ರಾಯ್ಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಇತಿಹಾಸ ಬರೆದಿದ್ದಾರೆ. ಅವರು ಇಲ್ಲಿನ ಶಾಹೀದ್ ವೀರ್ ನಾರಾಯಣ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ (RCB vs KKR) ಕಣಕ್ಕೆ ಇಳಿದ ತಕ್ಷಣ ಅವರು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಆರ್‌ಸಿಬಿ ತಂಡ ತನ್ನ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ಮಾಡಿಕೊಂಡಿದೆ. ರೊಮ್ಯಾರಿಯೊ ಶೆಫರ್ಡ್ ಸ್ಥಾನಕ್ಕೆ ವೆಂಕಟೇಶ ಅಯ್ಯರ್ ಬಂದಿದ್ದರೆ, ಸ್ಪಿನ್ನರ್ ಸುಯಾಶ್ ಶರ್ಮಾ ಸ್ಥಾನಕ್ಕೆ ಜೇಕಬ್ ಡಫಿ ಪ್ಲೇಯಿಂಗ್ XIಗೆ ಮರಳಿದ್ದಾರೆ.
ಈ ಪಂದ್ಯವು ವಿರಾಟ್ ಕೊಹ್ಲಿ ಅವರ ಐಪಿಎಲ್ ವೃತ್ತಿಜೀವನದ 279ನೇ ಪಂದ್ಯವಾಗಿದ್ದು, ಇದರೊಂದಿಗೆ ಅವರು ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅವರು ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಜೊತೆಗೆ ಹಂಚಿಕೊಂಡಿದ್ದ ದಾಖಲೆಯನ್ನು ಮುರಿದಿದ್ದಾರೆ.
RCB vs KKR: ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು 2025ರ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ತಮ್ಮ 278ನೇ ಪಂದ್ಯವನ್ನು ಆಡಿದ್ದರು. ಇನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೇ 10ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಒಟ್ಟಿಗೆ 278 ಪಂದ್ಯಗಳ ಮೈಲುಗಲ್ಲು ತಲುಪಿದ್ದರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರು
ವಿರಾಟ್ ಕೊಹ್ಲಿ: 279 ಪಂದ್ಯಗಳು- ರಾಯಲ್ ಚಾಲೆಂಜರ್ಸ್ ಬೆಂಗಳೂರು
ಎಂಎಸ್ ಧೋನಿ: 278 ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜಯಂಟ್ಸ್
ರೋಹಿತ್ ಶರ್ಮಾ: 278 ಪಂದ್ಯಗಳು- ಡೆಕನ್ ಚಾರ್ಜರ್ಸ್, ಮುಂಬೈ ಇಂಡಿಯನ್ಸ್
ರವೀಂದ್ರ ಜಡೇಜಾ: 265 ಪಂದ್ಯಗಳು- ರಾಜಸ್ಥಾನ್ ರಾಯಲ್ಸ್, ಕೊಚ್ಚಿ ಟಸ್ಕರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್
ದಿನೇಶ್ ಕಾರ್ತಿಕ್: 257 ಪಂದ್ಯಗಳು- ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್
ಶಿಖರ್ ಧವನ್: 222 ಪಂದ್ಯಗಳು- ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್, ಡೆಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್
ಆರ್ ಅಶ್ವಿನ್: 221 ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜಯಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ: 208 ಪಂದ್ಯಗಳು-ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ ಜಯಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್
ಸುರೇಶ್ ರೈನಾ: 205 ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್
ರಾಬಿನ್ ಉತ್ತಪ್ಪ: 205 ಪಂದ್ಯಗಳು- ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್ ಇಂಡಿಯಾ, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್ ಇತಿಹಾಸದಲ್ಲಿ ಏಕೈಕ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಕೂಡ ಆರ್‌ಸಿಬಿ ದಿಗ್ಗಜನ ಹೆಸರಿನಲ್ಲಿದೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ 250 ಪಂದ್ಯಗಳನ್ನು ಆಡಿದ್ದಾರೆ. ಎರಡನೇ ಸ್ಥಾನದಲ್ಲಿ ಎಂಎಸ್ ಧೋನಿ (ಸಿಎಸ್‌ಕೆ ಪರ 248 ಪಂದ್ಯಗಳು) ಇದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್ ಪರ 232 ಪಂದ್ಯಗಳು) ಇದಾರೆ.