ನವದೆಹಲಿ: ಆಧುನಿಕ ಕ್ರಿಕೆಟ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ ನಿವೃತ್ತಿಯಿಂದ ಹೊರಬರಬೇಕೆಂದು ಮಾಜಿ ಆರಂಭಿಕ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಆಗ್ರಹಿಸಿದ್ದಾರೆ. 2025ರ ಮೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(IPL 2026) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಾಗ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇದಕ್ಕೂ ಮುನ್ನ ರೋಹಿತ್ ಶರ್ಮಾ ಟೆಸ್ಟ್‌ಗೆ ಗುಡ್‌ಬೈ ಹೇಳಿದ್ದರು. ಇದೀಗ ಉತ್ತಪ್ಪ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿಗೆ ಟೆಸ್ಟ್ ವಿದಾಯದಿಂದ ಹೊರಬರಬೇಕೆಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅಂದರೆ 2024ರಲ್ಲಿಯೇ ವಿರಾಟ್ ಕೊಹ್ಲಿ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆಡುವ ಸಲುವಾಗಿ ವಿರಾಟ್ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಸತತ ಶತಕಗಳನ್ನು ಬಾರಿಸಿದ್ದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದರ ಜೊತೆಗೆ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು ಒಂದು ಶತಕವನ್ನು ಬಾರಿಸಿದ್ದರು.
ಗಿಲ್ ಇನ್, ಪಂತ್ ಔಟ್; ನ್ಯೂಜಿಲೆಂಡ್ ಎದುರು ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ನಿಮಿತ್ತ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಇದರ ಫೋಟೋಗಳನ್ನು ವಿರಾಟ್ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ. "ಅವರ ಕಣ್ಣುಗಳು ನಿಮಗೆ ಒಂದು ಕಥೆಯನ್ನು ಹೇಳುತ್ತವೆ. ಖಂಡಿತವಾಗಿಯೂ ಅವರ ಟೆಸ್ಟ್ ನಿವೃತ್ತಿಯನ್ನು ರದ್ದುಗೊಳಿಸುವ ಸಮಯ ಬಂದಿದೆ," ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನವನ್ನು ಅಂತ್ಯಗೊಳಿಸುವುದಕ್ಕೂ ಮುನ್ನ ಆಸ್ಟ್ರೇಲಿಯಾ ಎದುರು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡಿದ್ದರು. ಅದರಂತೆ ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕವನ್ನು ಬಾರಿಸಿದ್ದರು. ನಂತರ ಮುಂದಿನ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ವಿಫಲರಾದರು. ಅಂತಿಮವಾಗಿ ಭಾರತ ತಂಡ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. 2025ರ ಜನವರಿಯಲ್ಲಿ ಭಾರತ ಟೆಸ್ಟ್ ತಂಡದ ಪ್ರದರ್ಶನದ ಬಗ್ಗೆ ಬಿಸಿಸಿಐ ಬೇಸರ ವ್ಯಕ್ತಪಡಿಸಿತ್ತು. ನಂತರ ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಕೂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕೆಂಬ ನಿಯಮವನ್ನು ತರಲಾಗಿತ್ತು.
ಹೊಸ ವರ್ಷದ ಅಚ್ಚರಿ? 3 ವರ್ಷಗಳ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಅಭ್ಯಾಸದ ಫೋಟೋಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ
ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕನಾಗಿ ವಿರಾಟ್ ಕೊಹ್ಲಿ ದೀರ್ಘಾವಧಿ ಸ್ವರೂಪಕ್ಕೆ ಗುಡ್‌ಬೈ ಹೇಳಿದ್ದರು. ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಆಡಿದ 123 ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9,230 ರನ್‌ಗಳನ್ನು ಕಲೆ ಹಾಕಿದ್ದಾರೆ.
ನೈಸರ್ಗಿಕ ನಿರ್ಗಮನದಂತೆ ಕಾಣುತ್ತಿಲ್ಲ
"ಇದು ಬಲವಂತದ ಶರಣಾಗತಿಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಅದು ಖಂಡಿತವಾಗಿಯೂ ನೈಸರ್ಗಿಕ ನಿರ್ಗಮನದಂತೆ ಕಾಣಲಿಲ್ಲ. ಸತ್ಯವೇನೆಂದರೆ, ಅವರು ತಮ್ಮದೇ ಆದ ಸಮಯದಲ್ಲಿ ಇದನ್ನು ಬಹಿರಂಗಪಡಿಸಬೇಕಾಗುತ್ತದೆ. ಆದರೆ ಅದು ಸ್ವಾಭಾವಿಕ ಎಂದು ನಾನು ಭಾವಿಸುವುದಿಲ್ಲ," ಎಂದು ರಾಬಿನ್ ಉತ್ತಪ್ಪ ತಮ್ಮ ಯೂಟ್ಯೂಬ್ ಚಾನೆಲ್‌ನ ಹಿಂದಿನ ವೀಡಿಯೊದಲ್ಲಿ ಹೇಳಿದ್ದರು.
"ಆಸ್ಟ್ರೇಲಿಯಾದಲ್ಲಿ ರೋಹಿತ್ ರನ್ ಗಳಿಸದೇ ಇದ್ದಾಗ, ಅವರು ಆರು ತಿಂಗಳು ವಿರಾಮ ತೆಗೆದುಕೊಂಡು ತಮ್ಮ ಫಿಟ್ನೆಸ್ ಹೆಚ್ಚಿಸಿಕೊಳ್ಳಬೇಕು ಎಂದು ನಾನು ಭಾವಿಸಿದೆ. ಅವರು ರನ್ ಗಳಿಸುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿರಲಿಲ್ಲ," ಎಂದು ಅವರು ತಿಳಿಸಿದರು.