ನವದೆಹಲಿ: ಕೇವಲ 15ರ ವಯಸ್ಸಿನ ವೈಭವ್ ಸೂರ್ಯವಂಶಿ (Vaibhav Sooryavanshi) ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಯುಎಇ ವಿರುದ್ಧದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ (Eising Stars Asia Cup) ಪಂದ್ಯದಲ್ಲಿ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದ ವೈಭವ್ ಆಟಕ್ಕೆ ಕ್ರಿಕೆಟ್ ದಿಗ್ಗಜರು ಫಿದಾ ಆಗಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ (Kevin Pietersen), ಮುಂದಿನ ಐದು ವರ್ಷಗಳಲ್ಲಿ ವೈಭವ್ ಟೆಸ್ಟ್ ಕ್ರಿಕೆಟ್ನ ಒಂದೇ ಇನಿಂಗ್ಸ್ನಲ್ಲಿ 500 ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಯುಎಇ ನೀಡಿದ್ದ 250 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡ ಕೇವಲ 15ನೇ ಓವರ್ನಲ್ಲೇ ಗೆಲುವಿನ ದಡ ಸೇರಿತ್ತು. ಈ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದ್ದರು. ಕೇವಲ 53 ಎಸೆತಗಳಲ್ಲಿ 15 ಬೌಂಡರಿ ಹಾಗೂ 28 ಸಿಕ್ಸರ್ಗಳ ನೆರವಿನಿಂದ 204 ರನ್ ಸಿಡಿಸಿದ್ದರು. ಆ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ ಸಾಧನೆ ಮಾಡಿದ್ದರು. ಅಲ್ಲದೆ, ಒಂದೇ ಇನಿಂಗ್ಸ್ನಲ್ಲಿ 28 ಸಿಕ್ಸರ್ ಸಿಡಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದ್ದರು.
ವೈಭವ್ ಅವರ ಈ ಅಬ್ಬರದ ಬ್ಯಾಟಿಂಗ್ಗೆ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ನ ಒಂದೇ ಇನಿಂಗ್ಸ್ನಲ್ಲಿ 500 ರನ್ ಗಳಿಸುವ ಸಾಮರ್ಥ್ಯ ಈ ಯುವ ಆಟಗಾರನಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ಸ್ಪಿನ್ನರ್ ಇಶ್ ಸೋಧಿ ಕೂಡ ವೈಭವ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಪಂದ್ಯದ ಕೊನೆಯ ದಿನ 380 ಅಥವಾ 400 ರನ್ಗಳ ಗುರಿಯನ್ನು ಬೆನ್ನಟ್ಟಬೇಕಾದ ಸಂದರ್ಭದಲ್ಲಿ ವೈಭವ್ನಂತಹ ಆಟಗಾರ ತಂಡದಲ್ಲಿದ್ದರೆ ಅದ್ಭುತ ಎಂದು ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಇಶ್ ಸೋಧಿ, "ವೈಭವ್ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಸಾಧ್ಯವೇ ಎಂಬ ಬಗ್ಗೆ ಇತ್ತೀಚೆಗೆ ಚರ್ಚೆ ನಡೆಸಿದ್ದೆ. ಅವರ ಬ್ಯಾಟಿಂಗ್ನ ಮೂಲಭೂತ ತಂತ್ರಗಳು ಅತ್ಯುತ್ತಮವಾಗಿವೆ. ಮೈದಾನದ ಎಲ್ಲಾ ದಿಕ್ಕುಗಳಲ್ಲೂ ಚೆಂಡನ್ನು ಬಾರಿಸುವ ಅವರ ಸಾಮರ್ಥ್ಯ ಅದ್ಭುತವಾಗಿದೆ. ಅವರ ತಂತ್ರಗಾರಿಕೆ ಟೆಸ್ಟ್ ಕ್ರಿಕೆಟ್ಗೆ ಸಾಕಾಗುವಷ್ಟು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದಿದ್ದಾರೆ.
"ಟೆಸ್ಟ್ ಪಂದ್ಯದ ಕೊನೆಯ ದಿನ 380 ಅಥವಾ 400 ರನ್ಗಳ ಗುರಿಯನ್ನು ಬೆನ್ನಟ್ಟಬೇಕಾದ ಪರಿಸ್ಥಿತಿ ಎದುರಾದರೆ ವೈಭವ್ನಂತಹ ಆಟಗಾರ ತಂಡದಲ್ಲಿರುವುದು ನಂಬಲಸಾಧ್ಯವಾದ ಬಲ ನೀಡುತ್ತದೆ. ವಿಶೇಷವಾಗಿ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್ ವೇಳೆ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಎದುರಾಳಿ ಬೌಲರ್ಗಳಿಗೆ ವೈಭವ್ ಅವರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈಭವ್ ಸೂರ್ಯವಂಶಿ ದ್ವಿಶತಕ ಬಾರಿಸಿದರೂ ಕಳವಳ ವ್ಯಕ್ತಪಡಿಸಿದ ಸಂಜಯ್ ಮಾಂಜ್ರೇಕರ್!
ವೈಭವ್ ಸೂರ್ಯವಂಶಿ ಈಗಾಗಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ನಂತಹ ದೀರ್ಘ ಮಾದರಿಯಲ್ಲಿ ಯಶಸ್ಸು ಸಾಧಿಸಲು ರಕ್ಷಣಾತ್ಮಕ ಬ್ಯಾಟಿಂಗ್ ಹಾಗೂ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕಿದೆ. ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಸಿಗುವ ನಿರೀಕ್ಷೆಯಿದ್ದರೂ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಾನ ಪಡೆಯಲು ತಮ್ಮ ರಕ್ಷಣಾತ್ಮಕ ಆಟ ಮತ್ತು ಸ್ಥಿರತೆಯನ್ನು ಸಾಬೀತುಪಡಿಸಬೇಕಿದೆ. ಹೀಗಾಗಿ ಈ ಯುವ ಆಟಗಾರನ ಮುಂದಿನ ಬೆಳವಣಿಗೆಯ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣಿದೆ.