ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಗಾಗಿ ಬಿಸಿಸಿಐ ಭಾರತ ಅಂಡರ್-19 ತಂಡವನ್ನು (Indian U-19 Squad) ಪ್ರಕಟಿಸಿದೆ. ಭಾರತದ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ಮಾಜಿ ಭಾರತ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈಗಾಗಲೇ 15ನೇ ವಯಸ್ಸಿನಲ್ಲೇ ಇಂಗ್ಲೆಂಡ್ ವಿರುದ್ಧ ಭಾರತದ ಪರ ಹಿರಿಯರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ತಂಡದಲ್ಲಿ ಸ್ಥಾನ ಪಡೆದಿಲ್ಲ.
ಜೂನಿಯರ್ ಪುರುಷರ ಆಯ್ಕೆ ಸಮಿತಿ, ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರು 50 ಓವರ್‌ಗಳ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಗಳು ಸೆಪ್ಟೆಂಬರ್ 18, 21 ಮತ್ತು 23ರಂದು ನಡೆಯಲಿವೆ. ಇದರ ಜೊತೆಗೆ ಎರಡು ರೆಡ್-ಬಾಲ್ ಬಹುದಿನಗಳ ಪಂದ್ಯಗಳೂ ನಡೆಯಲಿವೆ. ಮೊದಲ ಪಂದ್ಯ ಸೆಪ್ಟೆಂಬರ್ 27ರಿಂದ 30ರವರೆಗೆ ರಾಜ್‌ಕೋಟ್‌ನಲ್ಲಿ, ಎರಡನೇ ಪಂದ್ಯ ಅಕ್ಟೋಬರ್ 5ರಿಂದ 8ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ‘ಬಿ’ ಮೈದಾನದಲ್ಲಿ ನಡೆಯಲಿದೆ.
Sachin or Kohli? ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನನ್ನು ಹೆಸರಿಸಿದ ಆರ್ ಅಶ್ವಿನ್!
ವೈಭವ್ ಸೂರ್ಯವಂಶಿ ಏಕೆ ತಂಡದಲ್ಲಿಲ್ಲ?
ವೈಭವ್ ಸೂರ್ಯವಂಶಿ ಅವರನ್ನು ತಂಡದಿಂದ ಕೈಬಿಡಲು ಬಿಸಿಸಿಐ ನಿಯಮವೇ ಕಾರಣವಾಗಿದೆ. 2016ರಲ್ಲಿ ಬಿಸಿಸಿಐ ಜಾರಿಗೆ ತಂದ ನಿಯಮದ ಪ್ರಕಾರ, ಒಬ್ಬ ಆಟಗಾರ ಒಂದಕ್ಕಿಂತ ಹೆಚ್ಚು ಅಂಡರ್-19 ವಿಶ್ವಕಪ್‌ಗಳಲ್ಲಿ ಆಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ವೈಭವ್‌ಗೆ ಅವಕಾಶ ನೀಡಿಲ್ಲ ಎನ್‌ಡಿಟಿವಿ ವರದಿ ಮಾಡಿದೆ.
ಆಟಗಾರ ಇನ್ನೂ ಅಂಡರ್-19 ವಯೋಮಿತಿಯಲ್ಲಿದ್ದರೂ ಈ ನಿಯಮ ಅನ್ವಯಿಸುತ್ತದೆ. ಸೂರ್ಯವಂಶಿ ಈಗಾಗಲೇ 2026ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಕಾರಣ, ಮುಂದಿನ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಅವರು ಅರ್ಹರಾಗುವುದಿಲ್ಲ. ಹೀಗಾಗಿ ಪ್ರಸಕ್ತ ಅಂಡರ್-19 ಯೋಜನೆಯಲ್ಲಿಯೂ ಅವರನ್ನು ಉಳಿಸಿಕೊಳ್ಳಲಾಗಿಲ್ಲ.
ವಾಷಿಂಗ್ಟನ್ ಸುಂದರ್‌ಗೂ ಈ ನಿಯಮ ತಟ್ಟಿತ್ತು
2016ರ ಈ ನಿಯಮದಿಂದ ಈ ಹಿಂದೆ ಕೂಡ ಪ್ರಮುಖ ಆಟಗಾರರು ಪರಿಣಾಮಕ್ಕೊಳಗಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಇದರ ಮೊದಲ ಪ್ರಮುಖ ಬಲಿಪಶುವಾಗಿದ್ದರು. 2018ರ ಅಂಡರ್-19 ವಿಶ್ವಕಪ್ ಟೂರ್ನಿಯ ವೇಳೆ ವಯೋಮಿತಿಗೆ ಅರ್ಹರಾಗಿದ್ದರೂ, ಅವರು ಟೂರ್ನಿಯಲ್ಲಿ ಆಡಲು ಸಾಧ್ಯವಾಗಲಿಲ್ಲ.
ಈ ನಿಯಮ ಜಾರಿಗೆ ಬರುವ ಮೊದಲು ಸರ್ಫರಾಝ್ ಖಾನ್, ಸಂದೀಪ್ ಶರ್ಮಾ ಮತ್ತು ವಿಜಯ್ ಜೋಲ್ ಅವರು ಒಂದಕ್ಕಿಂತ ಹೆಚ್ಚು ಅಂಡರ್-19 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದರು. ಇಂತಹ ಪರಿಸ್ಥಿತಿ ಮುಂದುವರಿಯದಂತೆ ಬಿಸಿಸಿಐ ಈ ಮಿತಿಯನ್ನು ಜಾರಿಗೆ ತಂದಿತು. ಇದೀಗ 2026ರ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಕಾರಣ ಸೂರ್ಯವಂಶಿ ಕೂಡ ಇದೇ ನಿಯಮಕ್ಕೆ ಒಳಗಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಪ್ರಿನ್ಸ್ ಯಾದವ್ ಸಂಪೂರ್ಣ ಫಿಟ್; ಹಾರ್ದಿಕ್, ಬುಮ್ರಾ ಬಗ್ಗೆ ಅಪ್‌ಡೇಟ್!
ಭಾರತ ಅಂಡರ್-19 ತಂಡದ ನಾಯಕ ಯಾರು?
ಉತ್ತರಾಖಂಡದ ಬ್ಯಾಟರ್ ಲಕ್ಷ್ಯ ರಾಯ್‌ಚಾಂದನಿ ಮೂರು 50 ಓವರ್‌ಗಳ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಮಧ್ಯಪ್ರದೇಶದ ಬ್ಯಾಟರ್ ಯಶವರ್ಧನ್ ಚೌಹಾಣ್ ಉಪನಾಯಕರಾಗಿರುತ್ತಾರೆ. ರೆಡ್-ಬಾಲ್ ಪಂದ್ಯಗಳ ಸಂದರ್ಭದಲ್ಲಿ ಇಬ್ಬರ ಜವಾಬ್ದಾರಿಗಳು ಬದಲಾಗಲಿವೆ. ಚೌಹಾಣ್ ನಾಯಕತ್ವ ವಹಿಸಿದರೆ, ರೈಚಂದಾನಿ ಉಪನಾಯಕರಾಗಲಿದ್ದಾರೆ.
ಸೆಹ್ವಾಗ್, ದ್ರಾವಿಡ್ ಪುತ್ರರಿಗೆ 50 ಓವರ್ ತಂಡದಲ್ಲಿ ಸ್ಥಾನ
ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಲೆಗ್-ಸ್ಪಿನ್ ಆಲ್‌ರೌಂಡರ್ ಆಗಿದ್ದು, ಅನ್ವಯ್ ದ್ರಾವಿಡ್ ವಿಕೆಟ್‌ಕೀಪರ್-ಬ್ಯಾಟರ್ ಆಗಿದ್ದಾರೆ. ಇಬ್ಬರೂ 50 ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಎರಡು ರೆಡ್-ಬಾಲ್ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆರ್ಯವೀರ್ 2026ರ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಪರ ಇದುವರೆಗೆ ಕೇವಲ ಎರಡು ಪಂದ್ಯಗಳಲ್ಲಿ ಆಡಿದ್ದಾರೆ.
ಅನ್ವಯ್ ದ್ರಾವಿಡ್ ಜುಲೈನಲ್ಲಿ ಭಾರತ ಅಂಡರ್-19 ತಂಡದ ಶ್ರೀಲಂಕಾ ಪ್ರವಾಸದ ವೇಳೆ ಎರಡು 50 ಓವರ್‌ಗಳ ಪಂದ್ಯಗಳಲ್ಲಿ ಒಟ್ಟು 101 ರನ್ ಗಳಿಸಿದ್ದರು. ಆ ಸರಣಿಯನ್ನು ಭಾರತ 2-1ರಿಂದ ಕಳೆದುಕೊಂಡಿತ್ತು. ಆದರೆ ರೆಡ್-ಬಾಲ್ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದಿತ್ತು. ಮನಲ್ ಚೌಹಾಣ್ ಮತ್ತು ಚಿಗುರುಪತಿ ವೆಂಕಟ ಅವರು 50 ಓವರ್‌ಗಳ ತಂಡಕ್ಕೆ ಹೊಸ ಸೇರ್ಪಡೆಗಳಾಗಿದ್ದಾರೆ. ಮತ್ತೊಂದೆಡೆ, ಸಾಗರ್ ವಿರ್ಕ್, ಅನ್ಮೋಲ್‌ಜೀತ್ ಸಿಂಗ್ ಮತ್ತು ಇಶಾನ್ ಸೂದ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿಲ್ಲ.