ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಸತತ ಎರಡು ಪಂದ್ಯಗಳಲ್ಲಿ (IND vs AUS) ಡಕ್‌ಔಟ್ ಆಗಿದ್ದ ವೇಳೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಮುಗಿಯಿತು ಎಂದು ಹಲವರು ಭಾವಿಸಿದ್ದರು. ಆದರೆ, ಅವರು ನಂತರದ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ತಮ್ಮ ಸಾಮರ್ಥ್ಯವೇನೆಂದು ಸಾಬೀತುಪಡಿಸಿದ್ದಾರೆ. ಆ ಮೂಲಕ ತಮ್ಮ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ವಿಕೆಟ್ ಕೀಪರ್ ಶ್ರೀವತ್ಸ ಗೋಸ್ವಾಮಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ವಿರಾಟ್ ಕೊಹ್ಲಿ ರನ್ ಹೊಳೆ ಹರಿಸಿದ್ದರು, ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಅವರು ಆಂಧ್ರ ವಿರುದ್ಧದ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 101 ಎಸೆತಗಳಲ್ಲಿ 131 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ 299 ರನ್‌ಗಳ ಗುರಿಯನ್ನು ದೆಹಲಿ ತಂಡ 38 ಓವರ್‌ಗಳಿಗೆ ಚೇಸ್ ಮಾಡಿ ಗೆದ್ದಿತ್ತು. ಇದರೊಂದಿಗೆ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
50 ಓವರ್‌ಗಳ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಕಳೆದ ಐದು ಇನಿಂಗ್ಸ್‌ಗಳಿಂದ ಮೂರು ಶತಕಗಳು ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕಗಳು ಹಾಗೂ ಒಂದು ಅರ್ಧಶತಕವನ್ನು ಸಿಡಿಸಿದ್ದರು. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಸತತ ಶೂನ್ಯಕ್ಕೆ ಔಟಾದ ನಂತರ ಅವರು ತಮ್ಮ ಲಯಕ್ಕೆ ಮರಳಿದ್ದಾರೆ.
Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್ ಕೊಹ್ಲಿ, 131 ರನ್ ಚಚ್ಚಿದ ರನ್ ಮಷೀನ್!
ಬುಧವಾರ ಮಧ್ಯಾಹ್ನ ವಿರಾಟ್ ಕೊಹ್ಲಿ ಆಂಧ್ರ ವಿರುದ್ಧದ ಶತಕ ಬಾರಿಸಿದ ಬಳಿಕ ಆರ್‌ಸಿಬಿ ಮಾಜಿ ವಿಕೆಟ್ ಕೀಪರ್ ಶ್ರೀವತ್ಸ ಗೋಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ, "ಆಸ್ಟ್ರೇಲಿಯಾದಲ್ಲಿ ಸತತ ಎರಡು ಡಕ್‌ಔಟ್ ಆದ ಬಳಿಕ, ವಿರಾಟ್ ಕೊಹ್ಲಿಯ ವೃತ್ತಿ ಜೀವನ ಬಹುತೇಕ ಮುಗಿದಂತೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈಗ ಅವರು ಬ್ಯಾಟಿಂಗ್ ಕ್ಲಾಸ್ ಏನೆಂದು ತೋರಿಸಿದ್ದಾರೆ," ಎಂದು ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.
ಆಂಧ್ರ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಬೆಂಬಲ ನೀಡಿದ್ದ ನಿತೀಶ್ ರಾಣಾ ಅವರು 55 ಎಸೆತಗಳಲ್ಲಿ 77 ರನ್‌ಗಳನ್ನು ಬಾರಿಸಿದ್ದರು ಹಾಗೂ ಪ್ರಿಯಾಂಶ್ ಆರ್ಯ 44 ಎಸೆತಗಳಲ್ಲಿ 74 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ 38ನೇ ಓವರ್‌ನಲ್ಲಿ ದೆಹಲಿ ತಂಡ 299 ರನ್‌ಗಳನ್ನು ಚೇಸ್ ಮಾಡಿ ಗೆದ್ದಿತ್ತು.
ರೋಹಿತ್ ಶರ್ಮಾ ಶತಕ ಸಿಡಿಸಿದ ಬೆನ್ನಲ್ಲೆ ಗೌತಮ್ ಗಂಭೀರ್‌ರನ್ನು ಕೆಣಕಿದ ಫ್ಯಾನ್ಸ್!
ಇದಕ್ಕೂ ಮುನ್ನ ರಿಕಿ ಭುಯಿ ಅವರ (122 ರನ್, 105 ಎಸೆತಗಳು) ಶತಕದ ಬಲದಿಂದ ಆಂಧ್ರ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ದೆಹಲಿ ತಂಡಕ್ಕೆ 299 ರನ್‌ಗಳ ಗುರಿಯನ್ನು ನೀಡಿತ್ತು.