ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಜನವರಿ 13 ರಂದು ಎರಡನೇ ಹಂತದ ಕ್ವಾರ್ಟರ್‌ಫೈನಲ್ ಪಂದ್ಯಗಳು ಮುಗಿದಿವೆ. ವಿದರ್ಭ (Vidarbha) ತಂಡ, ದೆಹಲಿ ವಿರುದ್ಧ 76 ರನ್‌ಗಳಿಂದ ಭರ್ಜರಿ ಗೆಲವು ಪಡೆಯುವ ಮೂಲಕ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಅಂತಿಮ ನಾಲ್ಕರ ಘಟ್ಟದಲ್ಲಿ ಕರ್ನಾಟಕ (Karnataka) ವಿರುದ್ಧ ಕಾದಾಟ ನಡೆಸಲಿದೆ. ಇನ್ನು ಮತ್ತೊಂದು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಮಧ್ಯ ಪ್ರದೇಶ ಎದುರು ಪಂಜಾಬ್ ತಂಡ, 183 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಇದರೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಪಂಜಾಬ್ ಅರ್ಹತೆ ಪಡೆದಿದೆ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಎರಡನೇ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿದರ್ಭ ಹಾಗೂ ದೆಹಲಿ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿದರ್ಭ ತಂಡ, ಅಥರ್ವ ಥೈಡೆ ಹಾಗೂ ಯಶ್ ರಾಥೋಡ್ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 300 ರನ್‌ಗಳನ್ನು ಕಲೆ ಹಾಕಿತು. ವಿದರ್ಭ ಪರ ಅದ್ಭುತವಾಗಿ ಬ್ಯಾಟ್ ಮಾಡಿದ ಅಥರ್ವ ಥೈಡೆ 72 ಎಸೆತಗಳಲ್ಲಿ 62 ರನ್ ಗಳಿಸಿದರು ಹಾಗೂ ಮಧ್ಯಮ ಕ್ರಮಾಂಕದಲ್ಲಿ ಯಶ್ ರಾಥೋಡ್ ಅವರು 73 ಎಸೆತಗಳಲ್ಲಿ 86 ರನ್‌ಗಳನ್ನು ಕಲೆ ಹಾಕಿದರು. ಧ್ರುವ್ ಶೋರೆ ಕೂಡ 49 ರನ್‌ಗಳ ಕೊಡುಗೆಯನ್ನು ನೀಡಿದ್ದರು.
ICC T20 World Cup: ಪಾಕಿಸ್ತಾನ ಮೂಲದ ಯುಎಸ್‌ಎ ಕ್ರಿಕೆಟಿನಿಗೆ ಭಾರತದ ವೀಸಾ ನಿರಾಕರಣೆ!
224 ರನ್‌ಗಳಿಗೆ ದೆಹಲಿ ಆಲ್‌ಔಟ್
ಬಳಿಕ 301 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದೆಹಲಿ ತಂಡ, ನಾಚಿಕೇತ್ ಮಾರಕ ವೇಗ ಹಾಗೂ ಹರ್ಷ್ ದುಬೇ ಅವರ ಸ್ಪಿನ್ ಮೋಡಿಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಅನುಜ್ ರಾವತ್ ಅವರು 66 ರನ್‌ಗಳನ್ನು ಕಲೆ ಹಾಕಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಅಂತಿಮವಾಗಿ ವಿರಾಟ್ ಕೊಹ್ಲಿ ಪ್ರತಿನಿಧಿಸಿದ್ದ ದೆಹಲಿ ತಂಡ, 45.1 ಓವರ್‌ಗಳಿಗೆ 224 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೆಮಿಫೈನಲ್ ರೇಸ್‌ನಿಂದ ಹೊರ ನಡೆಯಿತು.
ವಿದರ್ಭ ಪರ ನಾಚಿಕೇತ್ 4 ವಿಕೆಟ್ ಕಿತ್ತರೆ, ನಾಯಕ ಹರ್ಷ್ ದುಬೆ ಮೂರು ವಿಕೆಟ್ ಪಡೆದರು. ಆ ಮೂಲಕ ದೆಹಲಿ ತಂಡವನ್ನು ಆಲ್‌ಔಟ್ ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು.
VHT 2025-26: ಇತಿಹಾಸ ಬರೆದ ದೇವದತ್ ಪಡಿಕ್ಕಲ್; ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!
ವಿದರ್ಭ ತಂಡಕ್ಕೆ ಕರ್ನಾಟಕ ಎದುರಾಳಿ
ಜನವರಿ 15 ರಂದು ವಿದರ್ಭ ಹಾಗೂ ಕರ್ನಾಟಕ ತಂಡಗಳು ಬೆಂಗಳೂರು ಹೊರ ವಲಯದ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ ಮೊದಲನೇ ಮೈದಾನದಲ್ಲಿ ಕಾದಾಟ ನಡೆಸಲಿವೆ. ಸೋಮವಾರ ಕರ್ನಾಟಕ ತಂಡ, ಮುಂಬೈ ವಿರುದ್ಧ 55 ರನ್‌ಗಳಿಂದ ಗೆದ್ದು ಬೀಗಿತ್ತು. ಜನವರಿ 16 ರಂದು ಇದೇ ಮೈದಾನದಲ್ಲಿ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ಹಾಗೂ ಸೌರಾಷ್ಟ್ರ ತಂಡಗಳು ಕಾದಾಟ ನಡೆಸಲಿವೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 345 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಮಧ್ಯ ಪ್ರದೇಶ 162 ರನ್‌ಗಳಿಗೆ ಆಲ್‌ಔಟ್ ಆಗಿತ್ತು.