ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

U-19 World Cup 2026: ಅರ್ಧಶತಕ ಬಾರಿಸಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಬಾಂಗ್ಲಾದೇಶ ವಿರುದ್ಧ ಅಂಡರ್‌-19 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ, ಯುವ ಒಡಿಐ ಕ್ರಿಕೆಟ್‌ನಲ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಅವರು 72 ರನ್‌ಗಳನ್ನು ಕಲೆ ಹಾಕಿದ ಬಳಿಕ ವಿಕೆಟ್‌ ಒಪ್ಪಿಸಿದರು.

ವಿರಾಟ್‌ ಕೊಹ್ಲಿ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ.

ಬುಲವಾಯೊ: ಬಾಂಗ್ಲಾದೇಶ ವಿರುದ್ಧ 2026ರ ಅಂಡರ್‌-19 ವಿಶ್ವಕಪ್‌ ಟೂರ್ನಿಯ (U-19 World Cup 2026) ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Suryavanshi) ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಯುವ ಏಕದಿನ ಕ್ರಿಕೆಟ್‌ನಲ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟ್‌ ಮಾಡಿದ ವೈಭವ್‌, 67 ಎಸೆತಗಳಲ್ಲಿ 72 ರನ್‌ಗಳನ್ನು ಬಾರಿಸಿದರು. ಅಂತಿಮವಾಗಿ ಭಾರತ ಕಿರಿಯರ ತಂಡ 48.4 ಓವರ್‌ಗಳಿಗೆ 238 ರನ್‌ಗಳಿಗೆ ಆಲ್‌ಔಟ್‌ ಆಯಿತು.

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ವೈಭವ್‌ ಸೂರ್ಯವಂಶಿ ಯಾವುದೇ ಹಂತದ ಕ್ರಿಕೆಟ್‌ ಆಡಿದರೂ ರನ್‌ ಹೊಳೆ ಹರಿಸುತ್ತಿದ್ದಾರೆ. ಅದೇ ಬ್ಯಾಟಿಂಗ್‌ ಲಯವನ್ನು ಯುವ ಒಡಿಐ ಕ್ರಿಕೆಟ್‌ನಲ್ಲಿಯೂ ಮುಂದುವರಿಸಿದ್ದಾರೆ. ಯೂಥ್‌ ಒಡಿಐ ಕ್ರಿಕೆಟ್‌ನಲ್ಲಿ ಆಡಿದ 20 ಪಂದ್ಯಗಳಿಂದ 52ರ ಸರಾಸರಿ ಮತ್ತು 157.68ರ ಸ್ಟ್ರೈಕ್‌ ರೇಟ್‌ನಲ್ಲಿ ಮೂರು ಶತಕಗಳು ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದಾರೆ.

Under 19 World Cup: ಬಾಂಗ್ಲಾ ನಾಯಕನ ಜೊತೆ ಹ್ಯಾಂಡ್‌ಶೇಕ್‌ ಮಾಡಲು ನಿರಾಕರಿಸಿದ ಆಯುಷ್‌ ಮ್ಹಾತ್ರೆ!

ಆದರೆ, ಪ್ರಸ್ತುತ ನಡೆಯುತ್ತಿರುವ ಅಂಡರ್‌-19 ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವೈಭವ್‌ ಕೇವಲ ಎರಡು ರನ್‌ಗೆ ವಿಕೆಟ್‌ ಒಪ್ಪಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಮುರಿಯಲು ಸೂರ್ಯವಂಶಿಗೆ ಕೇವಲ 6 ರನ್‌ ಅಗತ್ಯವಿತ್ತು. ಆದರೆ, ಅವರು ಈ ಪಂದ್ಯದಲ್ಲಿ 72 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಯೂಥ್‌ ಒಡಿಐ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದರು.

ವೈಭವ್‌ ಸೂರ್ಯವಂಶಿ ಅವರು ಸದ್ಯ ಯೂಥ್‌ ಒಡಿಐ ಕ್ರಿಕೆಟ್‌ನಲ್ಲಿ 1047 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಯುವ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ವಿಜಯ್‌ ಜೋಲ್‌ 1404 ರನ್‌ಗಳಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.



ಯೂಥ್‌ ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌

ವಿಜಯ್‌ ಜೋಲ್‌: 1404 ರನ್‌

ಯಶಸ್ವಿ ಜೈಸ್ವಾಲ್‌: 1386 ರನ್‌

ತನ್ಮಯ್‌ ಶ್ರೀವಾತ್ಸವ್‌: 1316 ರನ್‌

ಶುಭಮನ್‌ ಗಿಲ್‌/ಉನ್ಮುಕ್ತ್‌ ಚಾಂದ್‌: 1149 ರನ್‌

ಸರ್ಫರಾಝ್‌ ಖಾನ್‌: 1080 ರನ್‌

ವೈಭವ್ ಸೂರ್ಯವಂಶಿ: 1047 ರನ್‌

ವಿರಾಟ್‌ ಕೊಹ್ಲಿ: 978 ರನ್‌ಗಳು

3ನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ; ಆಯುಷ್ ಬದೋನಿ ಪದಾರ್ಪಣೆ ನಿರೀಕ್ಷೆ

ಶತಕ ವಂಚಿತನಾದ ವೈಭವ್‌ ಸೂರ್ಯವಂಶಿ

ಬಾಂಗ್ಲಾದೇಶ ಬೌಲರ್‌ಗಳ ಎದುರು ಇತರೆ ಬ್ಯಾಟ್ಸ್‌ಮನ್‌ಗಳಿಗಿಂತ ವೈಭವ್‌ ಸೂರ್ಯವಂಶಿ ವಿಭಿನ್ನವಾಗಿ ಬ್ಯಾಟ್‌ ಮಾಡಿದರು. ನಾಯಕ ಆಯುಷ್‌ ಮ್ಹಾತ್ರೆ ಅವರ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ವೈಭವ್‌, ಬಾಂಗ್ಲಾ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 67 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಆರು ಬೌಂಡರಿಗಳೊಂದಿಗೆ 72 ರನ್‌ಗಳನ್ನು ಬಾರಿಸಿದರು.