ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ವಾರ್ಷಿಕ ಸಂಬಳಕ್ಕೆ ಕಡಿವಾಣ ಹಾಕಲಿರುವ ಬಿಸಿಸಿಐ?

ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇಬ್ಬರೂ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗಳಿಗೆ ಈಗಾಗಲೇ ವಿದಾಯ ಹೇಳಿದ್ದಾರೆ ಹಾಗೂ ಸದ್ಯ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸಲುವಾಗಿ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಅಂದ ಹಾಗೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಹಿಂಬಡ್ತಿ ಪಡೆಯಲಿದ್ದಾರೆಂದು ಹೇಳಲಾಗುತ್ತಿದೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಶಾಕ್‌ ನೀಡಲಿರುವ ಬಿಸಿಸಿಐ!

ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಹಿಂಬಡ್ತಿ ಪಡೆಯಲಿರುವ ಕೊಹ್ಲಿ, ರೋಹಿತ್‌. -

Profile
Ramesh Kote Jan 20, 2026 3:34 PM

ನವದೆಹಲಿ: ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ಇಬ್ಬರೂ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (BCCI) 2025-26ರ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಹಿಂಬಡ್ತಿ ಪಡೆಯಲಿದ್ದಾರೆಂದು ಹೇಳಲಾಗುತ್ತಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ನಾಲ್ಕು ಹಂತದ ವಾರ್ಷಿಕ ರಿಟೈನ್‌ಷಿಪ್‌ ಸಿಸ್ಟಮ್‌ನಿಂದ ಎ-ಪ್ಲಸ್ ವರ್ಗವನ್ನು ತೆಗೆದುಹಾಕಲು ಸೂಚಿಸಿದೆ ಎಂದು ಇಂಡಿಯಾ ಟುಡೇಗೆ ತಿಳಿದುಬಂದಿದೆ. ಹಾಗಾಗಿ ಬಿಸಿಸಿಐ ಭಾರತ ಹಿರಿಯ ತಂಡದ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪರಿಷ್ಕರಿಸುವುದು ಬಾಕಿ ಇದೆ. ಬಿಸಿಸಿಐ ಆಯ್ಕೆ ಸಮಿತಿಯ ಪ್ರಸ್ತಾಪವನ್ನು ಬಿಸಿಸಿಐನ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು.

ಪ್ರಸ್ತುತ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಒಟ್ಟು ನಾಲ್ಕು ವಿಭಾಗಗಳಿವೆ. ಎ+, ಎ, ಬಿ ಮತ್ತು ಸಿ ವಿಭಾಗಗಳಿದ್ದು, ಕ್ರಮವಾಗಿ ಈ ಗುಂಪಿನಲ್ಲಿ ಆಟಗಾರರು 7 ಕೋಟಿ ರು, 5 ಕೋಟಿ ರು, 3 ಕೋಟಿ ರು ಹಾಗೂ ಒಂದು ಕೋಟಿ ರು. ಗಳನ್ನು ಪಡೆಯಲಿದ್ದಾರೆ. ಈ ನಾಲ್ಕೂ ವಿಭಾಗಗಳಲ್ಲಿ ಸ್ಥಾನ ಪಡೆದ ಆಟಗಾರರು, ವರ್ಷಪೂರ್ತಿ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಪ್ರವೇಶ ಮತ್ತು ಗಾಯಗಳು ಮತ್ತು ಪುನಶ್ಚೇತನ ಸೇರಿದಂತೆ ವೈದ್ಯಕೀಯ ಬೆಂಬಲದಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ.

ಏಕದಿನ ವಿಶ್ವಕಪ್‌ ಸನಿಹವಾಗುತ್ತದೆ ಏನು ಮಾಡುತ್ತಿದ್ದೀರಿ? ಗೌತಮ್‌ ಗಂಭೀರ್‌ಗೆ ಅಜಿಂಕ್ಯ ರಹಾನೆ ಪ್ರಶ್ನೆ!

ಸದ್ಯ ಎ+ ವಿಭಾಗದಲ್ಲಿ ವಿರಾಟ್‌ ಕೊಹ್ಲಿ,ರೋಹಿತ್‌ ಶರ್ಮಾ ಇದ್ದಾರೆ. ಆದರೆ, ಬಿಸಿಸಿಐ ಪರಿಷ್ಕರಿಸಿದ ಗುತ್ತಿಗೆ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಎ+ನಿಂದ ಬಿ ಪಟ್ಟಿಗೆ ಇಳಿಯಲಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ. ಏಕೆಂದರೆ ಈ ಗುಂಪಿನಲ್ಲಿ ಮುಂದುವರಿಯಬೇಕಾದರೆ ಭಾರತ ತಂಡದಲ್ಲಿ ಎಲ್ಲಾ ಸ್ವರೂಪದಲ್ಲಿಯೂ ಆಡಬೇಕಾಗುತ್ತದೆ. ಕೊಹ್ಲಿ, ರೋಹಿತ್‌ ಜೊತೆಗೆ ರವೀಂದ್ರ ಜಡೇಜಾ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರು ಕೂಡ 2024-25ರ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದರು.

ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದ ಏಕದಿನ ಸರಣಿಯನ್ನು ಸೋಲಲು ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಕ್ಕೂ ಮುನ್ನ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಈ ಇಬ್ಬರೂ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೂ ಗುಡ್‌ಬೈ ಹೇಳಿದ್ದರು. ಇದಿಗ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ರವೀಂದ್ರ ಜಡೇಜಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿದರೆ, ಅವರು ಎ+ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಮತೊಂದು ಕಡೆ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಎ+ ದರ್ಜೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಪ್ರಸ್ತುತ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರ ವಿವರ

ಎ+: 7 ಕೋಟಿ ರು.-ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ

ಎ: 5 ಕೋಟಿ ರು- ಮೊಹಮ್ಮದ್‌ ಸಿರಾಜ್‌, ಕೆಎಲ್‌ ರಾಹುಲ್‌, ಶುಭಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯ, ಮೊಹಮ್ಮದ್‌ ಶಮಿ, ರಿಷಭ್‌ ಪಂತ್‌

ಬಿ: 3 ಕೋಟಿ ರು.-ಸೂರ್ಯಕುಮಾರ್‌ ಯಾದವ್‌, ಕುಲ್ದೀಪ ಯಾದವ್‌, ಅಕ್ಷರ್‌ ಪಟೇಲ್‌, ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್‌

ಸಿ: ಒಂದು ಕೋಟಿ ರು- ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿಧ್‌ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಝ್‌ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್‌ ದೀಪ್‌, ವರುಣ್‌ ಚಕ್ರವರ್ತಿ, ಹರ್ಷಿತ್‌ ರಾಣಾ