ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಲಭ್ಯವಿರುವ ಸಂದರ್ಭದಲ್ಲಿ ದೆಹಲಿ ಪರ ದೇಶಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಅಧ್ಯಕ್ಷ ರೋಹನ್ ಜೇಟ್ಲಿ (Rohan Jaitley) ಸ್ಪಷ್ಟಪಡಿಸಿದ್ದಾರೆ. ಭಾರತದ ಮಾಜಿ ನಾಯಕ ಕೊಹ್ಲಿ, ತಮ್ಮ ತವರು ಕ್ರಿಕೆಟ್ ಸಂಸ್ಥೆಯ ಮುಂದಿನ ಯೋಜನೆಗಳಲ್ಲೂ ಪ್ರಮುಖ ಭಾಗವಾಗಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದಾರೆ. ಸದ್ಯ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿರುವ ಕೊಹ್ಲಿ, 2026-27ರ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮತ್ತೆ ದೆಹಲಿ ತಂಡವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ. ಈ ಟೂರ್ನಿ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ.
ವಿರಾಟ್ ಕೊಹ್ಲಿ ಸೆಪ್ಟೆಂಬರ್ 27ರಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಬಳಿಕ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ, ಅಲ್ಲಿ ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತವರಿನಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಹೀಗಾಗಿ ಈ ನಿರಂತರ ಏಕದಿನ ವೇಳಾಪಟ್ಟಿಯ ನಡುವೆ ಕೊಹ್ಲಿಗೆ ದೇಶಿ ಕ್ರಿಕೆಟ್ ಆಡಲು ಲಭ್ಯವಾಗುವ ಸಮಯ ಮಹತ್ವ ಪಡೆದುಕೊಂಡಿದೆ.
Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!
13 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಮರಳಿದ್ದ ಕೊಹ್ಲಿ
2025ರಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ದೆಹಲಿ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಕೆಲ ತಿಂಗಳ ಮುನ್ನ ಅವರು ಈ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಅದೇ ವರ್ಷದ ಬಳಿಕ ಕೊಹ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲೂ ದೆಹಲಿ ಪರ ಎರಡು ಪಂದ್ಯಗಳನ್ನು ಆಡಿದ್ದರು. ಇದೀಗ 2026-27ರ ವಿಜಯ್ ಹಝಾರೆ ಟ್ರೋಫಿಯಲ್ಲೂ ಲಭ್ಯತೆ ಆಧರಿಸಿ ದೆಹಲಿ ತಂಡಕ್ಕೆ ಕೊಹ್ಲಿ ಮರಳುವ ನಿರೀಕ್ಷೆಯಿದೆ.
ಡಿಡಿಸಿಎ ವಾರ್ಷಿಕ ಕ್ಲಬ್ ಕ್ರಿಕೆಟಿಗರ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ಮಾತನಾಡಿದ ಅಧ್ಯಕ್ಷ ರೋಹನ್ ಜೇಟ್ಲಿ, ದೆಹಲಿಯ ತಳಮಟ್ಟದ ಕ್ರಿಕೆಟ್ ಅಭಿವೃದ್ಧಿ, ಹೊಸ ವಿಶ್ವದರ್ಜೆಯ ಕ್ರೀಡಾಂಗಣ ನಿರ್ಮಾಣದ ಯೋಜನೆಗಳು, ಮಹಿಳಾ ಕ್ರಿಕೆಟ್‌ನ ಬೆಳವಣಿಗೆ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಡಿಡಿಸಿಎಯ ಮಹತ್ವಾಕಾಂಕ್ಷೆಗಳ ಕುರಿತು ಮಾತನಾಡಿದರು.
ಡಿಡಿಸಿಎ ಗುರುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ 2025-26ರ ಋತುವಿಗಾಗಿ ವಿವಿಧ ವಿಭಾಗಗಳಲ್ಲಿನ ಬಹುಮಾನ ಮೊತ್ತವನ್ನು ಶೇ.10ರಷ್ಟು ಹೆಚ್ಚಿಸಲಾಗಿದ್ದು, ಒಟ್ಟು ₹1.43 ಕೋಟಿ ಬಹುಮಾನ ಮೊತ್ತವನ್ನು ವಿತರಿಸಲಾಯಿತು.
ಡಿಆರ್‌ಎಸ್ ಶ್ರೇಯ ನಿಮಗೆ ಸಿಕ್ಕಿದೆ ಎಂದ ಇಶಾನ್ ಕಿಶನ್‌ಗೆ ತಿರುಗೇಟು ನೀಡಿದ ವೈಭವ್ ಸೂರ್ಯವಂಶಿ!
ದೆಹಲಿಯಲ್ಲಿ ತಳಮಟ್ಟದ ಕ್ರಿಕೆಟ್‌ಗೆ ಮತ್ತಷ್ಟು ಉತ್ತೇಜನ ನೀಡುವುದು, ಮಹಿಳಾ ಕ್ರಿಕೆಟ್‌ಗೆ ಅಗತ್ಯ ಬೆಂಬಲ ಒದಗಿಸುವುದು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ವಿಶ್ವದರ್ಜೆಯ ಕ್ರೀಡಾಂಗಣ ನಿರ್ಮಿಸುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಜೇಟ್ಲಿ ವಿವರಿಸಿದರು. ದೇಶಿ ಕ್ರಿಕೆಟ್‌ನಲ್ಲಿ ದೆಹಲಿ ತಂಡವನ್ನು ಮತ್ತೆ ಅಗ್ರಸ್ಥಾನಕ್ಕೆ ಕೊಂಡೊಯ್ಯುವುದು ಡಿಡಿಸಿಎಯ ಪ್ರಮುಖ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.
ಲಭ್ಯವಿದ್ದಾಗ ಖಂಡಿತಾ ದೆಹಲಿ ಪರ ಕೊಹ್ಲಿ ಆಡಲಿದ್ದಾರೆ: ರೋಹನ್ ಜೇಟ್ಲಿ
ಪ್ರಸಕ್ತ ದೇಶಿ ಕ್ರಿಕೆಟ್ ಋತುವಿನಲ್ಲಿ ವಿರಾಟ್ ಕೊಹ್ಲಿ ಆಡುತ್ತಿರುವುದನ್ನು ನೋಡಬಹುದೇ? ಅವರನ್ನು ದೆಹಲಿ ತಂಡಕ್ಕೆ ಸೇರಿಸಿಕೊಳ್ಳಲು ಡಿಡಿಸಿಎ ಸಿದ್ಧವಿದೆಯೇ? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, "ಇದು ಅವರ ತವರು ಕ್ರಿಕೆಟ್ ಸಂಸ್ಥೆ. ಅವರನ್ನು ಸೇರಿಸಿಕೊಳ್ಳಲು ನಾವು ಸಿದ್ಧವಿದ್ದೇವೆಯೇ ಎಂಬ ಪ್ರಶ್ನೆಯೇ ಇಲ್ಲ. ಈ ರಾಜ್ಯ ಎಷ್ಟು ನನ್ನದೋ, ಅಷ್ಟೇ ವಿರಾಟ್ ಕೊಹ್ಲಿಯದ್ದೂ ಹೌದು," ಎಂದರು.
"ರಾಜ್ಯ ತಂಡದ ಪರ ಆಡುವ ಅವರ ಬದ್ಧತೆ ಅತ್ಯುತ್ತಮವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಜವಾಬ್ದಾರಿಗಳು ಹಾಗೂ ಅವರ ಕೆಲಸದ ಹೊರೆ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು, ಯಾವಾಗ ಲಭ್ಯರಾಗುತ್ತಾರೋ ಆಗ ಅವರು ಖಂಡಿತವಾಗಿಯೂ ಮತ್ತೆ ದೆಹಲಿ ಪರ ಆಡಲಿದ್ದಾರೆ," ಎಂದು ರೋಹನ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.