ನವದೆಹಲಿ: ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ (Aakash Chopra) ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup 2026) ಅತ್ಯಂತ ಪರಿಣಾಮಕಾರಿ ಬೌಲರ್‌ಗಳಾಗಿ ಭಾರತದ ವರುಣ್ ಚಕ್ರವರ್ತಿ (Varun Chakravarthy) ಮತ್ತು ಜಸ್‌ಪ್ರೀತ್ ಬುಮ್ರಾ, ಜೊತೆಗೆ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಮ್ ಝಾಂಪ ಅವರನ್ನು ತಮ್ಮ ಟಾಪ್-3 ಪಟ್ಟಿಯಲ್ಲಿ ಆಯ್ಕೆ ಮಾಡಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಪೋ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂಭಾಷಣೆಯ ವೇಳೆ ಕಾಮೆಂಟೇಟರ್ ಆಗಿರುವ ಚೋಪ್ರಾ, ಉತ್ತಮ ಫಾರ್ಮ್‌ನಲ್ಲಿರುವ ಸ್ಪಿನ್ನರ್ ವರುಣ್ ಚಕ್ರವರ್ತಿಯೇ ತಮ್ಮ ಮೊದಲ ಆಯ್ಕೆ ಎಂದು ಹೇಳಿದರು. ಅವರ ನಂತರ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮತ್ತು ಅನುಭವಿ ಲೆಗ್ ಸ್ಪಿನ್ನರ್ ಆಡಮ್ ಝಾಂಪಾ ಅವರನ್ನು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಇರಿಸಿದ್ದಾರೆ.
2024ರ ಅಕ್ಟೋಬರ್ ತಿಂಗಳಲ್ಲಿ ಮೂರು ವರ್ಷಗಳ ವಿರಾಮದ ನಂತರ ಭಾರತ ತಂಡಕ್ಕೆ ಮರಳಿದ ಬಳಿಕ ವರುಣ್ ಚಕ್ರವರ್ತಿ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡು ಮೂಲದ ಈ ಸ್ಪಿನ್ನರ್, ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ಶ್ಲಾಘನೀಯ ದಾಖಲೆ ಹೊಂದಿದ್ದಾರೆ. ಅವರು ಆಡಿದ 36 ಪಂದ್ಯಗಳಲ್ಲಿ 15.69ರ ಸರಾಸರಿ ಹಾಗೂ 13.17 ಸ್ಟ್ರೈಕ್ ರೇಟ್‌ನಲ್ಲಿ 59ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದರ ನಡುವೆ, 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೇ ಜಸ್‌ಪ್ರೀತ್ ಬುಮ್ರಾ ಭಾರತಕ್ಕೆ ನಂಬಿಕಸ್ತ ಬೌಲರ್ ಆಗಿ ತೋರಿಸಿಕೊಂಡಿದ್ದಾರೆ. 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ, ಬುಮ್ರಾ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜರಾಗಿದ್ದರು. ಬಲಗೈ ವೇಗದ ಬೌಲರ್ ಆಗಿರುವ ಬುಮ್ರಾ, ಆ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರು.
T20 World Cup 2026: ಶ್ರೀಲಂಕಾ ಎ ವಿರುದ್ದ ಒಮಾನ್ ತಂಡಕ್ಕೆ 5 ವಿಕೆಟ್ ಜಯ!
ಮತ್ತೊಂದೆಡೆ, ಆಡಮ್ ಝಾಂಪಾ ತಮ್ಮ ಪರಿಣಾಮಕಾರಿ ವೈಟ್-ಬಾಲ್ ಬೌಲಿಂಗ್ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಝಾಂಪಾ, ಇದುವರೆಗೆ 111 ಟಿ20ಐ ಪಂದ್ಯಗಳಲ್ಲಿ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 20.99ರ ಸರಾಸರಿ ಮತ್ತು 17.09ರ ಸ್ಟ್ರೈಕ್ ರೇಟ್ ಬೌಲ್ ಮಾಡಿದ್ದಾರೆ.
ಪ್ರಭಾವಿ ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ಚೋಪ್ರಾ
ಬ್ಯಾಟ್ಸ್‌ಮನ್‌ಗಳ ವಿಷಯಕ್ಕೆ ಬಂದಾಗ, 20 ತಂಡಗಳು ಪಾಲ್ಗೊಳ್ಳುವ ಟೂರ್ನಿಗೆ ಆಕಾಶ್ ಚೋಪ್ರಾ ಅವರು ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಜೋಸ್ ಬಟ್ಲರ್ ಅವರನ್ನು ತಮ್ಮ ಟಾಪ್-3 ಪರಿಣಾಮಕಾರಿ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿದ್ದಾರೆ.
ಅಭಿಷೇಕ್ ಶರ್ಮಾ ಪ್ರಸ್ತುತ ಭಾರತದ ನಂ.1 ಶ್ರೇಯಾಂಕದ ಬ್ಯಾಟ್ಸ್‌ಮನ್ ಆಗಿದ್ದು, 37 ಟಿ20ಐ ಇನಿಂಗ್ಸ್‌ಗಳಲ್ಲಿ 194.75 ಎಂಬ ಅಚ್ಚರಿಯ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಜೊತೆಗೆ ಅವರು 37.06ರ ಅತ್ಯುತ್ತಮ ಸರಾಸರಿಯನ್ನೂ ದಾಖಲಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಟಿ20ಐ ಸರಣಿ ಸೋತ ಆಸ್ಟ್ರೇಲಿಯಾ ಬಗ್ಗೆ ರಿಕಿ ಪಾಂಟಿಂಗ್ ದೊಡ್ಡ ಹೇಳಿಕೆ!
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟ್ರಾವಿಸ್ ಹೆಡ್ ಮತ್ತು ಜೋಸ್ ಬಟ್ಲರ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಬ್ಬರೂ ಆರಂಭದಿಂದಲೂ ಬೌಲರ್‌ಗಳ ಮೇಲೆ ದಾಳಿ ನಡೆಸುವ ಸ್ವಭಾವವನ್ನು ಹೊಂದಿದ್ದಾರೆ. ಅಪಾರ ಅನುಭವ ಹೊಂದಿರುವ ಬಟ್ಲರ್‌ಗೆ 2022ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಅನುಭವವಿದೆ.
ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ತಂಡಗಳ ಬಗ್ಗೆ ಮಾತನಾಡಿದ ಚೋಪ್ರಾ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನೊಂದಿಗೆ ಆಯ್ಕೆ ಮಾಡಿದರು. ಭಾರತ ಮತ್ತು ಇಂಗ್ಲೆಂಡ್ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದಿವೆ. ಇದರ ನಡುವೆ 2021ರಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿಯನ್ನು ಗೆದ್ದಿದೆ. ಕಿವೀಸ್ ಇನ್ನೂ ಪ್ರಶಸ್ತಿಯನ್ನು ಎತ್ತಿಹಿಡಿಯಲಿಲ್ಲ.