ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼ: ಎಂಎಸ್‌ ಧೋನಿಗೆ ಗೌರವ ಸಲ್ಲಿಸಿದ ಸುರೇಶ್‌ ರೈನಾ!

ಆಟಗಾರನಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ವಿದಾಯ ಘೋಷಿಸಿದ ಎಂಎಸ್ ಧೋನಿ ಅವರಿಗೆ ಸುರೇಶ್ ರೈನಾ ಭಾವುಕ ಸಂದೇಶದ ಮೂಲಕ ಗೌರವ ಸಲ್ಲಿಸಿದ್ದಾರೆ. ಧೋನಿ ಜೊತೆಗಿನ ಸ್ನೇಹ, ಗೆಲುವುಗಳು ಹಾಗೂ ಸಿಎಸ್‌ಕೆ ಸಾಧನೆಗಳನ್ನು ಸ್ಮರಿಸಿರುವ ರೈನಾ, ಒಮ್ಮೆ ನಾಯಕನಾದವರು ಎಂದೆಂದಿಗೂ ನಮ್ಮ ತಲಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಎಸ್‌ ಧೋನಿಗೆ ಗೌರವ ಸಲ್ಲಿಸಿದ ಸುರೇಶ್‌ ರೈನಾ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ (IPL 2026) ಮತ್ತೊಂದು ಸುವರ್ಣ ಅಧ್ಯಾಯ ಅಂತ್ಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ನಾಯಕ ಹಾಗೂ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ಎಂಎಸ್ ಧೋನಿ (MS Dhoni) ಆಟಗಾರನಾಗಿ ಐಪಿಎಲ್‌ಗೆ ವಿದಾಯ ಘೋಷಿಸಿದ್ದಾರೆ. ರಿಟೆನ್ಷನ್ ದಿನದಂದು ಸಿಎಸ್‌ಕೆ ಈ ಮಹತ್ವದ ಸುದ್ದಿಯನ್ನು ಪ್ರಕಟಿಸಿದೆ. ಆದರೆ ಧೋನಿ ತಂಡದೊಂದಿಗಿನ ತಮ್ಮ ಸಂಬಂಧವನ್ನು ಮುಂದುವರಿಸಲಿದ್ದು, ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಧೋನಿ ನಿವೃತ್ತಿ ಘೋಷಿಸುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು, ಮಾಜಿ ಆಟಗಾರರು ಹಾಗೂ ಸಹ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಸಂದೇಶಗಳ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಧೋನಿ ಅವರ ಮಾಜಿ ಸಹ ಆಟಗಾರ ಹಾಗೂ ಆಪ್ತ ಸ್ನೇಹಿತ ಸುರೇಶ್ ರೈನಾ ಕೂಡ ವಿಶೇಷ ಸಂದೇಶದ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

IPL 2027: ಯಾರಿಂದಲೂ ಮುರಿಯಲಾಗದ ಎಂಎಸ್‌ ಧೋನಿಯ ಸಿಎಸ್‌ಕೆ ನಾಯಕತ್ವದ ದಾಖಲೆಗಳು!

ಕೆಲವು ಸಂಬಂಧಗಳು ಕ್ರಿಕೆಟ್‌ಗಿಂತ ಮಿಗಿಲಾದವು

ಎಂಎಸ್‌ ಧೋನಿ ನಿವೃತ್ತಿಗೆ ಪ್ರತಿಕ್ರಿಯಿಸಿರುವ ಸುರೇಶ್ ರೈನಾ, ತಮ್ಮ ಎಕ್ಸ್ (X) ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

"ಕೆಲವು ಜೊತೆಯಾಟಗಳು ಕ್ರಿಕೆಟ್‌ಗಿಂತ ಮಿಗಿಲಾಗಿರುತ್ತವೆ. ಕೆಲವು ಸಂಬಂಧಗಳು ಗಡಿರೇಖೆಯನ್ನೂ ಮೀರಿರುತ್ತವೆ. ಇನ್ನು ಕೆಲವು ದಿಗ್ಗಜರು ಎಂದಿಗೂ ನಿಜವಾಗಿಯೂ ನಿವೃತ್ತರಾಗುವುದಿಲ್ಲ. ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಕ್ಷಣಗಳಿಂದ ಹಿಡಿದು ಒಟ್ಟಿಗೆ ಟ್ರೋಫಿಗಳನ್ನು ಎತ್ತಿಹಿಡಿದವರೆಗಿನ ಪ್ರತಿಯೊಂದು ಕ್ಷಣವೂ ನನ್ನ ಜೀವನದ ಅಮೂಲ್ಯ ನೆನಪಾಗಿದೆ ಮಾಹಿ ಭಾಯ್. ನಾವು ಗೆಲುವುಗಳನ್ನು ಸಂಭ್ರಮಿಸಿದ್ದೇವೆ, ಸವಾಲುಗಳನ್ನು ಎದುರಿಸಿದ್ದೇವೆ. ನನ್ನ ಹೃದಯಕ್ಕೆ ಸದಾ ಹತ್ತಿರವಾಗಿರುವ ಕನಸೊಂದನ್ನು ಒಟ್ಟಿಗೆ ಬದುಕಿದ್ದೇವೆ," ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಸುರೇಶ್‌ ರೈನಾ ಬರೆದುಕೊಂಡಿದ್ದಾರೆ.

"ನಂಬರ್ 7 ಜೆರ್ಸಿ ಇನ್ನು ಮುಂದೆ ಮೈದಾನದಲ್ಲಿ ಕಾಣಿಸಿಕೊಳ್ಳದಿರಬಹುದು. ಆದರೆ ಚೆಪಾಕ್ ಮೈದಾನದಲ್ಲಿ ನಿಮ್ಮ ಪರಂಪರೆ ಎಂದೆಂದಿಗೂ ಅಭಿಮಾನಿಗಳ ಹೃದಯದ ಮಿಡಿತವಾಗಿರಲಿದೆ. ನಮ್ಮ ಪ್ರೀತಿಯ ಸಿಎಸ್‌ಕೆ ತಂಡದ ಮೆಂಟರ್ ಆಗಿ ನಿಮ್ಮ ಹೊಸ ಇನಿಂಗ್ಸ್ ಆರಂಭಿಸುತ್ತಿರುವ ಸಂದರ್ಭದಲ್ಲಿ, ನಿಮ್ಮ ಶಾಂತ ಮನಸ್ಥಿತಿ, ನಿರ್ಭೀತ ಮನೋಭಾವ ಮತ್ತು ಅಪಾರ ಜ್ಞಾನ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂಬ ವಿಶ್ವಾಸವಿದೆ."



"ಮೈದಾನದಲ್ಲಿ ನಮ್ಮನ್ನು ಮುನ್ನಡೆಸುವುದರಿಂದ ಹಿಡಿದು ಹೊರಗಿನಿಂದ ಮಾರ್ಗದರ್ಶನ ನೀಡುವವರೆಗೆ ನೀವು ಸದಾ ನಮ್ಮ ಥಲಾ ಆಗಿರುತ್ತೀರಿ. ಪಾತ್ರ ಬದಲಾಗಬಹುದು, ಆದರೆ ಪರಂಪರೆ ಬದಲಾಗುವುದಿಲ್ಲ. ಒಮ್ಮೆ ನಾಯಕನಾದವರು ಎಂದೆಂದಿಗೂ ನಮ್ಮ ಥಲಾ. ಲವ್ ಯು ಮಾಹಿ ಭಾಯ್," ಎಂದು ಸುರೇಶ್‌ ರೈನಾ ಬರೆದುಕೊಂಡಿದ್ದಾರೆ.

ಧೋನಿ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ತಂಡ ಮುನ್ನಡೆಸಿದ್ದ ರೈನಾ

ಸುರೇಶ್ ರೈನಾ ಹಲವು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿಯ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಧೋನಿ ಅನುಪಸ್ಥಿತಿಯಲ್ಲಿ ಹಲವು ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದರು.

2018ರಲ್ಲಿ ಮತ್ತೆ ಸಿಎಸ್‌ಕೆ ತಂಡಕ್ಕೆ ಮರಳಿದ್ದ ರೈನಾ, 2021ರವರೆಗೆ ತಂಡದ ಪರ ಆಡಿದ್ದರು. ಆದರೆ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಅವರನ್ನು ಖರೀದಿಸಿರಲಿಲ್ಲ. ಬಳಿಕ ಅವರು ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

IPL 2027: 3 ಬಾರಿ ಆರ್‌ಸಿಬಿ ಬೌಲರ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂಎಸ್‌ ಧೋನಿ!

'ಧೋನಿ ಜೊತೆ ಆಡಿದ್ದು ನನ್ನ ಅದೃಷ್ಟ'

ಧೋನಿ ನಿವೃತ್ತಿ ಕುರಿತು ಮಾತನಾಡಿದ ಸುರೇಶ್ ರೈನಾ, ಅವರೊಂದಿಗೆ ಸಿಎಸ್‌ಕೆ ತಂಡದಲ್ಲಿ ಆಡಿದ್ದು ತಮ್ಮ ಅದೃಷ್ಟ ಎಂದು ಹೇಳಿದ್ದಾರೆ. ವಿಶೇಷವೆಂದರೆ ಧೋನಿ ಮತ್ತು ರೈನಾ ಇಬ್ಬರೂ 2020ರ ಆಗಸ್ಟ್ 15ರಂದು ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

"ಅವರು ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡಿದ್ದಾರೆ. ದೊಡ್ಡ ಆಟಗಾರನಾಗಿ ಬೆಳೆದಿದ್ದಾರೆ. ಆದರೆ ಒಬ್ಬ ಮನುಷ್ಯನಾಗಿ ಅವರಿಂದ ನಾವು ಕಲಿತಿರುವ ಪಾಠಗಳು ಇನ್ನೂ ಹೆಚ್ಚು ಮಹತ್ವದ್ದಾಗಿವೆ. ಸಿಎಸ್‌ಕೆ ಪರ ಅವರು ಹಲವು ಪಂದ್ಯಗಳನ್ನು ಆಡಿದ್ದಾರೆ. ನಾಕೌಟ್ ಪಂದ್ಯಗಳು, ಸೆಮಿಫೈನಲ್ ಹಾಗೂ ಫೈನಲ್‌ಗಳಲ್ಲೂ ತಂಡವನ್ನು ಮುನ್ನಡೆಸಿದ್ದಾರೆ.

"ಚೆನ್ನೈ ನಗರದ ಜನರಿಂದ ಅವರು ಪಡೆದ ಪ್ರೀತಿ ಅಪಾರ. ಒಬ್ಬ ವ್ಯಕ್ತಿಯಾಗಿ ಮತ್ತು ನಾಯಕನಾಗಿ ಅವರು ಸಾಕಷ್ಟು ಸಾಧಿಸಿದ್ದಾರೆ. ಆದರೆ ಸಿಎಸ್‌ಕೆ ಅಭಿಮಾನಿಗಳಿಂದ ಅವರು ಪಡೆದ ಪ್ರೀತಿಯೇ ನನಗೆ ಹೆಚ್ಚು ವಿಶೇಷವಾಗಿ ಕಾಣಿಸುತ್ತದೆ. ಅವರು ಅಂತಹ ವ್ಯಕ್ತಿತ್ವ ಹೊಂದಿದ್ದಾರೆ," ಎಂದು ಸುರೇಶ್‌ ರೈನಾ ಜಿಯೋಸ್ಟಾರ್‌ಗೆ ತಿಳಿಸಿದ್ದಾರೆ.