ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SRH vs RR: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸುರೇಶ್‌ ರೈನಾ ದಾಖಲೆ ಸರಿಗಟ್ಟಿದ ವೈಭವ್‌ ಸೂರ್ಯವಂಶಿ!

SRH vs RR: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಆರಂಭಿಕ ವೈಭವ್‌ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಐಪಿಎಲ್‌ ಪ್ಲೇಆಫ್ಸ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ಜಂಟಿ ದಾಖಲೆಯನ್ನು ಸುರೇಶ್‌ ರೈನಾ ಜೊತೆ ಹಂಚಿಕೊಂಡಿದ್ದಾರೆ.

16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್‌ ಸೂರ್ಯವಂಶಿ.

ಚಂಡೀಗಢ: ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ (RR vs SRH) ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi)ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್‌ ಪ್ಲೇಆಫ್ಸ್‌ ಅಥವಾ ನಾಕ್‌ಔಟ್‌ ಪಂದ್ಯಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ದಾಖಲೆಯನ್ನು ಸರಿಗಟ್ಟಿದ್ದಾರೆ.

ಸಿಎಸ್‌ಕೆ ಮಾಜಿ ಬ್ಯಾಟ್ಸ್‌ಮನ್‌ ಸುರೇಶ ರೈನಾ 2024ರ ಐಪಿಎಲ್‌ ಟೂರ್ನಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಆ ಮೂಲಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್‌ ಪ್ಲೇಆಫ್ಸ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ದೊಡ್ಡ ದಾಖಲೆಯನ್ನು ಬರೆದಿದ್ದರು. ಇದೀಗ ಈ ದಾಖಲೆಯನ್ನು ಬಿಹಾರ ಮೂಲದ ಬ್ಯಾಟ್ಸ್‌ಮನ್‌ ಸರಿಗಟ್ಟಿದ್ದಾರೆ.

RR vs SRH: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಸನ್‌ರೈಸರ್ಸ್‌ ಹೈದರಾಬಾದ್‌!

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ರಾಜಸ್ಥಾನ್‌ ರಾಯಲ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ ಅವರು ಆರಂಭದಿಂದಲೇ ಸ್ಪೋಟಕ ಬ್ಯಾಟ್‌ ಮಾಡಿದರು. ಅವರು ಆಡಿದ 29 ಎಸೆತಗಳಲ್ಲಿ ಬರೋಬ್ಬರಿ 12 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 97 ರನ್‌ ಸಿಡಿಸಿದರು. ಇನ್ನೇನು ಐಪಿಎಲ್‌ ಇತಿಹಾಸದಲ್ಲಿಯೇ ಕ್ರಿಸ್‌ ಗೇಲ್‌ ಅವರ ವೇಗದ ಶತಕದ ದಾಖಲೆಯನ್ನು ಮುರಿಯುವ ಸನಿಹದಲ್ಲಿ ಪ್ರಫುಲ್‌ ಹಿಂಗೆಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ನಿರಾಶೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಆದರೂ ಅವರು 334.48ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ಎದುರಾಳಿ ಎಸ್‌ಆರ್‌ಎಚ್‌ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಲ್ಲದೆ, ಕ್ರಿಕೆಟ್‌ ಅಭಿಮಾನಿಗಳ ಪ್ರೀತಿಗೆ ಭಾಜನರಾದರು.



ಐಪಿಎಲ್‌ ಟೂರ್ನಿಯ ಪ್ಲೇಆಫ್ಸ್‌/ನಾಕ್‌ಔಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ಸ್‌

16 - ಸುರೇಶ್‌ ರೈನಾ vs PBKS, Wankhede, 2014

16 - ವೈಭವ್‌ ಸೂರ್ಯವಂಶಿ vs SRH, Mullanpur, 2026*

17 - ಆಡಂ ಗಿಲ್‌ಕ್ರಿಸ್ಟ್‌ vs DC, Centurion, 2009

20 - ಎಂಎಸ್‌ ಧೋನಿ vs MI, Bengaluru, 2012

21 - ಡ್ವೇನ್‌ ಸ್ಮಿತ್‌ vs CSK, Delhi, 2013

21 -ವೀರೇಂದ್ರ ಸೆಹ್ವಾಗ್‌ vs CSK, Wankhede, 2014

21 - ರಜತ್‌ ಪಾಟಿದಾರ್‌ vs GT, Dharamsala, 2026

ಪೂರನ್‌ ದಾಖಲೆ ಸರಿಗಟ್ಟಿದ ವೈಭವ್‌

ಐಪಿಎಲ್‌ ಟೂರ್ನಿಯಲ್ಲಿ20 ಎಸೆತಗಳ ಒಳಗಾಗಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವೈಭವ್‌ ಸೂರ್ಯವಂಶಿ ಎರಡನೇ ಸ್ಥಾನಕೆ ಲಗ್ಗೆ ಇಡುವ ಮೂಲಕ ನಿಕೋಲಸ್‌ ಪೂರನ್‌ ಅವರ ಜೊತೆ ಜಂಟಿ ದಾಖಲೆಯನ್ನು ಹಂಚಿಕೊಂಡಿದ್ದಾರೆ. 20 ಎಸೆತಗಳ ಒಳಗಾಗಿ ವೈಭವ್‌ ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ. ವೈಭವ್‌ 16 ಬಾಲ್‌ಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಈ ಸಾಧಕರ ಪಟ್ಟಿಯಲ್ಲಿ ಅಭಿಷೇಕ್‌ ಶರ್ಮಾ (6 ಬಾರಿ) ಅಗ್ರ ಸ್ಥಾನದಲ್ಲಿದ್ದಾರೆ.