ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Virat Kohli' s Birthday: 38ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವಿರಾಟ್‌ ಕೊಹ್ಲಿಯ 38 ಐತಿಹಾಸಿಕ ದಾಖಲೆಗಳು!

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂಡರ್-19 ವಿಶ್ವಕಪ್ ಗೆಲುವಿನಿಂದ ಆರಂಭವಾದ ಅವರ ಪಯಣ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹಲವು ಐತಿಹಾಸಿಕ ದಾಖಲೆಗಳವರೆಗೆ ಸಾಗಿದೆ. ಏಕದಿನ ಶತಕಗಳು, ರನ್ ಚೇಸಿಂಗ್ ಹಾಗೂ ನಾಯಕತ್ವದ ಸಾಧನೆಗಳು ಅವರ ವೃತ್ತಿಜೀವನದ ಹೆಗ್ಗುರುತುಗಳಾಗಿವೆ.

38ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವಿರಾಟ್‌ ಕೊಹ್ಲಿಯ 38 ಐತಿಹಾಸಿಕ ದಾಖಲೆಗಳು!

ನವದೆಹಲಿ: ಆಧುನಿಕ ಕ್ರಿಕೆಟ್‌ನ ದಿಗ್ಗಜ ಆಟಗಾರ, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಇಂದು (ನವೆಂಬರ್ 5) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಗಮನ ಸೆಳೆದಿದ್ದ ಕೊಹ್ಲಿ, ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿದ್ದಾರೆ.

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, ತಮ್ಮ ಆಕ್ರಮಣಕಾರಿ ಆಟ, ರನ್ ಗಳಿಸುವ ಹಸಿವು, ಫಿಟ್ನೆಸ್ ಹಾಗೂ ಸ್ಥಿರ ಪ್ರದರ್ಶನದ ಮೂಲಕ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಹಿಂದಿಕ್ಕಿರುವ ಅವರು, ಅಭಿಮಾನಿಗಳ ಪಾಲಿಗೆ 'ಕಿಂಗ್ ಕೊಹ್ಲಿ' ಎಂದೇ ಪ್ರಸಿದ್ಧರಾಗಿದ್ದಾರೆ.

38ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಕ್ರಿಕೆಟ್ ಬದುಕಿನ 38 ಪ್ರಮುಖ ದಾಖಲೆಗಳು ಮತ್ತು ಸಾಧನೆಗಳನ್ನು ಮೆಲುಕು ಹಾಕೋಣ.

ವಿರಾಟ್‌ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐವರು ಒಡಿಐ ಕ್ರಿಕೆಟಿಗರನ್ನು ಆರಿಸಿದ ಎಸ್‌ ಬದ್ರಿನಾಥ್‌!

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ 38 ಐತಿಹಾಸಿಕ ದಾಖಲೆಗಳು

ದೇಶಿ ಕ್ರಿಕೆಟ್ ಮತ್ತು ಅಂಡರ್-19 ಸಾಧನೆಗಳು

1.ಅಂಡರ್-19 ವಿಶ್ವಕಪ್ ಚಾಂಪಿಯನ್: 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿ ಪ್ರಶಸ್ತಿ ಗೆದ್ದರು.

2.ಅಂಡರ್-19 ವಿಶ್ವಕಪ್ ರನ್: 2008ರ ಟೂರ್ನಿಯಲ್ಲಿ ಆರು ಪಂದ್ಯಗಳಿಂದ 235 ರನ್ ಗಳಿಸಿ ಮೂರನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು.

3.ರಣಜಿ ಟ್ರೋಫಿ: 2006-07ರ ಮೊದಲ ಪೂರ್ಣ ಪ್ರಮಾಣದ ರಣಜಿ ಋತುವಿನಲ್ಲಿ ದೆಹಲಿ ಪರ 257 ರನ್ ಗಳಿಸಿದರು.

4.ವಿಜಯ್ ಹಝಾರೆ ಟ್ರೋಫಿ: 2008-09ರ ಋತುವಿನಲ್ಲಿ ಏಳು ಇನಿಂಗ್ಸ್‌ಗಳಿಂದ 534 ರನ್ ಗಳಿಸಿ, ನಾಲ್ಕು ಶತಕ ಸಿಡಿಸಿದರು.

5.ಯುವ ಕ್ರಿಕೆಟ್ ದಾಖಲೆ: ಭಾರತ ಪರ 40 ಯುವ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಒಟ್ಟು 1,910 ರನ್ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ದಾಖಲೆಗಳು

6.ಅತಿ ಹೆಚ್ಚು ದ್ವಿಶತಕ: ಟೆಸ್ಟ್ ನಾಯಕನಾಗಿ ಏಳು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಆಟಗಾರ.

7.ನಾಯಕನಾಗಿ ರನ್ ದಾಖಲೆ: 68 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿ 5,864 ರನ್ ಗಳಿಸಿದ್ದಾರೆ.

8.ಭಾರತದ ಯಶಸ್ವಿ ಟೆಸ್ಟ್ ನಾಯಕ: ನಾಯಕನಾಗಿ 68 ಪಂದ್ಯಗಳಲ್ಲಿ 40 ಗೆಲುವು ದಾಖಲಿಸಿದ್ದಾರೆ.

9.ತವರಿನಲ್ಲಿ ಸರಣಿ ಗೆಲುವು: ಭಾರತದ ನಾಯಕನಾಗಿ ತವರಿನಲ್ಲಿ ಆಡಿದ ಎಲ್ಲಾ 11 ಟೆಸ್ಟ್ ಸರಣಿಗಳನ್ನು ಗೆದ್ದಿದ್ದಾರೆ.

10.ತವರಿನಲ್ಲಿ ಬ್ಯಾಟಿಂಗ್ ಸರಾಸರಿ: ನಾಯಕತ್ವದ ಅವಧಿಯಲ್ಲಿ ತವರಿನಲ್ಲಿ 30 ಟೆಸ್ಟ್‌ಗಳಿಂದ 2,871 ರನ್ ಗಳಿಸಿ 70.02 ಸರಾಸರಿ ಹೊಂದಿದ್ದರು.

11.SENA ದೇಶಗಳಲ್ಲಿ ಶತಕ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಒಟ್ಟು 12 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.

12.ಆಸ್ಟ್ರೇಲಿಯಾದಲ್ಲಿ ಶತಕ: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳು ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟರ್‌ಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

13.ಎರಡನೇ ಇನಿಂಗ್ಸ್‌ನಲ್ಲಿ ದಾಖಲೆ: ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 3,151 ರನ್ ಗಳಿಸಿ 61.78ರ ಸರಾಸರಿ ಹೊಂದಿದ್ದಾರೆ

14.ನಾಯಕನಾಗಿ ಮೊದಲ ಸಾಧನೆ: ಟೆಸ್ಟ್ ನಾಯಕನಾಗಿ ತಮ್ಮ ಮೊದಲ ಮೂರು ಇನಿಂಗ್ಸ್‌ಗಳಲ್ಲೇ ಮೂರು ಶತಕಗಳನ್ನು ಗಳಿಸಿದ ಏಕೈಕ ಆಟಗಾರ.



ಏಕದಿನ ಕ್ರಿಕೆಟ್‌ನ ದಾಖಲೆಗಳು

15.ಏಕದಿನದಲ್ಲಿ 50 ಶತಕ: ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ.

16.ಅತಿ ಹೆಚ್ಚು ಶತಕ: ಏಕದಿನ ಕ್ರಿಕೆಟ್‌ನಲ್ಲಿ 55 ಶತಕಗಳನ್ನು ಗಳಿಸಿ ವಿಶ್ವದಾಖಲೆ ಹೊಂದಿದ್ದಾರೆ.

17.ವೇಗವಾಗಿ 15,000 ರನ್: 8,000ರಿಂದ 15,000ರವರೆಗಿನ ಏಕದಿನ ರನ್ ಮೈಲಿಗಲ್ಲುಗಳನ್ನು ಅತಿ ವೇಗವಾಗಿ ತಲುಪಿದ ಆಟಗಾರ.

18.ಅತ್ಯುತ್ತಮ ಸರಾಸರಿ: 100ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಆಟಗಾರರಲ್ಲಿ 58.84ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

19.ಚೇಸಿಂಗ್‌ನಲ್ಲಿ ದಾಖಲೆ: ಏಕದಿನ ರನ್ ಚೇಸಿಂಗ್‌ನಲ್ಲಿ 8,741 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

20. ಯಶಸ್ವಿ ಚೇಸಿಂಗ್: ಗುರಿ ಬೆನ್ನಟ್ಟುವಾಗ ಭಾರತ ಗೆದ್ದ ಪಂದ್ಯಗಳಲ್ಲಿ 6,477 ರನ್ ಗಳಿಸಿದ್ದಾರೆ.

21. ವಿಶ್ವಕಪ್ ಪದಾರ್ಪಣೆಯಲ್ಲೇ ಶತಕ: 2011ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 100 ರನ್ ಗಳಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು.

22. ಒಂದೇ ವಿಶ್ವಕಪ್‌ನಲ್ಲಿ ಗರಿಷ್ಠ ರನ್: 2023ರ ಏಕದಿನ ವಿಶ್ವಕಪ್‌ನಲ್ಲಿ 765 ರನ್ ಗಳಿಸಿ ದಾಖಲೆ ನಿರ್ಮಿಸಿದರು.

23. ಭಾರತದ ವೇಗದ ಏಕದಿನ ಶತಕ: 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೈಪುರದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದರು.

24. ಸತತ ಶತಕಗಳ ದಾಖಲೆ: ಏಕದಿನ ಕ್ರಿಕೆಟ್‌ನಲ್ಲಿ ಎರಡು ಸತತ ಶತಕಗಳನ್ನು 11 ಬಾರಿ ಗಳಿಸಿದ್ದಾರೆ.

25. ಸತತ ಐದು 50+ ಸ್ಕೋರ್: ಐದು ಪ್ರತ್ಯೇಕ ಸಂದರ್ಭಗಳಲ್ಲಿ ಸತತ ಐದು ಏಕದಿನ ಇನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

26. ಗೆಲುವಿನ ಪಂದ್ಯಗಳಲ್ಲಿ ಶತಕ: ಅವರ 55 ಏಕದಿನ ಶತಕಗಳಲ್ಲಿ 45 ಶತಕಗಳು ಭಾರತ ಗೆದ್ದ ಪಂದ್ಯಗಳಲ್ಲಿ ಬಂದಿವೆ.

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ: ಮೂರನೇ ಕ್ರಮಾಂಕದಲ್ಲಿ 13 ಸಾವಿರ ರನ್ ಗಳಿಸಿದ ಮೊದಲ ಬ್ಯಾಟರ್!

ಟಿ20ಐ ಕ್ರಿಕೆಟ್‌ನ ದಾಖಲೆಗಳು

27. ಟಿ20 ವಿಶ್ವಕಪ್ ದಾಖಲೆ: ಟಿ20 ವಿಶ್ವಕಪ್ ಇತಿಹಾಸದಲ್ಲಿ 1,292 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

28. ವೇಗವಾಗಿ 4,000 ರನ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ 107 ಇನಿಂಗ್ಸ್‌ಗಳಲ್ಲಿ 4,000 ರನ್ ಗಳಿಸಿದ ವೇಗದ ಆಟಗಾರ.

29. ಟಿ20ಐ ಸರಾಸರಿ: ಕನಿಷ್ಠ 25 ಇನಿಂಗ್ಸ್ ಆಡಿದ ಆಟಗಾರರಲ್ಲಿ 48.71ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

30. ಮೊದಲ ಎಸೆತದಲ್ಲೇ ವಿಕೆಟ್: 2011ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಎಸೆತದಲ್ಲೇ ಕೆವಿನ್ ಪೀಟರ್ಸನ್ ಅವರ ವಿಕೆಟ್ ಪಡೆದರು.

31. ಟಿ20 ವಿಶ್ವಕಪ್ ಗೆಲುವು: ಕೊಹ್ಲಿ ಅಜೇಯರಾಗಿದ್ದ ಎಂಟು ಪಂದ್ಯಗಳಲ್ಲೂ ಭಾರತ ತಂಡ ಗೆಲುವು ಸಾಧಿಸಿದೆ.

32. ಟಿ20ಐ ಚೇಸಿಂಗ್: ಯಶಸ್ವಿ ಟಿ20 ಅಂತಾರಾಷ್ಟ್ರೀಯ ರನ್ ಚೇಸಿಂಗ್‌ನಲ್ಲಿ 1,561 ರನ್ ಗಳಿಸಿದ್ದಾರೆ.

33. ವೇಗದ ಟಿ20 ಅರ್ಧಶತಕ: 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಇತರ ಪ್ರಮುಖ ಸಾಧನೆಗಳು

34. ಒಂದು ದಶಕದಲ್ಲಿ 20 ಸಾವಿರ ರನ್: 2010ರಿಂದ 2019ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,960 ರನ್ ಗಳಿಸಿದ ಏಕೈಕ ಆಟಗಾರ.

35. ಐಸಿಸಿ ಪ್ರಶಸ್ತಿಗಳು: ತಮ್ಮ ವೃತ್ತಿಜೀವನದಲ್ಲಿ ಒಟ್ಟು 10 ಐಸಿಸಿ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

36. ವಿಶ್ವಕಪ್‌ ಟೂರ್ನಿಗಳಲ್ಲಿ ಮೂರು ಬಾರಿ ಟೂರ್ನಿ ಶ್ರೇಷ್ಠ: 2014 ಮತ್ತು 2016ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್‌ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

37. ಐಸಿಸಿ ಟೂರ್ನಿಗಳಲ್ಲಿ ರನ್ ದಾಖಲೆ: ಐಸಿಸಿ ವೈಟ್‌ಬಾಲ್ ಟೂರ್ನಿಗಳಲ್ಲಿ ಒಟ್ಟು 3,834 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

38. ವಿಶ್ವ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ: ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗದೆ ಹಾಗೂ ಐಪಿಎಲ್ ಪ್ರಶಸ್ತಿ ಗೆದ್ದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.