ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇತಿಹಾಸದಲ್ಲಿ 800 ಬೌಂಡರಿಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಬರೆದಿದ್ದಾರೆ. ಶುಕ್ರವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಐಪಿಎಲ್ (IPL 2026) ಟೂರ್ನಿಯ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಮೈಲುಗಲ್ಲು ತಲುಪಿದರು. ಕಗಿಸೊ ರಬಾಡ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದ ಬಳಿಕ 800 ಬೌಂಡರಿಗಳನ್ನು ಪೂರೈಸಿದರು.
ವಿರಾಟ್ ಕೊಹ್ಲಿ(807 ಬೌಂಡರಿಗಳು) ಬಳಿಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಶಿಖರ್ ಧವನ್ (768) ಎರಡನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಮಾಜಿ ನಾಯಕ ಡೇವಿಡ್ ವಾರ್ನರ್ (663) ಮೂರನೇ ಸ್ಥಾನ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ(653) ನಾಲ್ಕನೇ ಸ್ಥಾನದಲ್ಲಿದ್ದಾರೆ.
RCB vs GT: 2000 ರನ್ ಪೂರ್ಣಗೊಳಿಸಿದ ಕ್ರಿಸ್ ಗೇಲ್ ದಾಖಲೆ ಮುರಿದ ಸಾಯಿ ಸುದರ್ಶನ್!
81 ರನ್ ಗಳಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು. ಅವರು ಆಡಿದ 44 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 81 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ಅವರು 184.09ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ವಿಶೇಷ. ಇವರು ದೇವದತ್ ಪಡಿಕ್ಕಲ್ ಅವರ ಜೊತೆಗೆ ಎರಡನೇ ವಿಕೆಟ್‌ಗೆ 59 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಆರ್‌ಸಿಬಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.
205 ರನ್ ಕಲೆ ಹಾಕಿದ ಗುಜರಾತ್ ಟೈಟನ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಗುಜರಾತ್ ಟೈಟನ್ಸ್ ತಂಡ, ಸಾಯಿ ಸುದರ್ಶನ್ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳನ್ನು ಕಲೆ ಹಾಕಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅವರು 58 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 100 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದ ಮೂರನೇ ಶತಕವನ್ನು ಬಾರಿಸಿದ್ದರು.
RCB vs GT ಪಂದ್ಯದಲ್ಲಿ ಫಿಲ್ ಸಾಲ್ಟ್ ಏಕೆ ಆಡುತ್ತಿಲ್ಲ? ಕಾರಣ ಕೊಟ್ಟ ರಜತ್ ಪಾಟಿದಾರ್!
ಇನಿಂಗ್ಸ್ ಬ್ರೇಕ್ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸಾಯಿ ಸುದರ್ಶನ್,"ಚೆಂಡು ಚೆನ್ನಾಗಿ ಬರುತ್ತಿತ್ತು. ಕಳೆದ ಕೆಲ ಇನಿಂಗ್ಸ್‌ಗಳಿಂದ ಚೆಂಡನ್ನು ನಾನು ಚೆನ್ನಾಗಿಹೊಡೆಯುತ್ತಿದ್ದೇನೆ ಹಾಗೂ ಇದಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ಇಲ್ಲಿನ ಪಿಚ್ ಎರಡು ಮುಖಗಳನ್ನು ಹೊಂದಿತ್ತು ಹಾಗೂ ಅಂಟಿನಿಂದ ಕೂಡಿತ್ತು. ಹಾಗಾಗಿ ಸಾಧ್ಯವಾದಷ್ಟು ಕೊನೆಯವರೆಗೂ ಬ್ಯಾಟಿಂಗ್ ತೆಗೆದುಕೊಂಡು ಹೋಗಬೇಕೆಂಬುದು ನಮ್ಮ ಸಂವಹನವಾಗಿತ್ತು," ಎಂದು ಹೇಳಿದ್ದರು.