ಚಂಡೀಗಢ: ವೈಭವ್ ಸೂರ್ಯವಂಶಿ (Vaibhav Sooryavanshi) ಸ್ಪೋಟಕ ಬ್ಯಾಟಿಂಗ್ ಹಾಗೂ ಜೋಫ್ರಾ ಆರ್ಚರ್ (Jofra Archer) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ರಿಯಾನ್ ಪರಾಗ್ ನಾಯಕತ್ವದ ಆರ್‌ಆರ್, ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು ಹಾಗೂ ಮೇ 27 ರಂದು ಇದೇ ಸ್ಥಳದಲ್ಲಿ ಮೊದಲನೇ ಕ್ವಾಲಿಫೈಯರ್ ಸೋತಿದ್ದ ಗುಜರಾತ್ ಟೈಟನ್ಸ್ ಎದುರು ಫೈನಲ್‌ಗೆ ಪ್ರವೇಶ ಮಾಡಲು ಕಾದಾಟ ನಡೆಸಲಿದೆ.
ಬುಧವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್ ನೀಡಿದ್ದ 244 ರನ್‌ಗಳ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ, ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್‌ನೊಂದಿಗೆ ತಲುಪಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇದಕ್ಕೆ ಜೋಫ್ರಾ ಆರ್ಚರ್ ಅವಕಾಶ ನೀಡಲಿಲ್ಲ. ಅವರು ಪವರ್‌ಪ್ಲೇನಲ್ಲಿಯೇ ಫಾರ್ಮ್‌ನಲ್ಲಿದ್ದ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿ ಎಸ್‌ಆರ್‌ಎಚ್‌ಗೆ ಆಘಾತ ನೀಡಿದರು.
SRH vs RR: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸುರೇಶ್ ರೈನಾ ದಾಖಲೆ ಸರಿಗಟ್ಟಿದ ವೈಭವ್ ಸೂರ್ಯವಂಶಿ!
ಆರಂಭಿಕ ಆಘಾತ ಅನುಭವಿಸಿದ್ದ ಎಸ್‌ಆರ್‌ಎಚ್
ಮೊದಲನೇ ಓವರ್‌ನ ಎರಡನೇ ಎಸೆತದಲ್ಲಿಯೇ ಅಪಾಯಕಾರಿ ಅಭಿಷೇಕ್ ಶರ್ಮಾರನ್ನು ಔಟ್ ಮಾಡಿದ ಆರ್ಚರ್, ನಂತರ ಮೂರನೇ ಓವರ್‌ನಲ್ಲಿ 11 ಎಸೆತಗಳಲ್ಲಿ 33 ರನ್ ಸಿಡಿಸಿ ಆಡುತ್ತಿದ್ದ ಇಶಾನ್ ಕಿಶನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಐದನೇ ಓವರ್‌ನಲ್ಲಿ ಮತ್ತೆ ಬೌಲಿಂಗ್‌ಗೆ ಬಂದ ಇಂಗ್ಲೆಂಡ್ ವೇಗಿ, ಟ್ರಾವಿಸ್ ಹೆಡ್ (17) ಅವರನ್ನು ಕೂಡ ಔಟ್ ಮಾಡಿದರು. 10 ಎಸೆತಗಳಲ್ಲಿ 18 ರನ್ ಗಳಿಸಿ ಭರವಸೆ ಮೂಡಿಸಿದ್ದ ಹೆನ್ರಿಕ್ ಕ್ಲಾಸೆನ್ ಕೂಡ ನಿರಾಶೆ ಮೂಡಿಸಿದರು.
ಪವರ್‌ಪ್ಲೇನಲ್ಲಿ 3 ವಿಕೆಟ್ ಕಿತ್ತ ಜೋಫ್ರಾ ಆರ್ಚರ್
ಆರನೇ ವಿಕೆಟ್‌ಗೆ ಜೊತೆಯಾಗಿದ್ದ ನಿತೀಶ್ ರೆಡ್ಡಿ (38 ರನ್) ಹಾಗೂ ಸಲೀಲ್ ಅರೋರಾ (33 ರನ್) 56 ರನ್ ಜೊತೆಯಾಟವನ್ನು ಆಡಿ ಹೈದರಾಬಾದ್ ತಂಡಕ್ಕೆ ಭರವಸೆ ಮೂಡಿಸಿದ್ದರು. ಆದರೆ, ರವೀಂದ್ರ ಜಡೇಜಾ ಈ ಇಬ್ಬರನ್ನು ಔಟ್ ಮಾಡಿದರು. ಶಿವಾಂಗ್ ಕುಮಾರ್ (27 ರನ್ಕೊ) ನೆಯವರೆಗೂ ಬ್ಯಾಟ್ ಮಾಡಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಸನ್‌ರೈಸರ್ಸ್ 19.2 ಓವರ್‌ಗಳಿಗೆ 196 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲು ಅನುಭವಿಸಿತು ಹಾಗೂ ಅಧಿಕೃತವಾಗಿ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು.
243 ರನ್ ಕಲೆ ಹಾಕಿದ ರಾಜಸ್ಥಾನ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ರಾಜಸ್ಥಾನ್ ರಾಯಲ್ಸ್ ತಂಡ, ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್‌ಗೆ 244 ರನ್‌ಗಳ ಗುರಿಯನ್ನು ನೀಡಿತು.
ಜೈಸ್ವಾಲ್-ವೈಭವ್ ಜುಗಲ್‌ಬಂದಿ
ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಪವರ್‌ಪ್ಲೇನಲ್ಲಿ ಅಬ್ಬರಿಸಿದರು. ಈ ಇಬ್ಬರೂ ಆರಂಭಿಕ ಓವರ್‌ಗಳಲ್ಲಿ ಎಸ್‌ಆರ್‌ಎಚ್ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು ಹಾಗೂ 8 ಓವರ್‌ಗಳಿಗೆ 125 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಆರ್‌ಆರ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಈ ಜೊತೆಯಾಟದಲ್ಲಿ ಜೈಸ್ವಾಲ್ 29 ರನ್ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರೆ, ವೈಭವ್ ಸ್ಪೋಟಕ ಬ್ಯಾಟಿಂಗ್ ಮೂಲಕ 97 ರನ್‌ಗಳ ಕೊಡುಗೆಯನ್ನು ನೀಡಿದರು.
ಅಬ್ಬರಿಸಿದ ವೈಭವ್ ಸೂರ್ಯವಂಶಿ
ಆರಂಭದಿಂದಲೂ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಪವರ್‌ಪ್ಲೇನಲ್ಲಿ ಕೇವಲ 16 ಎಸೆತಗಳಲ್ಲಿಯೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಐಪಿಎಲ್ ಪ್ಲೇಆಫ್ಸ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿ ಸುರೇಶ ರೈನಾ ದಾಖಲೆಯನ್ನು ಸರಿಗಟ್ಟಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಅವರು ಆಡಿದ 29 ಎಸೆತಗಳಲ್ಲಿ ಬರೋಬ್ಬರಿ 12 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 97 ರನ್ ಗಳಿಸಿ ಆರ್‌ಆರ್‌ಗೆ ಭರ್ಜರಿ ಆರಂಭ ತಂದುಕೊಟ್ಟು ಔಟ್ ಆದರು. ಅವರು ಕೇವಲ ಮೂರು ರನ್ ಅಂತರದಲ್ಲಿ ಕ್ರಿಸ್ ಗೇಲ್ ಅವರ ವೇಗದ ಶತಕದ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು.
IPL 2026: 65 ಸಿಕ್ಸರ್‌ಗಳ ಮೂಲಕ ಕ್ರಿಸ್ ಗೇಲ್‌ರ ವಿಶ್ವ ದಾಖಲೆ ಮುರಿದ ವೈಭವ್ ಸೂರ್ಯವಂಶಿ!
ಧ್ರುವ್ ಜುರೆಲ್ ಅರ್ಧಶತಕ
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಧ್ರುವ್ ಜುರೆಲ್ ತಮ್ಮ ಕ್ಲಾಸ್ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅವರು ಆಡಿದ 21 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 50 ರನ್ ಗಳಿಸಿದ ಬಳಿಕ ಔಟ್ ಆದರು. ರಿಯಾನ್ ಪರಾಗ್ 26 ರನ್‌ಗೆ ಸೀಮಿತರಾದರು. ಆರ್‌ಆರ್15 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಎಸ್‌ಆರ್‌ಎಚ್ ಬೌಲರ್‌ಗಳ ಕಮ್‌ಬ್ಯಾಕ್ ಮಾಡಿ ಕೊನೆಯ 5 ಓವರ್‌ಗಳಿಗೆ ಕೇವಲ 36 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಆರ್‌ಆರ್ ಮೊತ್ತವನ್ನು 243ಕ್ಕೆ ಕಟ್ಟಿ ಹಾಕಿದರು. ಎಸ್‌ಆರ್‌ಎಚ್ ಪರ ಪ್ರಫುಲ್ ಹಿಂಗೆ 3 ವಿಕೆಟ್ ಪಡೆದರು.