ನವದೆಹಲಿ: ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್, ವೆಸ್ಟ್ ಇಂಡೀಸ್ ಮಾಜಿ ಆಲ್‌ರೌಂಡರ್ ಕೈರೊನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಬುಧವಾರ ನಡೆದಿದ್ದ ದಿ ಹಂಡ್ರೆಡ್ ಟೂರ್ನಿಯ ವೆಲ್ಶ್ ಫೈರ್ ವಿರುದ್ಧ ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್ ಪರ ಕೇವಲ 20 ಎಸೆತಗಳಲ್ಲಿ 51 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್ ಆಡುವ ಮೂಲಕ ಅವರು ಈ ಮೈಲುಗಲ್ಲು ತಲುಪಿದ್ದಾರೆ. ಆದರೆ ಈ ಪಂದ್ಯದ ಬಳಿಕ ಬಟ್ಲರ್ ಹೇಳಿದ ಮಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದ ಕ್ಷಣದಲ್ಲೇ, ತಮ್ಮ ದಾಖಲೆಯನ್ನು ಭವಿಷ್ಯದಲ್ಲಿ ಯಾರು ಮುರಿಯಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಬಟ್ಲರ್, ಭಾರತದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಹೆಸರನ್ನು ಉಲ್ಲೇಖಿಸಿದರು.
"ಇದು ನಿಜಕ್ಕೂ ವಿಶೇಷ ಕ್ಷಣ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವುದು ಸಂತೋಷದ ಸಂಗತಿ. ಆದರೆ ಒಂದು ದಿನ ಯಾರಾದರೂ ಈ ದಾಖಲೆಯನ್ನು ಮುರಿಯುತ್ತಾರೆ. ನನ್ನ ಅನಿಸಿಕೆಯಲ್ಲಿ ಆ ಆಟಗಾರನ ಹೆಸರು ವೈಭವ್ ಸೂರ್ಯವಂಶಿ ಆಗಿರಬಹುದು," ಎಂದು ಬಟ್ಲರ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
Duleep Trophy 2026: ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿ ಉಪ ನಾಯಕ!
ಬಟ್ಲರ್ ಅವರ ಈ ಹೇಳಿಕೆಗೆ ವಿಶೇಷ ಮಹತ್ವವಿದೆ. ಏಕೆಂದರೆ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ ವೇಳೆ ಅವರು ವೈಭವ್ ಸೂರ್ಯವಂಶಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಅಲ್ಲಿ ಯುವ ಬ್ಯಾಟರ್‌ನ ಭಯಮುಕ್ತ ಆಟವನ್ನು ಹತ್ತಿರದಿಂದ ಕಂಡಿದ್ದ ಬಟ್ಲರ್, ಅವರ ಅಪಾರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.
ಕೇವಲ 15ನೇ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಹಲವು ಮಾಜಿ ಕ್ರಿಕೆಟಿಗರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸರಿಯಾದ ಮಾರ್ಗದರ್ಶನ ಸಿಕ್ಕರೆ ವೈಭವ್ ಸೂರ್ಯವಂಶಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ರಾಬಿನ್ ಉತ್ತಪ್ಪ ಭವಿಷ್ಯ ನುಡಿದಿದ್ದರು.
ಇನ್ನು ತಮ್ಮ ದಾಖಲೆಯ ಬಗ್ಗೆ ಮಾತನಾಡಿದ ಬಟ್ಲರ್, "ಕ್ರಿಕೆಟ್ ಎಷ್ಟು ಬೇಗ ಬದಲಾಗುತ್ತದೆ ಎಂಬುದು ಆಶ್ಚರ್ಯಕರ. ಕೆಲ ತಿಂಗಳ ಹಿಂದೆ ನಾನು ಕಳಪೆ ಫಾರ್ಮ್‌ನಲ್ಲಿದ್ದೆ. ಆದರೆ ಕಳೆದ ಕೆಲವು ವಾರಗಳಿಂದ ನನ್ನ ವೃತ್ತಿಜೀವನದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಮೂಡಿ ಬರುತ್ತಿರುವ ಅನುಭವವಾಗುತ್ತಿದೆ. ಇದು ತುಂಬಾ ಸಂತೋಷ ನೀಡುತ್ತಿದೆ," ಎಂದರು.
ಪೊಲಾರ್ಡ್ ವಿಶ್ವದಾಖಲೆ ಮುರಿದ ಜಾಸ್ ಬಟ್ಲರ್
"ಆಟಗಾರನ ಮುಂದೆ ಯಾವಾಗಲೂ ಎರಡು ಆಯ್ಕೆಗಳಿರುತ್ತವೆ. ಒಂದು ಕೈಚೆಲ್ಲುವುದು, ಮತ್ತೊಂದು ಹೋರಾಟ ಮುಂದುವರಿಸಿ ಮತ್ತೆ ಫಾರ್ಮ್ ಕಂಡುಕೊಳ್ಳುವುದು. ನಾನು ಎರಡನೇ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ಅದೇ ನನ್ನ ಯಶಸ್ಸಿಗೆ ಕಾರಣ," ಎಂದು ಹೇಳಿದರು.
34 ವರ್ಷದ ಬಟ್ಲರ್, ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್ ಮತ್ತು ಎಂಐ ಲಂಡನ್ ನಡುವಿನ ಪಂದ್ಯದಲ್ಲೇ ಪೊಲಾರ್ಡ್ ಎದುರಿದ್ದಾಗಲೇ ಈ ದಾಖಲೆ ಮುರಿಯಬೇಕೆಂದು ಬಯಸಿದ್ದಾಗಿ ತಿಳಿಸಿದರು. "ಪೊಲಾರ್ಡ್ ಅಲ್ಲಿದ್ದಾಗಲೇ ಅವರ ದಾಖಲೆಯನ್ನು ಹಿಂದಿಕ್ಕಿದ್ದರೆ ಇನ್ನೂ ವಿಶೇಷವಾಗುತ್ತಿತ್ತು. ಆ ಪಟ್ಟಿಯಲ್ಲಿ ಅನೇಕ ಶ್ರೇಷ್ಠ ಆಟಗಾರರ ಹೆಸರುಗಳಿವೆ. ಅವರ ನಡುವೆ ನನ್ನ ಹೆಸರು ಅಗ್ರಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ," ಎಂದು ಬಟ್ಲರ್ ತಿಳಿಸಿದ್ದಾರೆ.
ಆದರೆ ದಾಖಲೆಗಳು ಎಂದಿಗೂ ಶಾಶ್ವತವಲ್ಲ ಎಂಬುದನ್ನು ಒಪ್ಪಿಕೊಂಡ ಬಟ್ಲರ್, "ಇಂದು ನಾನು ಅಗ್ರಸ್ಥಾನದಲ್ಲಿದ್ದೇನೆ. ಆದರೆ ಭವಿಷ್ಯದಲ್ಲಿ ಆ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯ ವೈಭವ್ ಸೂರ್ಯವಂಶಿಗೆ ಇದೆ. ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ, ಒಂದು ದಿನ ಆತ ಈ ದಾಖಲೆಯನ್ನು ತನ್ನದಾಗಿಸಿಕೊಳ್ಳುವುದು ಖಚಿತ," ಎಂದು ವಿಶ್ವಾಸ ವ್ಯಕ್ತಪಡಿಸಿದರು.