ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(IPL 2026) ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್, ಕ್ರೀಸ್ ಗೇಲ್ ಆಡಿ ಹೋಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಇನ್ನೂ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯರಾಗಿದ್ದಾರೆ. ಇದರ ನಡುವೆ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಆಟಗಾರನನ್ನು ಭಾರತದ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು (Ambati Rayudu) ಬೇರೆ ಆಟಗಾರನನ್ನು ಆರಿಸಿ ಅಚ್ಚರಿ ಮೂಡಿಸಿದ್ದಾರೆ. ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ ಆಲ್‌ರೌಂಡರ್ ಸುನೀಲ್ ನರೇನ್ (Sunil Narine) ಅವರನ್ನು ಆಯ್ಕೆ ಮಾಡಿದ್ದಾರೆ.
ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದ ಬಳಿಕ ಅಂಬಾಟಿ ರಾಯುಡು ಈ ಮಾತನ್ನು ಹೇಳಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಅವರು, ವೆಸ್ಟ್ ಇಂಡೀಸ್ ಆಟಗಾರ ತಂಡಕ್ಕೆ ಎರಡೂ ಹಾದಿಯಲ್ಲಿ ನೆರವು ನೀಡಲಿದ್ದಾರೆಂದು ತಿಳಿಸಿದ್ದಾರೆ.
"ನನ್ನ ಪ್ರಕಾರ ಐಪಿಎಲ್ ಟೂರ್ನಿಯ ಶ್ರೇಷ್ಠ ಆಟಗಾರ ಹಾಗೂ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸುನೀಲ್ ನರೇನ್. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ನರೇನ್ ಮ್ಯಾಚ್ ವಿನ್ನರ್. ಇವರನ್ನು ಹೊರತುಪಡಿಸಿ ಬೇರೆ ಯಾರಾದರೂ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರೂ ಇಲ್ಲ ಎಂದು ಭಾವಿಸುತ್ತೇನೆ. ಆದರೆ, ನರೇನ್ ಈ ಸ್ಥಾನವನ್ನು ತುಂಬುತ್ತಾರೆ. ನನ್ನ ಲಿಸ್ಟ್‌ನಲ್ಲಿ ಸುನೀಲ್ ಯಾವಾಗಲೂ ಇದ್ದೇ ಇರುತ್ತಾರೆ," ಎಂದು ರಾಯುಡು ಹೇಳಿದ್ದಾರೆ.
RCB vs PBKS ಪಂದ್ಯದಲ್ಲಿ ರಜತ್ ಪಾಟಿದಾರ್ ಏಕೆ ಆಡುತ್ತಿಲ್ಲ? ಇದಕ್ಕೆ ಕಾರಣ ಇಲ್ಲಿದೆ!
ಭಾರತದ ಮಾಜಿ ಕೋಚ್ ಸಂಜಯ್ ಬಾಂಗರ್ ಅವರು, ಅಂಬಾಟಿ ರಾಯುಡು ಅವರ ಅಭಿಪ್ರಾಯಕ್ಕೆ ಬಲವಾದ ಬೆಂಬಲ ವ್ಯಕ್ತಪಡಿಸಿ, ಸುನೀಲ್ ನರೇನ್ ಅವರನ್ನು ತಮ್ಮ ಸಾರ್ವಕಾಲಿಕ ಟಾಪ್-5 ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ನೀಡಿದ್ದಾರೆ. ನರೇನ್ ಅವರ ಸ್ಥೈರ್ಯವನ್ನು ಶ್ಲಾಘಿಸಿದ ಬಾಂಗಾರ್, ತಮ್ಮ ಬೌಲಿಂಗ್ ಆಕ್ಷನ್ ಕುರಿತು ಹಲವು ಬಾರಿ ಪ್ರಶ್ನೆಗಳು ಎದ್ದಿದ್ದರೂ ಅವರು ಅದನ್ನು ಸಮರ್ಥವಾಗಿ ಎದುರಿಸಿ ಮತ್ತೆ ಯಶಸ್ಸಿನ ಹಾದಿಗೆ ಮರಳಿದ ರೀತಿಯನ್ನು ವಿಶೇಷವಾಗಿ ಉಲ್ಲೇಖಿಸಿದರು.
“ತಮ್ಮ ಬೌಲಿಂಗ್ ಆಕ್ಷನ್ ಕುರಿತು ಬಂದ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು,” ಎಂದ ಬಂಗಾರ್, “ಆದರೆ ಅವರು ಮತ್ತೊಂದು ರೀತಿಯಲ್ಲಿ ಬೌಲ್ ಮಾಡುವ ಶೈಲಿಯನ್ನು ಕಂಡುಹಿಡಿದರು. ಅದೇ ಸಮಯದಲ್ಲಿ ಚೆಂಡನ್ನು ಎರಡೂ ದಿಕ್ಕಿನಲ್ಲಿ ತಿರುಗಿಸುವ ಸಾಮರ್ಥ್ಯವನ್ನು ಕೂಡ ಉಳಿಸಿಕೊಂಡರು. ಇದರಿಂದ ಬ್ಯಾಟರ್ ಮನಸ್ಸಿನಲ್ಲಿ ಭಾರೀ ಅನುಮಾನ ಉಂಟಾಗುತ್ತದೆ. ಇಂತಹ ಗುಣಗಳೇ ಅವರನ್ನು ದಂತಕಥೆ ಮಟ್ಟದ ಆಟಗಾರನನ್ನಾಗಿ ಮಾಡಿವೆ,” ಎಂದು ಅವರು ಹೇಳಿದ್ದಾರೆ.
KKR vs GT: ರನ್ ಮಳೆಯಲ್ಲಿ ಮುಳುಗಿದ ಟೈಟಾನ್ಸ್; ಕೆಕೆಆರ್‌ಗೆ 29 ರನ್ ಜಯ
ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಸುನೀಲ್ ನರೇನ್
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಫಿನ್ ಆಲೆನ್ (93 ರನ್), ಅಂಗ್‌ಕೃಷ್ ರಘುವಂಶಿ (80* ರನ್) ಹಾಗೂ ಕ್ಯಾಮೆರಾನ್ ಗ್ರೀನ್ (52* ರನ್) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 247 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ, ಸುನೀಲ್ ನರೇನ್ (29 ಕ್ಕೆ 2) ಅವರ ಸ್ಪಿನ್ ಮೋಡಿಗೆ ನಲುಗಿ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಕೆಕೆಆರ್ 29 ರನ್‌ಗಳಿಂದ ಗೆದ್ದು ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಸುನೀಲ್ ನರೇನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.