ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಏಕದಿನ ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆಂದ ವಿರಾಟ್‌ ಕೊಹ್ಲಿ!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಖಚಿತಪಡಿಸಿದ್ದಾರೆ. ಜಿಯೊಸ್ಟಾರ್‌ ಜತೆ ಮಾತನಾಡುವ ವೇಳೆ ಅವರು ವಿಷಯವನ್ನು ರಿವೀಲ್‌ ಮಾಡಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತಿದ್ದಾರೆ.

ಏಕದಿನ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಿಸಲಿರುವ ವಿರಾಟ್‌ ಕೊಹ್ಲಿ.

ತಿರುವನಂತಪುರಂ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2027) ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಖಚಿತಪಡಿಸಿದ್ದಾರೆ. ಜಿಯೊಸ್ಟಾರ್‌ ಜೊತೆ ಮಾತನಾಡಿದ ವಿರಾಟ್‌ ಕೊಹ್ಲಿ, ಮುಂದಿನ ಐಸಿಸಿ ಏಕದಿನ ವಿಶ್ವಕಪ್‌ ತಮ್ಮ ಪಾಲಿಗೆ ಕೊನೆಯ ಟೂರ್ನಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ತಮ್ಮ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಇದೀಗ ಅವರು ಭಾರತ ತಂಡದ ಜೊತೆಗೆ ತಿರುವನಂತಪುರಂನಲ್ಲಿದ್ದು, ವೆಸ್ಟ್‌ ಇಂಡೀಸ್‌ ಎದುರು ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ.

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ಮುಂದಿನ ವರ್ಷ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದೆ. 2011ರಲ್ಲಿ ಭಾರತದ ಪರ ಕೊನೆಯ ಬಾರಿ ಏಕದಿನ ವಿಶ್ವಕಪ್‌ ಗೆದ್ದಿದ್ದ ಕೊಹ್ಲಿ, ತಮ್ಮ ನಾಯಕತ್ವದಲ್ಲಿ ಏಕದಿನ ವಿಶ್ವಕಪ್‌ ಗೆಲ್ಲುವ ಅವಕಾಶವನ್ನು 2019ರಲ್ಲಿ ಕಳೆದುಕೊಂಡಿದ್ದರು. ಅಂದು ನ್ಯೂಜಿಲೆಂಡ್‌ ಎದುರು ಮಳೆ ಬಾಧಿತ ಸೆಮಿಫೈನಲ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಸೋಲು ಅನುಭವಿಸಿತ್ತು. ಇದೀಗ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಶುಭಮನ್‌ ಗಿಲ್‌ ಮುನ್ನಡೆಸಲಿದ್ದಾರೆ.

ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಪಾತ್ರವನ್ನು ವಿವರಿಸಿದ ಗೌತಮ್‌ ಗಂಭೀರ್‌!

"ಇದೀಗ ಮುಂದಿನ ಟೂರ್ನಿ ವಿದೇಶಿ ಕಂಡೀಷನ್ಸ್‌ನಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ನೀವು ನಿಮ್ಮಿಂದ ಸಾಕಷ್ಟು ಪ್ರಯತ್ನ ಹಾಕಬೇಕಾಗುತ್ತದೆ. ನನ್ನ ಪಾಲಿಗೆ ಇದು ಕೊನೆಯ ವಿಶ್ವಕಪ್‌ ಟೂರ್ನಿಯಾಗಿದ್ದು, ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದೇನೆ. ಇದು ನನ್ನ ಪ್ರೇರಣೆಯಾಗಿದೆ. ಮೈದಾನದಲ್ಲಿ ಎಲ್ಲವನ್ನೂ ಬಿಟ್ಟು ಹೋಗಬೇಕೆಂಬುದು ನನ್ನ ಉದ್ದೇಶ," ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

"50 ಓವರ್‌ಗಳ ವಿಶ್ವಕಪ್‌ನ ತೀವ್ರತೆ ಬೇರೆ ಯಾವುದೇ ಟೂರ್ನಿಗಿಂತ ಹೆಚ್ಚಾಗಿದೆ. ಇದೀಗ ಇದು ಟಿ20 ಮಟ್ಟದ ತೀವ್ರತೆಯ 10 ಪಂದ್ಯಗಳಂತೆ. ಆದರೆ ಒಂದು ದಿನದಲ್ಲಿ ಸುಮಾರು ಎರಡೂವರೆ ಟಿ20 ಪಂದ್ಯಗಳನ್ನು ಆಡಿದಷ್ಟು ಶ್ರಮ ಹಾಕಬೇಕಾಗುತ್ತದೆ. ದೊಡ್ಡ ಟೂರ್ನಿ ಹಾಗೂ ವಿಶ್ವಕಪ್‌ ಟೂರ್ನಿಯಲ್ಲಿ 10 ಪಂದ್ಯಗಳವರೆಗೆ ಇದೇ ರೀತಿಯ ತೀವ್ರತೆಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು,” ಎಂದು ಅವರು ತಿಳಿಸಿದ್ದಾರೆ.

2008ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, 2011ರಲ್ಲಿ ತಮ್ಮ ಮೊದಲ ವಿಶ್ವಕಪ್ ಟೂರ್ನಿಯನ್ನು ಆಡಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿಶ್ವಕಪ್‌ ಟೂರ್ನಿಗೆ ಸ್ಮರಣೀಯ ಆರಂಭ ಪಡೆದಿದ್ದರು. 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ 49 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಗೌತಮ್ ಗಂಭೀರ್ ಅವರೊಂದಿಗೆ ಮೂರನೇ ವಿಕೆಟ್‌ಗೆ 83 ರನ್‌ಗಳ ಮಹತ್ವದ ಜೊತೆಯಾಟ ನೀಡಿದ್ದರು. ಅಂತಿಮವಾಗಿ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.

IND vs WI 1st ODI: ನಮನ್‌ ಧೀರ್‌ಗೆ ಚೊಚ್ಚಲ ಅವಕಾಶ? ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

2015ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಹಿರಿಯ ಆಟಗಾರರಾಗಿದ್ದ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಿದ್ದರು. ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಭಾರತ ತಂಡ ಟೂರ್ನಿಯಿಂದ ಹೊರಬಿದ್ದಿತ್ತು.

2019ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಸೆಮಿಫೈನಲ್‌ವರೆಗೆ ಮುನ್ನಡೆಸಿದ್ದರು. ಆ ಟೂರ್ನಿಯಲ್ಲಿ ಸೆಮಿಫೈನಲ್‌ಗೂ ಮುನ್ನ ಕೊಹ್ಲಿ ಸತತ ಐದು ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.