ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಆರ್‌ಸಿಬಿಗೆ ದೊಡ್ಡ ಮೊತ್ತದ ಗುರಿಯನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಈ ಎರಡೂ ತಂಡಗಳು ಈಗಾಗಲೇ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿವೆ, ಆದರೂ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಬೆಂಗಳೂರು ತಂಡ ಪ್ರಯತ್ನಿಸಿದರೆ, ಹೈದರಾಬಾದ್ ತಂಡ ಅಗ್ರ ಎರಡರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಈ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲಲು ಎದುರು ನೋಡುತ್ತಿದೆ. ಅಂದ ಹಾಗೆ ಸದ್ಯ ಆರ್‌ಸಿಬಿ ಅಂಕಪಟ್ಟಿಯಲ್ಲಿ 18 ಅಂಕಗಳಿಂದ ಅಗ್ರ ಸ್ಥಾನದಲ್ಲಿದ್ದರೆ, ಪ್ಯಾಟ್ ಕಮಿನ್ಸ್ ನಾಯಕತ್ವದ ಹೈದರಾಬಾದ್ ತಂಡ 16 ಅಂಕಗಳ ಮೂಲಕ ಮೂರನೇ ಸ್ಥಾನದಲ್ಲಿದೆ.
ಸನ್‌ರೈಸರ್ಸ್ ವಿರುದ್ಧದ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಆರ್‌ಸಿಬಿಗೆ ನಷ್ಟವೇ?
ಅಂದ ಹಾಗೆ ಈ ಪಂದ್ಯಕ್ಕೆ ಎಸ್‌ಆರ್‌ಎಚ್ ತಂಡ ತನ್ನ ಪ್ಲೇಯಿಂಗ್ XIನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ, ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಗಾಯಗೊಂಡಿರುವ ಜೇಕಬ್ ಬೆಥೆಲ್ ಅವರ ಸ್ಥಾನಕ್ಕೆ ರಜತ್ ಪಾಟಿದಾರ್ ಆಡುವ ಬಳಗಕ್ಕೆ ಬಂದಿದ್ದಾರೆ. ಎರಡೂ ತಂಡಗಳು ಸಮಬಲವನ್ನು ಹೊಂದಿದ್ದು ಈ ಪಂದ್ಯ ಅತ್ಯಂತ ತೀವ್ರ ಕುತೂಹಲದಿಂದ ಕೂಡಿರುತ್ತದೆ. ಈ ಟೂರ್ನಿಯಲ್ಲಿ ಮೊದಲ ಬಾರಿ ಕಾದಾಟ ನಡೆಸಿದ್ದ ವೇಳೆ ಆರ್‌ಸಿಬಿ ಬೆಂಗಳೂರಿನಲ್ಲಿ ಎಸ್‌ಆರ್‌ಎಚ್ ತಂಡವನ್ನು ಮಣಿಸಿತ್ತು. ಇದೀಗ ಆ ಸೇಡನ್ನು ತೀರಿಸಿಕೊಳ್ಳಲು ಆರೆಂಜ್ ಆರ್ಮಿ ಬಯಸುತ್ತಿದೆ.
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜಾಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಮ್ ದಾರ್
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಾಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಅಭಿಷೇಕ್ ಶರ್ಮಾ, ಇಶಾನ್‌ಕಿಶನ್ ಹಾಗೂ ಹೆನ್ರಿಚ್ ಕ್ಲಾಸೆನ್ ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ 10 ಮಂದಿ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್, ಇಶಾನ್ ಮಾಲಿಂಗಾ ಹಾಗೂ ಸಾಕಿಬ್ ಹುಸೇನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ.
ಇನ್ನು ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ 500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜಾಶ್ ಹೇಝಲ್‌ವುಡ್ ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುಯಶ್ ಶರ್ಮಾ ಕೂಡ ಗಮನ ಸೆಳೆಯುತ್ತಿದ್ದಾರೆ.