ದುಬೈ: ಭಾರತ ಮಹಿಳಾ ತಂಡ, 2026ರ ಮಹಿಳಾ ಏಷ್ಯಾ ಕಪ್ (Women's Asia Cup 2026) ಚಾಂಪಿಯನ್ ಆಗಿದೆ. ಹಾಲಿ ಚಾಂಪಿಯನ್ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ (INDW vs SLW) ಭಾರತ 72 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯ ಟ್ರೋಫಿಯನ್ನು 8ನೇ ಬಾರಿ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ತಲಾ ಅರ್ಧಶತಕಗಳನ್ನು ಬಾರಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ ಶ್ರೀಚರಣಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.
ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲವಾಯಿತು. ತಂಡ ಕೊನೆಯ ಓವರ್‌ನಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. 2024ರಲ್ಲಿ ಭಾರತವನ್ನು ಸೋಲಿಸುವ ಮೂಲಕ ಶ್ರೀಲಂಕಾ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ ಭಾರತ ಆ ಸೋಲಿಗೆ ತಕ್ಕ ಉತ್ತರ ನೀಡಿದ್ದು, ಮತ್ತೊಮ್ಮೆ ಏಷ್ಯಾ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
IND vs AFG: ಅಭಿಷೇಕ್ ಶರ್ಮಾ ಅಬ್ಬರ, ಆಫ್ಘನ್ ಎದುರು ಭಾರತಕ್ಕೆ 7 ವಿಕೆಟ್ ಜಯ!
ಸ್ಮೃತಿ-ಶಫಾಲಿ ಭರ್ಜರಿ ಬ್ಯಾಟಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಸ್ಮೃತಿ ಮಂಧಾನಾ ಮತ್ತು ಶಫಾಲಿ ವರ್ಮಾ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 12.5 ಓವರ್‌ಗಳಲ್ಲಿ 129 ರನ್‌ಗಳ ಬೃಹತ್ ಜೊತೆಯಾಟ ನಡೆಸಿತು.
ಈ ಮೂಲಕ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಮಹಿಳಾ ಟಿ20 ಏಷ್ಯಾ ಕಪ್ ಇತಿಹಾಸದಲ್ಲೇ ಅತ್ಯುತ್ತಮ ಆರಂಭಿಕ ಜೊತೆಯಾಟದ ದಾಖಲೆ ನಿರ್ಮಿಸಿದರು. ಶಫಾಲಿ ವರ್ಮಾ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಅವರು ಮಹಿಳಾ ಟಿ20 ಏಷ್ಯಾ ಕಪ್ ಟೂರ್ನಿಯಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಬರೆದರು. ಒಟ್ಟು 39 ಎಸೆತಗಳನ್ನು ಎದುರಿಸಿದ ಶಫಾಲಿ 68 ರನ್ ಗಳಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು.
ಸ್ಮೃತಿ ಮಂಧಾನ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 59 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದೊಡ್ಡ ಹೊಡೆತಗಳನ್ನು ಬಾರಿಸಲು ರಿಚಾ ಘೋಷ್ ಕೂಡ ಪರದಾಡಿದಂತೆ ಕಂಡುಬಂದರು. ಅವರು 13 ಎಸೆತಗಳಲ್ಲಿ 17 ರನ್ ಗಳಿಸಿದರು. ಇನ್ನು ದೀಪ್ತಿ ಶರ್ಮಾ (5) ಅವರ ಬ್ಯಾಟ್ ಕೂಡ ಹೆಚ್ಚು ಸದ್ದು ಮಾಡಲಿಲ್ಲ. ಭಾರತಿ ಫುಲ್ಮಾಲಿ 2 ರನ್ ಗಳಿಸಿದರೆ, ಕಮಲಿನಿ 5 ಎಸೆತಗಳಲ್ಲಿ 15 ರನ್ ಗಳಿಸಿ ಅಜೇಯರಾಗಿ ಉಳಿದರು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಕಮಲಿನಿ ಸಿಕ್ಸರ್ ಸಿಡಿಸುವ ಮೂಲಕ ಭಾರತವನ್ನು 20 ಓವರ್‌ಗಳಲ್ಲಿ 183 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ನಾಯಕಿ ಚಮಾರಿ ಅಟಪಟ್ಟು, ಮಿತಾಲಿ ಅಯೋಧ್ಯಾ ಹಾಗೂ ಚಮುದಿ ಪ್ರಬೋಧಾ ತಲಾ ಒಂದು ವಿಕೆಟ್ ಪಡೆದರು.
ಮೊದಲ ಓವರ್‌ನಲ್ಲೇ ಶ್ರೀಲಂಕಾಗೆ ಆಘಾತ
ಭಾರತದ ಪರ ಕ್ರಾಂತಿ ಗೌಡ್ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಇಮೇಶಿ ದುಲಾನಿ ಅವರನ್ನು ಬೌಲ್ಡ್ ಮಾಡಿದರು. ಎರಡನೇ ವಿಕೆಟ್‌ಗೆ ಚಾಮರಿ ಅಟಪಟ್ಟು ಮತ್ತು ವಿಶ್ಮಿ ಗುಣರತ್ನೆ 58 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಈ ಜೋಡಿ 53 ಎಸೆತಗಳನ್ನು ಎದುರಿಸಬೇಕಾಯಿತು. ದೀಪ್ತಿ ಶರ್ಮಾ ಅವರ ಬೌಲಿಂಗ್‌ನಲ್ಲಿ 36 ರನ್ ಗಳಿಸಿದ್ದ ಅಟಪಟ್ಟು ಸ್ಟಂಪ್ ಔಟ್ ಆದರು. ಬಳಿಕ ದೀಪ್ತಿ ಶರ್ಮಾ ಅವರೇ ವಿಶ್ಮಿ ಗುಣರತ್ನೆ ಅವರನ್ನು ಬೌಲ್ಡ್ ಮಾಡಿದರು. ವಿಶ್ಮಿ 20 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಶ್ರೀಲಂಕಾ ಆರಂಭಿಕ ಹಂತದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡ ಪರಿಣಾಮ ಭಾರತದ ಬೃಹತ್ ಗುರಿಯನ್ನು ಬೆನ್ನತ್ತುವುದು ಮತ್ತಷ್ಟು ಕಷ್ಟಕರವಾಯಿತು. ಅಂತಿಮವಾಗಿ ಶ್ರೀಲಂಕಾ ತಂಡ, 111 ರನ್‌ಗಳಿಗೆ ಸೀಮಿತವಾಯಿತು.