ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Hazare Trophy: ದೇವದತ್‌ ಪಡಿಕ್ಕಲ್‌ ಶತಕ, 413 ರನ್‌ ಚೇಸ್‌ ಮಾಡಿ ಗೆದ್ದ ಕರ್ನಾಟಕ!

KAR vs JHKD Match Highlights: ಜಾರ್ಖಂಡ್‌ ತಂಡ 413 ರನ್‌ಗಳ ಮೊತ್ತವನ್ನು ಗುರಿ ನೀಡಿದ್ದರ ಹೊರತಾಗಿಯೂ ದೇವದತ್‌ ಪಡಿಕ್ಕಲ್‌ ಅವರ ಶತಕದ ಬಲದಿಂದ ಕರ್ನಾಟಕ ತಂಡ, 5 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ 2025-26ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಜಾರ್ಖಂಡ್‌ ವಿರುದ್ಧ ಶತಕ ಬಾರಿಸಿದ ದೇವದತ್‌ ಪಡಿಕ್ಕಲ್‌.

ಅಹಮದಾಬಾದ್‌: ದೇವದತ್‌ ಪಡಿಕ್ಕಲ್‌ (Devdutt Padikkal) ಅವರ ಸ್ಪೋಟಕ ಶತಕದ ಬಲದಿಂದ ಕರ್ನಾಟಕ ತಂಡ, ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2025-26ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಅಂದ ಹಾಗೆ ಜಾರ್ಖಂಡ್‌ ಪರ ಇಶಾನ್‌ ಕಿಶನ್‌ (Ishan Kishan) ಕೂಡ ಶತಕವನ್ನು ಬಾರಿಸಿದ್ದರು. ಆದರೆ, ಬೌಲರ್‌ಗಳ ವೈಫಲ್ಯದಿಂದ ಜಾರ್ಖಂಡ್‌ ತಂಡ ಸೋಲು ಒಪ್ಪಿಕೊಳ್ಳಬೇಕಾಯಿತು. ಅಂದ ಹಾಗೆ ಶತಕ ಬಾರಿಸಿ ಕರ್ನಾಟಕ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದ ದೇವದತ್‌ ಪಡಿಕ್ಕಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜಾರ್ಖಂಡ್‌ ನೀಡಿದ್ದ 413 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಪರ ಎಲ್ಲಾ ಬ್ಯಾಟ್ಸ್‌ಮನಗಳು ಕೂಡ ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದರು. ಇನಿಂಗ್ಸ್‌ ಆರಂಭಿಸಿದ ಮಯಾಂಕ್‌ ಅಗರ್ವಾಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಮೊದಲನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ನಾಯಕಿ ಮಯಾಂಕ್‌ ಅಗರ್ವಾಲ್‌ 34 ಎಸೆತಗಳಲ್ಲಿ 54 ರನ್‌ ಸಿಡಿಸಿ ಸೌರಭ್‌ ಶೇಖರ್‌ಗೆ ವಿಕೆಟ್‌ ಒಪ್ಪಿಸಿದ್ದರು.

33 ಎಸೆತಗಳಲ್ಲಿ ಶತಕ ಬಾರಿಸಿ ವೈಭವ್‌ ಸೂರ್ಯವಂಶಿ ದಾಖಲೆ ಮುರಿದ ಇಶಾನ್‌ ಕಿಶನ್‌!

ದೇವದತ್‌ ಪಡಿಕ್ಕಲ್‌ ಶತಕ

ಕರುಣ್‌ ನಾಯರ್‌ (29), ಸ್ಮರಣ್‌ ರವಿಚಂದ್ರನ್‌ (27) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿವ ವಿಫಲರಾದರೂ ತಂಡಕ್ಕೆ ತಮ್ಮ ಕೈಲಾದ ನೆರವು ನೀಡಿದರು. ಕೃಷ್ಣನ್‌ ಶ್ರೀಜಿತ್‌ ಅದ್ಭುತ ಬ್ಯಾಟಿಂಗ್‌ ನಡೆಸಿ 38 ರನ್‌ ಗಳಿಸಿ ಔಟ್‌ ಆದರು. ಆದರೆ, ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದ ದೇವದತ್‌ ಪಡಿಕ್ಕಲ್‌, 118 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 147 ರನ್‌ಗಳನ್ನು ಬಾರಿಸಿದರು. ಆ ಮೂಲಕ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್‌ ಕೊಹ್ಲಿ, 131 ರನ್‌ ಚಚ್ಚಿದ ರನ್‌ ಮಷೀನ್‌!

ಅಭಿನವ್‌-ಧ್ರುವ್‌ ಜುಗಲ್‌ಬಂದಿ

ದೇವದತ್‌ ಪಡಿಕ್ಕಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಜಾರ್ಖಂಡ್‌ ತಂಡ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವ ಹಾದಿಯಲ್ಲಿತ್ತು. ಆದರೆ, ಕೊನೆಯ ಹಂತದಲ್ಲಿ ಅಭಿನಬ್‌ ಮನೋಹರ್‌ (36 ಎಸೆತಗಳಲ್ಲಿ 56 ರನ್‌) ಹಾಗೂ ಧ್ರುವ್‌ ಪ್ರಭಾಕರ್‌ ( 22 ಎಸೆತಗಳಲ್ಲಿ 40 ರನ್‌) ಅವರು 41ಎಸೆತಗಳಲ್ಲಿ 88 ರನ್‌ಗಳ ಮ್ಯಾಚ್‌ ವಿನ್ನಿಂಗ್‌ ಜೊತೆಯಾಟವನ್ನು ಆಡಿ ಕರ್ನಾಟಕ ತಂಡವನ್ನು ಗೆಲ್ಲಿಸಿದ್ದರು.

ಇಶಾನ್‌ ಕಿಶನ್‌ ದಾಖಲೆಯ ಶತಕ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಜಾರ್ಖಂಡ್‌ ತಂಡದ ಪರ ನಾಯಕ ಇಶಾನ್‌ ಕಿಶನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ತೋರಿದ್ದ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದ್ದರು. ಅವರು ಕೇವಲ 33 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಭಾರತೀಯ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅಂತಿಮವಾಗಿ ಅವರು ಕೇವಲ 39 ಎಸೆತಗಳಲ್ಲಿ 14 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 125 ರನ್‌ಗಳನ್ನು ಬಾರಿಸಿದ್ದರು.

ಇಶಾನ್‌ ಕಿಶನ್‌ ಜೊತೆಗೆ ವಿರಾಟ್‌ ಸಿಂಗ್‌ 68 ಎಸೆತಗಳಲ್ಲಿ 88 ರನ್‌, ಕುಮಾರ ಕುಶಾಗ್ರ 47 ಎಸೆತಗಳಲ್ಲಿ 63 ರನ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮುನ್ನ ಓಪನರ್‌ ಶಿಖರ್‌ ಮೋಹನ್‌ 44 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಜಾರ್ಖಂಡ್‌ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 412 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಕರ್ನಾಟಕ ತಂಡಕ್ಕೆ 413 ರನ್‌ಗಳ ಗುರಿಯನ್ನು ನೀಡಿತ್ತು.