ಹರಾರೆ: ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ (IND vs ZIM) ಅದ್ಭುತವಾಗಿ ಬೌಲ್ ಮಾಡಿ ಎರಡು ವಿಕೆಟ್ ಕಿತ್ತ ಮಯಾಂಕ್ ಯಾದವ್ (Mayank Yadav) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ಅವರು, ಎರಡು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್‌ಬ್ಯಾಕ ಮಾಡಿದ ಹಾದಿ ಹೇಗಿತ್ತೆಂದು ವಿವರಿಸಿದ್ದಾರೆ. ಗಾಯದಿಂದಾಗಿ ಎರಡು ವರ್ಷಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದ ತಾನು, ರಾಷ್ಟ್ರೀಯ ತಂಡಕ್ಕೆ ಮರಳಬೇಕೆಂದು ನನಗೆ ನಾನೇ ಪ್ರೇರಣೆ ಪಡೆಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲ್ ಮಾಡಿದ ಮಾಯಾಂಕ್ ಯಾದವ್ ಅವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 18 ರನ್ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದರು. ಆ ಮೂಲಕ ಜಿಂಬಾಬ್ವೆ ತಂಡವನ್ನು ಕೇವಲ 125 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಅವರು ಭಾರತಕ್ಕೆ ನೆರವು ನೀಡಿದ್ದರು. ಅವರು ಪಂದ್ಯದ ಮೊದಲನೇ ಎಸೆತದಲ್ಲಿಯೇ ಅವರು ಬ್ರಿಯಾನ್ ಬೆನೆಟ್ ಅವರನ್ನು ಔಟ್ ಮಾಡಿದ್ದರು. ಇದಾದ ಬಳಿಕ ಡಿಯಾನ್ ಮಾಯರ್ಸ್ ಅವರನ್ನು ಕಿತ್ತಿದ್ದರು.
ಭಾರತ ತಂಡದ ಪರ ಎರಡು ವರ್ಷಗಳ ಹಿಂದೆ ಆಡಿದ್ದದ ಮಯಾಂಕ್ ಯಾದವ್ ಅವರು ಇದೀಗ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಪಂದ್ಯವನ್ನು ಆಡಿದ್ದಾರೆ. ಸತತ ಗಾಯಗಳ ಕಾರಣ ಅವರು ಕಳೆದ ಎರಡು ವರ್ಷಗಳ ಕಾಲ ಕ್ರಿಕೆಟ್ ವೃತ್ತಿ ಜೀವನದಿಂದ ಹೊರಗೆ ಉಳಿದಿದ್ದರು. 2025ರ ಐಪಿಎಲ್ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ ಬಳಿಕ ಅವರು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಗುಳಿದಿದ್ದರು.
IND vs ZIM: ವೈಭವ್ ಚೊಚ್ಚಲ ಅರ್ಧಶತಕ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಜಯ!
23 ವರ್ಷದ ವೇಗದ ಬೌಲರ್ ಮಯಾಂಕ್ ಯಾದವ್, ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆದಿದ್ದ ಭಾರತ 'ಎ' ತಂಡದ ಅಭ್ಯಾಸ ಪಂದ್ಯಗಳ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಬಳಿಕ 2026ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ಪರ ನಾಲ್ಕು ಪಂದ್ಯಗಳನ್ನು ಆಡಿದರೂ, ಆ ಅವಧಿಯಲ್ಲಿ ಅವರಿಗೆ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 'ಪಂದ್ಯಶ್ರೇಷ್ಠ' ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮಯಾಂಕ್, ಚಿಕ್ಕ ವಯಸ್ಸಿನಲ್ಲೇ ದೀರ್ಘಕಾಲ ಗಾಯದ ಕಾರಣದಿಂದ ಮೈದಾನದಿಂದ ದೂರ ಉಳಿದ ಅನುಭವ ಮತ್ತು ಅದರ ಮಾನಸಿಕ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಗಾಯದಿಂದ ಚೇತರಿಸಿಕೊಂಡು ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ದೊಡ್ಡ ಪರೀಕ್ಷೆಯಾಗಿತ್ತು ಎಂದು ಅವರು ಹೇಳಿದರು.
IND vs ZIM: 15ನೇ ವಯಸ್ಸಿನ ಚೊಚ್ಚಲ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!
ಎರಡು ವರ್ಷದ ವಿರಾಮ ತುಂಬಾ ಕಠಿಣವಾಗಿತ್ತು: ಮಯಾಂಕ್ ಯಾದವ್
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಯಾಂಕ್ ಯಾದವ್, ಗಾಯದಿಂದಾಗಿ ಎರಡು ವರ್ಷ ಕ್ರಿಕೆಟ್‌ನಿಂದ ದೂರ ಉಳಿದ ಅವಧಿ ತಮ್ಮ ವೃತ್ತಿ ಜೀವನದ ಅತ್ಯಂತ ಸವಾಲಿನ ಸಮಯವಾಗಿತ್ತು ಎಂದು ಹೇಳಿದರು.
"ನನ್ನನ್ನು ನಾನು ಪ್ರೇರೇಪಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ವಿಶೇಷವಾಗಿ ಈ ಎರಡು ವರ್ಷದ ವಿರಾಮ ನನ್ನ ವ್ಯಕ್ತಿತ್ವಕ್ಕೂ ದೊಡ್ಡ ಸವಾಲಾಗಿತ್ತು. ಆಗ ನನ್ನ ವಯಸ್ಸು ಕೇವಲ 22 ಅಥವಾ 23 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾದದ್ದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತು," ಎಂದು ಮಯಾಂಕ್ ಹೇಳಿದರು.
"ಆದರೆ ದೇಶಕ್ಕಾಗಿ ಆಡಬೇಕು ಎಂಬ ಕನಸು ಪ್ರತಿಯೊಬ್ಬ ಆಟಗಾರನಿಗೂ ಬಾಲ್ಯದಿಂದಲೇ ಇರುತ್ತದೆ. ಅದೇ ಕನಸು ಮತ್ತು ಪ್ರೇರಣೆಯೇ ನನಗೆ ಮತ್ತೆ ಭಾರತ ತಂಡಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ದೃಢಸಂಕಲ್ಪವನ್ನು ನೀಡಿತು. ಅದೇ ನನ್ನನ್ನು ಮುಂದೆ ಸಾಗುವಂತೆ ಮಾಡಿತು," ಎಂದು ಅವರು ತಿಳಿಸಿದ್ದಾರೆ.
IND vs ZIM: ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಶೋಕ್ ಶರ್ಮಾ ಯಾರು?
ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಯಾಂಕ್ ಯಾದವ್
"ಪಂದ್ಯಕ್ಕೂ ಮುನ್ನ ಅವರೊಂದಿಗೆ ಹೆಚ್ಚು ಮಾತನಾಡಿರಲಿಲ್ಲ. ಆದರೆ ನಾಯಕತ್ವ ವಹಿಸಿದಾಗ ಅವರು ಬೌಲರ್‌ಗಳ ಮೇಲೆ ಅಪಾರ ವಿಶ್ವಾಸ ತೋರಿದರು. ನಾನು ಯಾವ ರೀತಿಯ ಬೌಲ್ ಮಾಡಲು ಬಯಸಿದ್ದೇನೋ ಅದಕ್ಕೆ ಅವರು ಸಂಪೂರ್ಣ ಬೆಂಬಲ ನೀಡಿದರು. ಅವರು ಕೆಲವು ಸಲಹೆಗಳನ್ನು ನೀಡಿದಾಗಲೂ ಅವುಗಳನ್ನು ಆತ್ಮವಿಶ್ವಾಸದಿಂದ ಅನುಸರಿಸಲು ಸಾಧ್ಯವಾಯಿತು. ಅದು ಉತ್ತಮ ಆಯ್ಕೆಯಾಯಿತು," ಎಂದು ಮಯಾಂಕ್ ಹೇಳಿದರು.
"ಅವರ ನಾಯಕತ್ವದಲ್ಲಿ ಆಡಿದಾಗ ಯಾವುದೇ ಒತ್ತಡವಿಲ್ಲದೆ ಬಹಳ ಮುಕ್ತವಾಗಿ ಆಡಲು ಸಾಧ್ಯವಾಯಿತು. ಅವರ ನಾಯಕತ್ವದಲ್ಲಿ ನಾನು ಮೊದಲ ಬಾರಿ ಆಡುತ್ತಿದ್ದೇನೆ. ಇದುವರೆಗೆ ಟಿವಿಯಲ್ಲಿ ಅಥವಾ ಇತರ ತಂಡಗಳಲ್ಲಿ ಮಾತ್ರ ಅವರ ನಾಯಕತ್ವವನ್ನು ನೋಡಿದ್ದೆ. ಈಗ ಅವರ ನಾಯಕತ್ವದಲ್ಲಿ ಆಡಿದ ಅನುಭವ ತುಂಬಾ ಸಂತೋಷ ನೀಡಿದೆ," ಎಂದು ಮಯಾಂಕ್ ಹೇಳಿದರು.