ನವದೆಹಲಿ: ಪಂಜಾಬ್‌ನ ಮಾಜಿ ಕ್ರಿಕೆಟಿಗ ಅಮನ್‌ಪ್ರೀತ್ ಸಿಂಗ್ ಗಿಲ್ (Amanpreet Singh Gill) ಅವರು ಮೇ 6 ರಂದು ಬುಧವಾರ ತಮ್ಮ 36ನೇ ವಯಸ್ಸಿನಲ್ಲಿ ನಿಧನರಾದರು. ವೇಗದ ಬೌಲರ್ ಆಗಿದ್ದ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ ಆಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದ 2008ರ ಭಾರತ ಅಂಡರ್-19 ತಂಡದ ಭಾಗವಾಗಿದ್ದರು. ಮಾಜಿ ಕ್ರಿಕೆಟಿಗನ ನಿಧನಕ್ಕೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (PCA) ಸಂತಾಪ ಸೂಚಿಸಿದೆ. ಅವರು ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 1989ರ ಸೆಪ್ಟೆಂಬರ್‌ನಲ್ಲಿ ಚಂಡೀಗಢದಲ್ಲಿ ಜನಿಸಿದ ಅಮನ್‌ಪ್ರೀತ್ ಸಿಂಗ್ ಗಿಲ್, 36 ವರ್ಷ 232 ದಿನಗಳ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ ಅನುಭವದ ಜೊತೆಗೆ, ಅವರು ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಅಂಡರ್-19 ತಂಡದ ಸದಸ್ಯರಾಗಿದ್ದರು. ಜೊತೆಗೆ ಪಂಜಾಬ್ ಹಿರಿಯ ಆಯ್ಕೆ ಸಮಿತಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
IPL 2026 Playoffs Scenario: ಆರ್‌ಸಿಬಿ ಸೇರಿದಂತೆ ಎಲ್ಲಾ 10 ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
ಅಮನ್‌ಪ್ರೀತ್ ಸಿಂಗ್‌ಗೆ ಪಂಜಾಬ್ ಕ್ರಿಕೆಟ್ ಸಂಸ್ಥೆ ಸಂತಾಪ
“ಮಾಜಿ ಪಂಜಾಬ್ ಕ್ರಿಕೆಟಿಗ ಹಾಗೂ ಹಿರಿಯ ಆಯ್ಕೆ ಸಮಿತಿ ಸದಸ್ಯ ಅಮನ್‌ಪ್ರೀತ್ ಸಿಂಗ್ ಗಿಲ್ ಅವರ ಅಗಲಿಕೆಗೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಆಳವಾದ ಸಂತಾಪ ಸೂಚಿಸುತ್ತದೆ,” ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿದೆ.
“ಶೋಕಸಂತಪ್ತ ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ನಮ್ಮ ಹೃದಯಪೂರ್ವಕ ಸಂತಾಪಗಳು. ಅಗಲಿದ ಆತ್ಮಕ್ಕೆ ವಹೇಗುರು ಶಾಶ್ವತ ಶಾಂತಿ ನೀಡಲಿ ಹಾಗೂ ಈ ಕಠಿಣ ಸಮಯದಲ್ಲಿ ಕುಟುಂಬಕ್ಕೆ ಧೈರ್ಯವನ್ನು ನೀಡಲಿ,” ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸಂದೇಶದಲ್ಲಿ ತಿಳಿಸಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ತಮ್ಮ ಪ್ರಕಟಣೆಯಲ್ಲಿ ಯಾವುದೇ ಕಾರಣವನ್ನು ಉಲ್ಲೇಖಿಸದ ಹಿನ್ನೆಲೆಯಲ್ಲಿ, ಅಮನ್‌ಪ್ರೀತ್ ಸಿಂಗ್ ಗಿಲ್ ಅವರ ನಿಧನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಅಮನ್‌ಪ್ರೀತ್ ಸಿಂಗ್ ಗಿಲ್ ಅವರ ಕ್ರಿಕೆಟ್ ಪಯಣ
ಅಮನ್‌ಪ್ರೀತ್ ಸಿಂಗ್ ಗಿಲ್ ಅವರು 1989ರ ಸೆಪ್ಟೆಂಬರ್ 16ರಂದು ಜನಿಸಿದ್ದು, ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಬಲಗೈ ಬ್ಯಾಟ್ಸ್‌ಮನ್ ಆಗಿದ್ದರು. ಅವರು ಭಾರತ ಅಂಡರ್-19 ತಂಡ ಹಾಗೂ ಪಂಜಾಬ್ ದೇಶಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಅತ್ಯಂತ ಪ್ರತಿಭಾವಂತ ವೇಗದ ಬೌಲರ್ ಆಗಿದ್ದ ಅಮನ್‌ಪ್ರೀತ್, ಸೌರಭ್ ತಿವಾರಿ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಮೊದಲಾದ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಯೂತ್ ಟೆಸ್ಟ್ ಮತ್ತು ಯೂತ್ ಒಡಿಐ ಪಂದ್ಯಗಳನ್ನು ಹೊರತುಪಡಿಸಿ, ಅವರು ಕೇವಲ ಆರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.
2009ರಲ್ಲಿ ಅವರು ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಇದೀಗ ಪಂಜಾಬ್ ಕಿಂಗ್ಸ್) ತಂಡದ ಒಪ್ಪಂದವನ್ನು ಪಡೆದಿದ್ದರು. 2010ರವರೆಗೆ ತಂಡದ ಭಾಗವಾಗಿದ್ದ ಅವರು, ಯುವರಾಜ್ ಸಿಂಗ್, ಮಹೇಲಾ ಜಯವರ್ಧನೆ ಮತ್ತುಬ್ರೆಟ್ ಲೀ ಸೇರಿದಂತೆ ಅನೇಕ ಶ್ರೇಷ್ಠ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಆದರೆ, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲಿ ಅವರಿಗೆ ಒಂದು ಪಂದ್ಯವನ್ನೂ ಆಡಲು ಅವಕಾಶ ಸಿಗಲಿಲ್ಲ.