ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ 8 ವರ್ಷಗಳ ಹಿಂದೆ ಭಾರಿ ವಿವಾದಕ್ಕೆ ಕಾರಣವಾಗಿದ್ದ ಚೆಂಡು ವಿರೂಪ ಪ್ರಕರಣ (Ball-tampering) ಕುರಿತು ಮಾಜಿ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಭಾಗಿಯಾಗಿರಲಿಲ್ಲ, ಆಸ್ಟ್ರೇಲಿಯಾ ತಂಡದ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೂ ಈ ವಿಚಾರ ತಿಳಿದಿತ್ತು ಎಂದು ಖವಾಜಾ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಮತ್ತೆ ಸಂಚಲನ ಮೂಡಿಸಿದೆ.
2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೇಪ್ಟೌನ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಚೆಂಡಿನ ಸ್ವರೂಪವನ್ನು ಕೃತಕವಾಗಿ ಬದಲಾಯಿಸಲು ಸ್ಯಾಂಡ್ಪೇಪರ್ ಬಳಸಿದ್ದು ಬಹಿರಂಗವಾಗಿತ್ತು. ಈ ಪ್ರಕರಣವನ್ನು 'ಸ್ಯಾಂಡ್ಪೇಪರ್ಗೇಟ್' ಎಂದು ಕರೆಯಲಾಗುತ್ತದೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದರು.
ಆದರೆ ಇದೀಗ ತಮ್ಮ ಮುಂಬರುವ ಆತ್ಮಕಥನ *Sabr*ನಲ್ಲಿ ಈ ಪ್ರಕರಣದ ಕುರಿತು ಹೊಸ ವಿಚಾರಗಳನ್ನು ಬಹಿರಂಗಪಡಿಸಿರುವ ಖವಾಜ, ತಂಡದ ಬಹುತೇಕ ಎಲ್ಲರಿಗೂ ಚೆಂಡು ವಿರೂಪಗೊಳಿಸುವ ವಿಚಾರ ತಿಳಿದಿತ್ತು ಎಂದು ಹೇಳಿದ್ದಾರೆ.
Mohammed shami Test Retirement: ಟೆಸ್ಟ್ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಿ ಶಾಕ್ ನೀಡಿದ ಮೊಹಮ್ಮದ್ ಶಮಿ!
"ಇದು ನಮ್ಮೆಲ್ಲರ ವಿಚಾರವಾಗಿತ್ತು. ಕೇವಲ ಬ್ಯಾಟರ್ಗಳು, ಬೌಲರ್ಗಳು ಅಥವಾ ಸಹಾಯಕ ಸಿಬ್ಬಂದಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಮ್ಮೆಲ್ಲರಿಗೂ ಇದರ ಬಗ್ಗೆ ತಿಳಿದಿತ್ತು," ಎಂದು ಖವಾಜ ಬರೆದುಕೊಂಡಿದ್ದಾರೆ.
ಪೋರ್ಟ್ ಎಲಿಜಬೆತ್ ಪಂದ್ಯದಲ್ಲೂ ಸ್ಯಾಂಡ್ಪೇಪರ್ ಬಳಕೆ?
ಖವಾಜಾ ಅವರ ಹೇಳಿಕೆಯ ಪ್ರಕಾರ, 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೇಪ್ಟೌನ್ ಟೆಸ್ಟ್ಗೂ ಮುನ್ನ ನಡೆದ ಪೋರ್ಟ್ ಎಲಿಜಬೆತ್ ಟೆಸ್ಟ್ನಲ್ಲೂ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್ಪೇಪರ್ ಬಳಸಲಾಗಿತ್ತು. ಆ ಪಂದ್ಯದಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡಿನ ಸ್ವರೂಪವನ್ನು ಬದಲಾಯಿಸುವ ಕುರಿತು ಚರ್ಚೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ಕೇಪ್ಟೌನ್ ಟೆಸ್ಟ್ನಲ್ಲಿ ಬ್ಯಾಂಕ್ರಾಫ್ಟ್ ಸ್ಯಾಂಡ್ಪೇಪರ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ ಪ್ರಕರಣ ಜಗತ್ತಿನ ಗಮನ ಸೆಳೆದಿತ್ತು.
ಈ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ತನಿಖೆಯಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರಿಗೆ ಮಾತ್ರ ಈ ಯೋಜನೆಯ ಬಗ್ಗೆ ಮೊದಲೇ ತಿಳಿದಿತ್ತು ಎಂದು ಹೇಳಲಾಗಿತ್ತು. ಇದೀಗ ಖವಾಜಾ ಅವರ ಹೇಳಿಕೆ ಆ ತನಿಖೆಯ ನಿರ್ಣಯವನ್ನೇ ಪ್ರಶ್ನಿಸುವಂತಾಗಿದೆ.
ʻಇನ್ನೂ 30 ರಿಂದ 40 ವಿಕೆಟ್ ಪಡೆಯಬಹುದಿತ್ತುʼ: ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!
ಸ್ಮಿತ್, ವಾರ್ನರ್ ಮತ್ತು ಬ್ಯಾಂಕ್ರಾಫ್ಟ್ ಪರ ಖವಾಜಾ ಬ್ಯಾಟಿಂಗ್
ಈ ಪ್ರಕರಣದ ಬಳಿಕ ಮೂವರು ಆಟಗಾರರು ಮಾತ್ರ ಶಿಕ್ಷೆ ಅನುಭವಿಸಿದ್ದು ಸರಿಯಲ್ಲ ಎಂಬುದು ಖವಾಜಾ ಅವರ ಅಭಿಪ್ರಾಯವಾಗಿದೆ.
"ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ನಾನು ಆಟಗಾರರೊಂದಿಗೆ ಮಾತನಾಡಿದ್ದೆ. ಇದನ್ನು ತಂಡವಾಗಿ ಸ್ವೀಕರಿಸಬೇಕು ಎಂದು ಹೇಳಿದ್ದೆ. ನಾವು ಇದನ್ನು ತಂಡವಾಗಿ ಮಾಡಿದ್ದೇವೆ. ನಮಗೆ ಏನಾಗುತ್ತಿದೆ ಎಂಬುದು ತಿಳಿದಿತ್ತು. ಹೀಗಾಗಿ ಜವಾಬ್ದಾರಿಯನ್ನೂ ತಂಡವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಅಂತಿಮವಾಗಿ ಆ ಮೂವರು ಮಾತ್ರ ಎಲ್ಲ ಟೀಕೆ ಮತ್ತು ಶಿಕ್ಷೆಗಳನ್ನು ಎದುರಿಸುವಂತಾಯಿತು," ಎಂದು ಖವಾಜಾ ಹೇಳಿದ್ದಾರೆ.
ವಿಶೇಷವಾಗಿ ಡೇವಿಡ್ ವಾರ್ನರ್ ಕಳೆದ ಎಂಟು ವರ್ಷಗಳಿಂದ ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಟೀಕೆಗಳ ನಡುವೆಯೂ ಅವರು ಮೌನವಾಗಿರುವುದು ದೊಡ್ಡ ಸಂಗತಿ ಎಂದು ಖವಾಜಾ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ಬಗ್ಗೆ ಇಷ್ಟು ವರ್ಷಗಳ ಕಾಲ ಮಾತನಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಸತ್ಯವನ್ನು ಬಹಿರಂಗಪಡಿಸುವುದು ಸರಿಯಾದ ನಿರ್ಧಾರ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.
Syed Mushtaq Ali Trophy: 15ನೇ ವಯಸ್ಸಿನಲ್ಲಿ ಬಿಹಾರ ತಂಡಕ್ಕೆ ನಾಯಕನಾದ ವೈಭವ್ ಸೂರ್ಯವಂಶಿ!
ಕ್ರಿಕೆಟ್ ಆಸ್ಟ್ರೇಲಿಯಾದಿಂದ ಪ್ರತಿಕ್ರಿಯೆ
ಖವಾಜಾ ಅವರ ಹೊಸ ಆರೋಪಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದ್ದು, 2018ರಲ್ಲಿ ನಡೆಸಿದ ತನಿಖೆಯ ನಿರ್ಣಯವನ್ನು ಸಮರ್ಥಿಸಿಕೊಂಡಿದೆ. "ಇದುವರೆಗೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸಲ್ಲಿಸಲಾದ ಎಲ್ಲಾ ಸಂಬಂಧಿತ ಮಾಹಿತಿಯನ್ನು ಸೂಕ್ತವಾಗಿ ಪರಿಶೀಲಿಸಲಾಗಿದೆ. ನಮ್ಮ ತನಿಖಾ ಪ್ರಕ್ರಿಯೆಯ ನಿರ್ಣಯಗಳ ಬಗ್ಗೆ ನಮಗೆ ಇನ್ನೂ ವಿಶ್ವಾಸವಿದೆ," ಎಂದು ಮಂಡಳಿ ಹೇಳಿಕೆ ನೀಡಿದೆ.