ರಾಯ್ಪುರ, ಅ. 20: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪೂರ್ಣ ಪ್ರಮಾಣದ ನಾಯಕಿಯಾಗಿ ಆಯ್ಕೆಯಾದ ಸ್ಮೃತಿ ಮಂಧಾನ (Smriti Mandhana) ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಜಿಂಬಾಬ್ವೆ ತಂಡದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್ ಸ್ವಿಪ್ ಮಾಡಿಕೊಂಡಿದೆ (ZIMW vs INDW). ಮಂಗಳವಾರ (ಅಕ್ಟೋಬರ್ 20) ಛತ್ತೀಸ್ಗಢದ ರಾಯ್ಪುರ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3ನೇ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ 92 ರನ್ಗಳ ಅಂತರದಿಂದ ಜಯಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಹರ್ಮನ್ಪ್ರೀತ್ ಕೌರ್ (91) ಮತ್ತು ಶಫಾಲಿ ವರ್ಮಾ (69) ಅವರ ಭರ್ಜರಿ ಅರ್ಧ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 216 ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಜಿಂಬಾಬ್ವೆ ಶಾರ್ನ್ ಮೇಯರ್ಸ್ ಅವರ ಏಕಾಂಗಿ ಹೋರಾಟದ (60) ಹೊರತಾಗಿಯೂ 20 ಓವರ್ನಲ್ಲಿ 7 ವಿಕೆಟ್ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ತಂಡಕ್ಕೆ ಭರ್ಜರಿ ಜಯ:
ಹರ್ಮನ್ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ 216 ರನ್ ಕಲೆ ಹಾಕಿತು. ಭರ್ಜರಿಯಾಗಿ ಬ್ಯಾಟ್ ಬೀಸಿದ ಹರ್ಮನ್ಪ್ರೀತ್ ಕೌರ್ 41 ಎಸೆತಗಳಲ್ಲಿ 91 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಬ್ಯಾಟ್ನಿಂದ 5 ಸಿಕ್ಸರ್ ಮತ್ತು 10 ಫೋರ್ ಸಿಡಿಯಿತು. ಇನ್ನು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 37 ಬಾಲ್ಗಳಲ್ಲಿ 69 ರನ್ ಕಲೆ ಹಾಕಿ ಗಮನ ಸೆಳೆದರು. ಇತ್ತೀಚೆಗಷ್ಟೇ ಭಾರತ ತಂಡದ ನಾಯಕತ್ವ ತ್ಯಜಿಸಿದ ಹರ್ಮನ್ಪ್ರೀತ್ ಕೌರ್ ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಅವರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರು. ಶಫಾಲಿ ವರ್ಮಾ ಪ್ಲೇಯರ್ ಆಫ್ ದಿ ಸೀರೀಸ್ ಆಗಿ ಆಯ್ಕೆಯಾದರು.
ಬೌಲಿಂಗ್ನಲ್ಲಿ ನಂದನಿ ಶರ್ಮಾ ಮಿಂಚು
ಭಾರತ ತಂಡದ ವೇಗಿ ನಂದನಿ ಶರ್ಮಾ ಬೌಲಿಂಗ್ನಲ್ಲಿ ಮಿಂಚು ಹರಿಸಿದರು. 4 ಓವರ್ನಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಕನ್ನಡತಿ ನಿಕಿ ಪ್ರಸಾದ್, ಕ್ರಾಂತಿ ಗೌಡ್, ಆರುಂಧತಿ ರೆಡ್ಡಿ, ದೀಪ್ತಿ ಶರ್ಮಾ ತಲಾ 1 ವಿಕೆಟ್ ಕಬಳಿಸಿದರು.
ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ವನಿತೆಯರಿಗೆ ಭರ್ಜರಿ ಜಯ; ಸರಣಿ ಗೆದ್ದ ಸ್ಮೃತಿ ಮಂಧನಾ ಪಡೆ
ಪರದಾಡಿದ ಜಿಂಬಾಬ್ವೆ
ಬೃಹತ್ ಸವಾಲು ಬೆನ್ನತ್ತಿದ ಜಿಂಬಾಬ್ವೆ ಪರದಾಡಿತು. ಶಾರ್ನ್ ಮೇಯರ್ಸ್ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರ ಬ್ಯಾಟ್ನಿಂದ ರನ್ ಸಿಡಿಯಲಿಲ್ಲ. 49 ಬಾಲ್ನಲ್ಲಿ ಅವರು 4 ಸಿಕ್ಸರ್ ಸಹಾಯದಿಂದ ಶಾರ್ನ್ ಮೇಯರ್ಸ್ 60 ರನ್ ಗಳಿಸಿದರು. ಬಿಲಾವ್ಡ್ ಬಿಝಾ 44 ರನ್ ಕಲೆ ಹಾಕಿದರು.
ಸಂಕ್ಷಿಪ್ತ ಸ್ಕೋರ್
ಭಾರತ ತಂಡ: 216/7(20)
ಜಿಂಬಾಬ್ವೆ ತಂಡ: 124/7(20)