರಾ ಹಾಗೂ ಶುಭಮ್ ದುಬೇ ಅವರನ್ನು ಔಟ್ ಮಾಡಿದ್ದರು. ಆ ಮೂಲಕ ಅವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 33 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೇಸನ್ ಹೋಲ್ಡರ್ 3 ವಿಕೆಟ್ ಕಿತ್ತರೆ, ಕಗಿಸೊ ರಬಾಡ ಎರಡು ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್‌ಗೆ ಭರ್ಜರಿ ಆರಂಭ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವಂತಾದ ಗುಜರಾತ್ ಟೈಟನ್ಸ್ ತಂಡಕ್ಕೆ ಓಪನರ್ಸ್ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಅವರ ಅಬ್ಬರದ ಅರ್ಧಶತಕಗಳ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಈ ಜೋಡಿ ಮುರಿಯದ ಮೊದಲನೇ ಓವರ್‌ನಲ್ಲಿ 65 ಎಸೆತಗಳಲ್ಲಿ 118 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಜಿಟಿ 11ನೇ ಓವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 118 ರನ್‌ಗಳನ್ನು ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿತ್ತು.
ಸುದರ್ಶನ್, ಶುಭಮನ್ ಗಿಲ್ ಅರ್ಧಶತಕ
ಟೂರ್ನಿಯ ಮೊದಲ ಲೆಗ್‌ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯದಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಆರಂಭಿಕ ಸಾಯಿ ಸುದರ್ಶನ್ ಎರಡನೇ ಲೆಗ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡುತ್ತಿದ್ದಾರೆ. ಇವರು ಆಡಿದ 36 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 55 ರನ್ ಗಳಿಸಿದ ಬಳಿಕ ಯಶ್ ರಾಜ್ ಪುಂಜಾಗೆ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 17ನೇ ಓವರ್‌ವರೆಗೂ ಬ್ಯಾಟಿಂಗ್ ಮುಂದುವರಿಸಿದ ಶುಭಮನ್ ಗಿಲ್, ಆರ್‌ಆರ್ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 44 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 190.91ರ ಸ್ಟ್ರೈಕ್ ರೇಟ್‌ನಲ್ಲಿ 84 ರನ್ ಗಳಿಸಿದರು.ಆ ಮೂಲಕ ತಂಡದ ಮೊತ್ತವನ್ನು180ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು.
ಗಿಲ್ ವಿಕೆಟ್ ಒಪ್ಪಿಸಿದ ಬಳಿಕ ಕೊನೆಯವರೆಗೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ವಾಷಿಂಗ್ಟನ್ ಸುಂದರ್ ಕೇವಲ 20 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ ಅಜೇಯ 37 ರನ್ ಸಿಡಿಸಿ ತಂಡದ ಮೊತ್ತವನ್ನು 230ರ ಸನಿಹ ತೆಗೆದುಕೊಂಡು ಹೋದರು. ರಾಹುಲ್ ತೇವಾಟಿಯಾ 4 ಎಸೆತಗಳಲ್ಲಿ ಉಪಯುಕ್ತ 14 ರನ್ ಗಳಿಸಿದರು. ಅಂತಿಮವಾಗಿ ಗುಜರಾತ್ ಟೈಟನ್ಸ್ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 229 ರನ್‌ಗಳನ್ನು ಕಲೆ ಹಾಕಿತು. ಆರ್‌ಆರ್ ಪರ ಬ್ರಿಜೇಶ ಶರ್ಮಾ ಎರಡು ವಿಕೆಟ್, ರವೀಂದ್ರ ಜಡೇಜಾ ಹಾಗೂ ಯಶ್ ರಾಜ ಪುಂಜಾ ತಲಾ ಒಂದೊಂದು ವಿಕೆಟ್ ಪಡೆದರು.