ಜೈಪುರ: ಕಳೆದ ಎರಡು ದಿನಗಳ ಹಿಂದೆ ಇಲ್ಲಿನಸ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭರ್ಜರಿ ಶತಕ ಬಾರಿಸಿದ್ದ ಮುಂಬೈ ತಂಡದ (Mumbai) ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma), ಶುಕ್ರವಾರ ಉತ್ತರಾಖಂಡ (Uttarakhand) ಎದುರು ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್‌ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ, ಜೈಪುರದಲ್ಲಿ ಅಭಿಮಾನಿಗಳಿಗೆ ಮತ್ತೊಮ್ಮೆ ರಂಜಿಸಲಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ದೇವೇಂದ್ರ ಸಿಂಗ್ ಬೋರಾ ಅವರ ಎಸೆತದಲ್ಲಿ ಜಗಮೋಹನ್ ನಾಗರಕೋಟಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್‌ಗೆ ಮರಳಿದರು.
ಬರೋಬ್ಬರಿ ಏಳು ವರ್ಷಗಳ ಬಳಿಕ ರೋಹಿತ್ ಶರ್ಮಾ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ತಮ್ಮ ಮೊದಲನೇ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಸ್ಪೋಟಕ ಶತಕವನ್ನು ಬಾರಿಸಿದ್ದಾರೆ. ಇವರ ಶತಕದ ಬಲದಿಂದ ಮುಂಬೈ ತಂಡ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಉತ್ತರಾಖಂಡ ಎದುರಿನ ಪಂದ್ಯದಲ್ಲಿ ಅದೇ ಲಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಪರ ಅಂಗ್‌ಕೃಷ್ ರಘುವಂಶಿ ಅವರ ಜೊತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಅವರಿಗೆ ಪಂದ್ಯದ ಮೊದಲನೇ ಎಸೆತದಲ್ಲಿ ದೇವೇಂದ್ರ ಸಿಂಗ್ ಬೋರಾ ಬಾಡಿ ಲೈನ್ ಮೇಲೆ ಬೌನ್ಸರ್ ಹಾಕಿದರು. ಈ ವೇಳೆ ರೋಹಿತ್ ಶರ್ಮಾ ಅವರು ಸ್ಕೈರ್ ಲೆಗ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಆದರೆ, ಚೆಂಡು ಬ್ಯಾಟ್‌ಗೆ ಸರಿಯಾಗಿ ಸಿಗದ ಕಾರಣ ಪೈನ್ ಲೆಗ್‌ನಲ್ಲಿ ಡೀಪ್‌ನಲ್ಲಿ ಜಗಮೋಹನ್‌ಗೆ ಸುಲಭ ಕ್ಯಾಚ್ ಕೊಟ್ಟರು.
Vijay Hazare Trophy: 62 ಎಸೆತಗಳಲ್ಲಿ ಶತಕ ಬಾರಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!
ಇನ್ನು ಡಿಸೆಂಬರ್ 29 ರಂದು ಛತ್ತೀಸ್‌ಗಢ ವಿರುದ್ಧದ ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇದು ಈ ಸೀಸನ್‌ನಲ್ಲಿ ರೋಹಿತ್ ಶರ್ಮಾ ಅವರ ಪಾಲಿಗೆ ಕೊನೆಯ ವಿಜಯ ಹಝಾರೆ ಟ್ರೋಫಿ ಪಂದ್ಯವಾಗಲಿದೆ. ನಂತರ ಅವರು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಭಾರತ ತಂಡಕ್ಕೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಯಾರಿ ನಡೆಸಲಿದ್ದಾರೆ. ಹಾಗಾಗಿ ದೇಶಿ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ರೋಹಿತ್ ಶರ್ಮಾ ಔಟ್ ಆದ ವಿಡಿಯೊ ಇಲ್ಲಿದೆ:
ಸಿಕ್ಕಿಂ ಎದುರು 155 ರನ್ ಚಚ್ಚಿದ್ದ ರೋಹಿತ್ ಶರ್ಮಾ
ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 94 ಎಸೆತಗಳಲ್ಲಿ 155 ರನ್‌ಗಳನ್ನು ಬಾರಿಸಿದ್ದರು. ಅವರು ಈ ಪಂದ್ಯದಲ್ಲಿ 62 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದರು. ಅವರು ಈ ಇನಿಂಗ್ಸ್‌ನಲ್ಲಿ 164.89ರ ಸ್ಟ್ರೈಕ್ ರೇಟ್‌ನಲ್ಲಿ ರನ್‌ಗಳನ್ನು ಬಾರಿಸಿದ್ದರು. ಒಂಭತ್ತು ಸಿಕ್ಸರ್ ಹಾಗೂ 18 ಬೌಂಡರಿಗಳನ್ನು ಬಾರಿಸಿದ್ದಾರೆ. ಅಲ್ಲದೆ ಮತ್ತೊಂದು ಆರಂಭಿಕ ಅಂಘಕೃಷ್ ರಘುವಂಶಿ ಅವರ ಜೊತೆಗೆ ಮೊದಲನೇ ವಿಕೆಟ್‌ಗೆ 141 ರನ್‌ಗಳನ್ನು ಬಾರಿಸಿದ್ದರು. ನಂತರ, ಎರಡನೇ ವಿಕೆಟ್‌ಗೆ ಮುಶೀರ್ ಖಾನ್‌ಗೆ 85 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಮುಂಬೈ ತಂಡ 237 ರನ್‌ಗಳ ಗುರಿಯನ್ನು 30.3 ಓವರ್‌ಗಳಿಗೆ ತಲುಪಿತ್ತು.