ನವದೆಹಲಿ: ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಣ Matheesha Pathirana) ಅವರು ಸ್ನಾಯು ಸೆಳೆತದಿಂದ ಬಳಲುತ್ತಿದ್ದು, 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗಲು ಹೆಚ್ಚಿನ ಅವಧಿಯ ಸಮಯವಿದೆ. ಹಾಗಾಗಿ ಅವರು ಚುಟುಕು ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಇದರ ಜೊತೆಗೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿಯೂ ಅವರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ, ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನೂ ಒಂದೂವರೆ ತಿಂಗಳ ಸಮಯವಿದೆ. ಹಾಗಾಗಿ ಅವರು ಆ ಅವಧಿಗೂ ಮುನ್ನ ಸಂಪೂರ್ಣ ಫಿಟ್ ಆಗಬಹುದೆಂದು ನಂಬಲಾಗಿದೆ.
ಫೆಬ್ರವರಿ 16 ರಂದು ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಎಸೆತವನ್ನು ಹಾಕುವಾಗ ಮತೀಶ ಪತಿರಣ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾದರು. ಇದರ ಬೆನ್ನಲ್ಲೆ ಅವರು ಬೌಲಿಂಗ್ ಮುಂದುವರಿಸಲು ಸಾಧ್ಯವಾಗದೆ ತಂಡದ ಫಿಸಿಯೊ ಸಹಾಯದಿಂದ ಡ್ರೆಸ್ಸಿಂಗ್ ರೂಂಗೆ ತೆರಳಿದರು. ಪತಿರಣ ಅವರ ಓವರ್ ಅನ್ನು ದಸೂನ್ ಶಾನಕ ಮುಗಿಸಿದರು.
ಶ್ರೀಲಂಕಾ ತಂಡದ ಬ್ಯಾಟಿಂಗ್ ಸಲಹೆಗಾರ ವಿಕ್ರಮ್ ರಾಥೋಡ್ ಅವರು, ಮತೀಶ ಪತಿರಣ ಅವರ ಗಾಯದ ಬಗ್ಗೆ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಮಾಹಿತಿ ನೀಡಿದರು. ಫೆಬ್ರವರಿ 19 ರಂದು ಜಿಂಬಾಬ್ವೆ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವಲ್ಲಿ ಶ್ರೀಲಂಕಾ ಕೊಲಂಬೊದಲ್ಲಿ ಆಡಲಿದೆ.
SA vs UAE: ಯುಎಇ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ!
"ಚುಟುಕು ವಿಶ್ವಕಪ್ ಟೂರ್ನಿಯ ಇನ್ನುಳಿದ ಭಾಗಕ್ಕೆ ಮತೀಶ ಪತಿರಣ ಸಂಪೂರ್ಣವಾಗಿ ಫಿಟ್ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಟೂರ್ನಿಯಿಂದ ಹೊರಬಿದ್ದರೆ, ಆ ಸುದ್ದಿ ಸದ್ಯದಲ್ಲಿಯೇ ಹೊರಬೀಳಲಿದೆ. ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ಕರೆತರಬೇಕಾ? ಅಥವಾ ಬೇಡವಾ? ಎಂಬ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ," ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ವಿಕ್ರಮ್ ರಾಥೋಡ್ ಮಾಹಿತಿ ನೀಡಿದ್ದಾರೆ.
ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲ್ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಮತೀಶ ಪತಿರಣ ಅವರ ಸ್ಥಾನವನ್ನು ತುಂಬಲು ಶ್ರೀಲಂಕಾ ತಂಡಕ್ಕೆ ಹಲವು ಆಯ್ಕೆಗಳು ಇವೆ. ಪ್ರಸ್ತುತ ಶ್ರೀಲಂಕಾ ತಂಡದಲ್ಲಿ ಪತಿರಣ ಅವರ ಸ್ಥಾನವನ್ನು ತುಂಬಲು, ಸದ್ಯ ಮಧ್ಯಮ ವೇಗಿ ನುವಾನ್ ತುಷಾರ, ಎಡಗೈ ವೇಗಿ ದಿಲ್ಷಾನ್ ಮಧುಶಣಕ ಹಾಗೂ ಬಿನುರಾ ಫೆರ್ನಾಂಡೊ ಇದ್ದಾರೆ. ಮಧುಶಣಕ ಅವರು ಇತ್ತೀಚೆಗೆ ಗಾಯಕ್ಕೆ ತುತ್ತಾಗಿ ಫಿಟ್‌ನೆಸ್ ಸಾಧಿಸಿ ಅಂಗಣಕ್ಕೆ ಮರಳಿದ್ದಾರೆ. ಶ್ರೀಲಂಕಾ ತಂಡ ಅಗತ್ಯಬಿದ್ದರೆ, ಬ್ಯಾಟ್ಸ್‌ಮನ್ ಅಥವಾ ಸ್ಪಿನ್ನರ್ ಅನ್ನು ಸೇರಿಸಿಕೊಳ್ಳಬಹುದು.
T20 World Cup 2026: ಭಾರತ ತಂಡದ ಸೂಪರ್-8ರ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ!
ಜಿಂಬಾಬ್ವೆ ವಿರುದ್ಧದ ಪಂದ್ಯದ ಬಳಿಕ ಶ್ರೀಲಂಕಾ ತಂಡ ಫೆಬ್ರವರಿ 22 ರಂದು ಪಲ್ಲೆಕೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲನೇ ಸೂಪರ್-8ರ ಪಂದ್ಯವನ್ನು ಆಡಬಹುದು. ನಂತರ ಫೆಬ್ರವರಿ 25ರಂದು ಕೊಲಂಬೊದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಫೆ 28 ರಂದು ಪಲ್ಲೆಕೆಲೆಯಲ್ಲಿ ಸೂಪರ್-8ರ ಕೊನೆಯ ಪಂದ್ಯದಲ್ಲಿ ಯಾವ ತಂಡ ಎದುರಾಗಲಿದೆ ಎಂದು ಇನ್ನೂ ಖಚಿತವಾಗಿಲ್ಲ.