ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Asian Games: ಜಿ ಕಮಲಿನಿಗೆ 75 ಲಕ್ಷ ರು ನಗದು ಬಹುಮಾನ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!

2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತ ಚಿನ್ನದ ಪದಕ ಗೆಲ್ಲಲು ನೆರವಾದ ತಮಿಳುನಾಡಿನ ಆಟಗಾರ್ತಿ ಜಿ. ಕಮಲಿನಿಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ 75 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತ, ಶ್ರೀಲಂಕಾವನ್ನು 147 ರನ್‌ಗಳಿಂದ ಮಣಿಸಿ ಚಿನ್ನದ ಪದಕ ಗೆದ್ದಿತು. ಭಾರತ 20 ಓವರ್‌ಗಳಲ್ಲಿ 216/3 ರನ್ ಗಳಿಸಿದರೆ, ಶ್ರೀಲಂಕಾ 69 ರನ್‌ಗಳಿಗೆ ಆಲೌಟ್ ಆಯಿತು.

ಜಿ ಕಮಲಿನಿಗೆ 75 ಲಕ್ಷ ರು ನಗದು ಬಹುಮಾನ ಘೋಷಿಸಿದ ಸಿಎಂ ವಿಜಯ್.

ಚೆನ್ನೈ: ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ(Asia Games 2026) ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಆಟಗಾರ್ತಿ ಜಿ ಕಮಲಿನಿಗೆ (G Kamalini) ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ (CM Vijay) 75 ಲಕ್ಷ ರು ನಗದು ಬಹುಮಾನ ಘೋಷಿಸಿದ್ದಾರೆ. ಮಹಿಳಾ ಟಿ20 ಕ್ರಿಕೆಟ್ ಫೈನಲ್‌ನಲ್ಲಿ ಭಾರತ ತಂಡ, ಶ್ರೀಲಂಕಾವನ್ನು 147 ರನ್‌ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಸ್ಮೃತಿ ಮಂಧಾನಾ, ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರ ಬ್ಯಾಟಿಂಗ್ ಪ್ರದರ್ಶನದ ಬಳಿಕ ಬೌಲರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು.

ಈ ಗೆಲುವಿನ ಮೂಲಕ ಭಾರತ 2026ರ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಐತಿಹಾಸಿಕ ಸಾಧನೆಗಾಗಿ ತಮಿಳುನಾಡು ಸಿಎಂ ವಿಜಯ್ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ವಿಶೇಷವಾಗಿ ಮದುರೈ ಮೂಲದ ಯುವ ಕ್ರಿಕೆಟರ್ ಜಿ ಕಮಲಿನಿಯ ಸಾಧನೆಯನ್ನು ಮುಖ್ಯಮಂತ್ರಿ ಗುಣಗಾನ ಮಾಡಿದ್ದಾರೆ. ಕಮಲಿನಿಯ ಸಾಧನೆಯನ್ನು ಗುರುತಿಸಿ ತಮಿಳುನಾಡು ಸರ್ಕಾರದ ಪರವಾಗಿ 75 ಲಕ್ಷ ರು ನಗದು ಬಹುಮಾನ ನೀಡಲಾಗುವುದು ಎಂದು ವಿಜಯ್ ಘೋಷಿಸಿದ್ದಾರೆ.

ವೈಭವ್‌ ಸೂರ್ಯವಂಶಿಗೆ ಆಡದೇ ಇರುವುದಕ್ಕೆ ಸ್ವಲ್ಪ ಬೇಸರವಾಯಿತೆಂದು ಜಪಾನ್‌ ನಾಯಕ!

“ಜಪಾನ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಮಹಿಳಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ. ಈ ತಂಡದ ಸದಸ್ಯೆಯಾಗಿರುವ ತಮಿಳುನಾಡಿನ ಮದುರೈ ಮೂಲದ ಕ್ರೀಡಾಪಟು ಕಮಲಿನಿಗೂ ನನ್ನ ಅಭಿನಂದನೆಗಳು,” ಎಂದು ಮುಖ್ಯಮಂತ್ರಿ ವಿಜಯ್ ಬರೆದಿದ್ದಾರೆ.

“ಕ್ರಿಕೆಟರ್ ಕಮಲಿನಿಯ ಅತ್ಯುತ್ತಮ ಸಾಧನೆಯನ್ನು ಗೌರವಿಸಿ, ತಮಿಳುನಾಡು ಸರ್ಕಾರದ ಪರವಾಗಿ 75 ಲಕ್ಷಗಳ ಪ್ರತಿಷ್ಠಿತ ನಗದು ಬಹುಮಾನವನ್ನು ನೀಡಲಾಗುವುದು,” ಎಂದು ವಿಜಯ್ ತಿಳಿಸಿದ್ದಾರೆ.



“ಕಮಲಿನಿಯಂತಹ ಎಲ್ಲ ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮಿಳುನಾಡು ಸರ್ಕಾರ ಸದಾ ದೃಢ ಬೆಂಬಲವಾಗಿ ನಿಲ್ಲಲಿದೆ. ಕಮಲಿನಿಯ ಈ ಗೆಲುವು ತಮಿಳುನಾಡಿನ ಯುವಕರು ಮತ್ತು ಮಹಿಳೆಯರಿಗೆ ಹೊಸ ಸ್ಫೂರ್ತಿ ಹಾಗೂ ಆತ್ಮವಿಶ್ವಾಸವನ್ನು ನೀಡಲಿದೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ,” ಎಂದು ವಿಜಯ್ ಬರೆದಿದ್ದಾರೆ.